Advertisement
ಅದೇರೀತಿ ಆಟೋರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಲೂ ದಿಟ್ಟ ಹೆಜ್ಜೆ ಇಡುವರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವಳಿ ನಗರದಲ್ಲಿ ಪ್ರಯಾಣಿಕರ ಆಟೋ ರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಲು ಹಲವು ವರ್ಷಗಳಿಂದ ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳಿಂದ ಪ್ರಯತ್ನಗಳು ನಡೆಯುತ್ತಲೇ ಇವೆ.
Related Articles
Advertisement
ಪ್ರಿಪೇಡ್ ಕೇಂದ್ರಗಳು ಸ್ಥಗಿತ : ಅವಳಿನಗರದಲ್ಲಿ ಆಟೋ ರಿಕ್ಷಾಗಳಿಗೆ ಮೀಟರ್ ಕಡ್ಡಾಯಗೊಳಿಸಬೇಕೆಂಬ ಬೇಡಿಕೆ-ಒತ್ತಡ ಸಾರ್ವಜನಿಕರಿಂದ ಹೆಚ್ಚಾದಾಗ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ 2008-09ರ ಅವಧಿಯಲ್ಲಿ ಪ್ರಿಪೇಡ್ ಆಟೋ ಕೇಂದ್ರ ಸ್ಥಾಪಿಸಲಾಯಿತು. ಅದು 2-3 ವರ್ಷಗಳ ವರೆಗೆ ಮುಂದುವರಿದುಕೊಂಡು ಬಂತು.
ಆದರೆ ಈ ಕೇಂದ್ರದಲ್ಲಿ ನಡೆದ ಒಂದು ಅಹಿತಕರ ಪ್ರಕರಣದಿಂದ ಅದು ಮುಚ್ಚಿಕೊಂಡಿದ್ದು, ಇಂದಿನ ವರೆಗೂ ತೆರೆದುಕೊಂಡೇ ಇಲ್ಲ. ಅದನ್ನು ತೆರವುಗೊಳಿಸಲಾಗಿದೆ. ಅದೇರೀತಿ ಹಳೆಯ ಬಸ್ ನಿಲ್ದಾಣದಲ್ಲೂ ಪ್ರಿಪೇಡ್ ಆಟೋ ರಿಕ್ಷಾ ಕೇಂದ್ರ ಸ್ಥಾಪಿಸಲಾಗಿತ್ತು. ಅದು 3-4 ತಿಂಗಳ ವರೆಗೆ ಮಾತ್ರ ಕಾರ್ಯನಿರ್ವಹಿಸಿತು. ನಂತರ ಅದು ಪೊಲೀಸರ ಸ್ಟ್ಯಾಂಡ್ ಆಗಿ ಪರಿವರ್ತಿತಗೊಂಡಿತು. ಈಗ ಅದನ್ನೂ ತೆರವುಗೊಳಿಸಲಾಗಿದೆ.
ಮೀಟರ್‌ಗೆ ರಸ್ತೆಯೇ ತೊಡಕು! : ಅವಳಿನಗರದಲ್ಲಿ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಅಲ್ಲದೆ ಇಂಧನ ಬೆಲೆ ದಿನೇ ದಿನೇ ಏರಿಕೆ ಆಗುತ್ತಿದೆ. ಹೀಗಾಗಿ ಆಟೋ ರಿಕ್ಷಾ ಚಾಲಕರಿಗೆ ಈಗಿನ ಬಾಡಿಗೆ ದರ ಹೊಂದುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಆಟೋ ರಿಕ್ಷಾ ಚಾಲಕರ ಸಮಸ್ಯೆ ಅರಿತುಕೊಳ್ಳುತ್ತಿಲ್ಲ. ಅಲ್ಲದೆ ಆಟೋ ರಿಕ್ಷಾ ಚಾಲಕರ ದಶಕಗಳ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಆಟೋ ರಿಕ್ಷಾ ನಿಲ್ದಾಣಗಳನ್ನು ಸ್ಥಾಪಿಸಿಕೊಡುವಂತೆ ಕೋರಿದರೂ ಕ್ಯಾರೆ ಎನ್ನುತ್ತಿಲ್ಲ. ಪಾಲಿಕೆಯವರು ರಸ್ತೆ ದುರಸ್ತಿ ಮಾಡುತ್ತಿಲ್ಲ. ಇವೆಲ್ಲ ಸಮಸ್ಯೆಗಳಿಂದಾಗಿಯೆ ಮೀಟರ್ ಕಡ್ಡಾಯ ಜಾರಿಗೆ ತೊಡಕಾಗುತ್ತಿದೆ. ಜೊತೆಗೆ ಟಂಟಂ ವಾಹನಗಳ ಶಹರ ಸಂಚಾರ ನಿಲ್ಲಿಸಬೇಕೆಂಬುದು ಆಟೋ ರಿಕ್ಷಾ ಸಂಘಟನೆಗಳ ಮುಖಂಡರ ಪ್ರಮುಖ ವಾದ.
ಅವಳಿನಗರದಲ್ಲಿ ಆಟೋ ರಿಕ್ಷಾಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸುತ್ತಿರುವ ಬಗ್ಗೆ ಇದುವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಆದರೂ ಆಟೋರಿಕ್ಷಾಗಳಿಗೆ ಮೀಟರ್ ಕಡ್ಡಾಯ ಮಾಡುವುದು ಸಾರ್ವಜನಿಕ ಹಿತಾಸಕ್ತಿಯದ್ದಾಗಿದೆ. ಒಂದು ವೇಳೆ ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಈ ಬಗ್ಗೆ ಪ್ರಸ್ತಾವನೆ ಬಂದರೆ ಸಂಪೂರ್ಣ ಬೆಂಬಲ ನೀಡಲಾಗುವುದು.-ಆರ್. ದಿಲೀಪ್, ಹು-ಧಾ ಪೊಲೀಸ್ ಆಯುಕ್ತ
ಮೀಟರ್ ಅಳವಡಿಕೆ ಕಡ್ಡಾಯಕ್ಕೆ ತಕರಾರಿಲ್ಲ. ಆದರೆ ಅವಳಿನಗರದಲ್ಲಿ ರಸ್ತೆಗಳು ತುಂಬಾ ಹದಗೆಟ್ಟಿವೆ. ದಿನಂಪ್ರತಿ ಪೆಟ್ರೋಲ್, ಡಿಸೇಲ್ ದರ ಏರುತ್ತಿದೆ. ಸಮರ್ಪಕವಾಗಿ ಮೀಟರ್ ದುರಸ್ತಿ ಆಗುತ್ತಿಲ್ಲ. ಸಾರ್ವಜನಿಕರ ಅನುಕೂಲ ಜೊತೆ ಆಟೋ ಚಾಲಕರ ಸಮಸ್ಯೆಗಳೂ ನಿವಾರಣೆಯಾಗಬೇಕು. ಹಿಂದಿನ ಆಯುಕ್ತ ಗಗನದೀಪ ಅವರು ರೈಲ್ವೆ ನಿಲ್ದಾಣ, ಹಳೆಯ ಬಸ್‌ನಿಲ್ದಾಣದಲ್ಲಿ ನಿರ್ಮಿಸಿದ್ದ ಪ್ರಿಪೇಡ್ ಆಟೋರಿಕ್ಷಾ ಕೇಂದ್ರಗಳನ್ನು ಏಕೆ ಸ್ಥಗಿತಗೊಳಿಸಿದರು. ಅಧಿಕಾರಿಗಳು ನಮ್ಮ ಜೊತೆ ಸರಿಯಾಗಿ ಚರ್ಚಿಸಿ ಮೀಟರ್ ಕಡ್ಡಾಯ ಅನುಷ್ಠಾನಗೊಳಿಸಲಿ. ಕಾಟಾಚಾರಕ್ಕೆ ಸಭೆ ಕರೆದರೆ ಹೇಗೆ? ನಮ್ಮದು ಜೀವನವಲ್ಲವೇ?- ಶೇಖರಯ್ಯ ಮಠಪತಿ, ಹು-ಧಾ ಆಟೋ ರಿಕ್ಷಾ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ
-ಶಿವಶಂಕರ ಕಂಠಿ