Advertisement

ರಾಜ್ಯದಲ್ಲೂ ಧೂಳು ಮಿಶ್ರಿತ ಬಿರುಗಾಳಿ ಭೀತಿ

08:25 AM May 09, 2018 | Karthik A |

ಹೊಸದಿಲ್ಲಿ: ಉತ್ತರ ಭಾರತವನ್ನು ಕಂಗೆಡಿಸಿರುವ ಧೂಳುಮಿಶ್ರಿತ ಬಿರುಗಾಳಿ ಬುಧವಾರ ಕರ್ನಾಟಕಕ್ಕೂ ಕಾಲಿಡುವ ಸಾಧ್ಯತೆ ದಟ್ಟವಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಉತ್ತರಾಖಂಡ ಹಾಗೂ ಪೂರ್ವ ಭಾರತದ ಕೆಲವೆಡೆ ಬುಧವಾರ ಗಂಟೆಗೆ 70 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು, ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರ ಬೀಸಿದ ಧೂಳುಮಿಶ್ರಿತ ಬಿರುಗಾಳಿ, ಮಳೆಯಿಂದಾಗಿ ದಿಲ್ಲಿ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಬುಧ ವಾರವೂ ಇಲ್ಲಿ ಇದೇ ಸ್ಥಿತಿ ಮುಂದುವರಿಯಲಿದೆ. ಹರ್ಯಾಣದಲ್ಲಿ ಮಳೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡರೆ, ಹಲವು ಮರಗಳು ಧರೆಗುರುಳಿವೆ.

Advertisement

ಕೇದಾರನಾಥ ಯಾತ್ರಿಗಳು ಅತಂತ್ರ: ಸೋಮವಾರ ರಾತ್ರಿಯಿಂದ ಉತ್ತರಾಖಂಡದಲ್ಲಿ ನಿರಂತರ ಮಳೆ, ಹಿಮಪಾತ ಹಾಗೂ ಭೂಕುಸಿತ ಆಗುತ್ತಿರುವುದರಿಂದ ಕೇದಾರನಾಥ ಹಾಗೂ ಬದ್ರಿನಾಥ ಯಾತ್ರಿಗಳಿಗೆ ತೊಂದರೆಯಾಗಿದೆ. ಮಂಗಳವಾರ ಕೆಲವು ಗಂಟೆಗಳ ಕಾಲ ಯಾತ್ರೆಯನ್ನು ತಡೆಹಿಡಿಯಲಾಗಿದೆ. ಯಾತ್ರಿಕರಿಗೆ ಸುರಕ್ಷಿತ ಸ್ಥಳಗಳಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ ಸೇರಿ ಹಲವು ಕಾಂಗ್ರೆಸ್‌ ನಾಯಕರು ಕೇದಾರನಾಥ್‌ ಮಂದಿರದ ಬಳಿ ಸಿಲುಕಿದ್ದಾರೆ.

ಸ್ನಾನ ಮಾಡಬೇಡಿ ಎಂದು ಸಲಹೆ: ಯಾರೂ ಸ್ನಾನ ಮಾಡಬೇಡಿ, ಕುತ್ತಿಗೆ ಹಿಂದಿನ ಕೂದಲು ಸೆಟೆದುನಿಂತರೆ ಅದು ಮಿಂಚು ಬರುವ ಸೂಚಕ… ಇವು ಹವಾಮಾನ ಇಲಾಖೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರವು ನಾಗರಿಕರಿಗೆ ನೀಡಿರುವ ಸಲಹೆಗಳು. ಮಿಂಚು ನೀರಿನ ಪೈಪ್‌ ಮೂಲಕವೂ ಸಾಗಿ ಬರುವ ಕಾರಣ, ಶವರ್‌ ಬಾತ್‌ ಮಾಡುವುದು ಅಥವಾ ಪೈಪ್‌ ಮೂಲಕ ಹರಿಯುವ ನೀರಿನಲ್ಲಿ ಸ್ನಾನ ಮಾಡುವುದು ಅಪಾಯ. ವಿದ್ಯುತ್‌ ಸಂವಾಹಕಗಳಿಂದ ದೂರವಿರಿ ಎಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next