ಬಾರ್ಸಿಲೋನಾ: “ಫುಟ್‌ಬಾಲ್ ಗ್ರೇಟ್’ ಪೀಲೆ ಅವರ ಸಾರ್ವಕಾಲಿಕ ಕ್ಲಬ್ ಗೋಲುಗಳ ದಾಖಲೆಯನ್ನು ಲಿಯೋನೆಲ್ ಮೆಸ್ಸಿ ಮುರಿದಿದ್ದಾರೆ. ಮೆಸ್ಸಿ ಬಾರ್ಸಿಲೋನಾ ಪರ 644ನೇ ಗೋಲು ಬಾರಿಸಿ ನೂತನ ಮೈಲುಗಲ್ಲು ನೆಟ್ಟರು. ಇದು ಒಂದೇ ಫುಟ್‌ಬಾಲ್ ಕ್ಲಬ್ ಪರ ಆಟಗಾರನೊಬ್ಬ ಹೊಡೆದ ಅತ್ಯಧಿಕ ಸಂಖ್ಯೆಯ ಗೋಲ್ ಆಗಿದೆ.
ಇದಕ್ಕೂ ಮೊದಲು ಪೀಲೆ 1957-74ರ ಅವಧಿಯಲ್ಲಿ ಸ್ಯಾಂಟೋಸ್ ಕ್ಲಬ್ ಪರ 643 ಗೋಲು ಹೊಡೆದಿದ್ದರು. 46 ವರ್ಷಗಳ ದಾಖಲೆ ಈಗ ಪತನಗೊಂಡಿದೆ.
ಸ್ಪ್ಯಾನಿಶ್ ಲೀಗ್ ಪಂದ್ಯಾವಳಿಯಲ್ಲಿ ವಲ್ಲಡೊಲಿಡ್ ವಿರುದ್ಧದ ಪಂದ್ಯದ ವೇಳೆ ಮೆಸ್ಸಿ ಈ ಸಾಧನೆಗೈದರು. ಶನಿವಾರ ಅವರು ವೆಲೆನ್ಸಿಯಾ ವಿರುದ್ಧದ ಪಂದ್ಯದಲ್ಲಿ ಪೀಲೆ ದಾಖಲೆಯನ್ನು ಸರಿದೂಗಿಸಿದ್ದರು.
ಬಾರ್ಸಿಲೋನಾ ಪರ ಆಡಿದ 749ನೇ ಪಂದ್ಯದಲ್ಲಿ ಮೆಸ್ಸಿ ನೂತನ ದಾಖಲೆ ಬರೆದರು. ಪ್ರತಿಶತ ಲೆಕ್ಕಾಚಾರದಂತೆ 1.16 ಪಂದ್ಯಗಳಲ್ಲಿ ಮೆಸ್ಸಿ ಒಂದು ಗೋಲು ಹೊಡೆದಂತಾಯಿತು. ಪೀಲೆ 1.17 ಪಂದ್ಯಕ್ಕೊಂದರಂತೆ ಗೋಲು ಬಾರಿಸಿದ್ದರು. ಅವರು ಸ್ಯಾಂಟೋಸ್ ಕ್ಲಬ್ 757 ಪಂದ್ಯಗಳನ್ನಾಡಿದ್ದರು.
ಸಹ ಆಟಗಾರರ ನೆರವು
“20 ವರ್ಷಗಳ ಹಿಂದೆ ಅತ್ಯುತ್ತಮ ಫುಟ್ಬಾಲಿಗನಾಗಬೇಕೆಂಬ ಆಶಯದೊಂದಿಗೆ ನಾನು ಆಗಮಿಸಿದ್ದೆ. ಆದರೆ ನಿರೀಕ್ಷೆಗೂ ಮೀರಿ ಬೆಳೆದಿದ್ದೇನೆ. ಈ 644 ಗೋಲುಗಳ ಹಿಂದೆ ನನ್ನ ಪರಿಶ್ರಮ ಎಷ್ಟಿದೆಯೋ ಸಹ ಆಟಗಾರರ ನೆರವು ಕೂಡ ಅಷ್ಟೇ ಇದೆ. ಅಭಿಮಾನಿಗಳ ಪ್ರೋತ್ಸಾಹವಂತೂ ಅಪಾರ’ ಎಂಬುದಾಗಿ ಮೆಸ್ಸಿ ತಮ್ಮ ಸಾಧನೆಯ ಬಳಿಕ ಪ್ರತಿಕ್ರಿಯಿಸಿದ್ದಾರೆ.