Advertisement

ಬಿಲ್‌ ಪಾವತಿಗೆ ಮೆಸ್ಕಾಂ ಸೂಚನೆ; 3 ತಿಂಗಳು ಅವಧಿ ವಿಸ್ತರಣೆ ಆದೇಶ ಬಂದಿಲ್ಲ

12:58 PM Apr 05, 2020 | Team Udayavani |

ಮಂಗಳೂರು: ವಿದ್ಯುತ್‌ ಗ್ರಾಹಕರು ಮೂರು ತಿಂಗಳ ಅವಧಿಗೆ (ಜೂನ್‌ 2020ರ ವರೆಗೆ) ಬಿಲ್‌ ಪಾವತಿಸುವುದನ್ನು ಮುಂದೂಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದರೂ ಈ ವಿಷಯದ ಬಗ್ಗೆ ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರಕಾರ ಅಥವಾ ವಿದ್ಯುತ್‌ ಸರಬರಾಜು ಕಂಪೆನಿಗಳಿಗೆ ಯಾವುದೇ ನಿರ್ದೇಶನಗಳಿಲ್ಲ. ಆದ್ದರಿಂದ ಗ್ರಾಹಕರು ತಮ್ಮ ವಿದ್ಯುತ್‌ ಬಿಲ್‌ ಪಾವತಿಗೆ ಮುಂದಾಗಬೇಕು ಎಂದು ಮೆಸ್ಕಾಂ ಪ್ರಕಟನೆ ಮೂಲಕ ಮನವಿ ಮಾಡಿದೆ.

Advertisement

ಮಾಸಿಕ ಮಾಪಕ (ಮೀಟರ್‌) ಓದುವಿಕೆ ಹಾಗೂ ಬಿಲ್‌ ವಿತರಣೆಯನ್ನು ಯಾವ ರೀತಿಯಲ್ಲಿ ನಿರ್ವಹಿಸಬಹುದು ಎಂಬುದನ್ನೂ ವಿವರಿಸಿದೆ.
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಗ್ರಾಹಕರು ಮನೆಯಿಂದಲೇ ತಮ್ಮ ಕಚೇರಿ ಕೆಲಸಗಳನ್ನು ತೊಂದರೆ ಇಲ್ಲದೆ ನಿರ್ವಹಿಸಲು, ಅಡಚಣೆ ರಹಿತ ವಿದ್ಯುತ್‌ ನೀಡಲು 24x 7 ಮೆಸ್ಕಾಂ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೋವಿಡ್‌-19 ಸೋಂಕು ಹರಡು
ವುದನ್ನು ತಡೆಗಟ್ಟಲು ವಿವಿಧ ಕ್ರಮಗಳನ್ನುಕೈಗೊಂಡಿವೆ. ಈ ಸಮಯದಲ್ಲಿ ಗ್ರಾಹಕರು ಮನೆಯಲ್ಲಿ ಸುರಕ್ಷಿತವಾಗಿರಲು ಹಾಗೂ ಆರೋಗ್ಯವಾಗರಲು ಮೆಸ್ಕಾಂ ಬಯಸುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಎಲ್ಲ ವಿದ್ಯುತ್‌ ಗ್ರಾಹಕರಿಗೆ ಸರಾಸರಿ ಬಿಲ್‌ ಅಥವಾ ಹಿಂದಿನ ತಿಂಗಳ ಬಿಲ್‌ನೀಡುವ ವ್ಯವಸ್ಥೆ ಮಾಡಲಾಗುವುದು.

ಹಾಲಿ ತಂತ್ರಾಂಶದಲ್ಲಿರುವ ಗ್ರಾಹಕರಿಗೆ ವಿದ್ಯುತ್‌ ಬಿಲ್‌ ಅನ್ನು ಇ-ಮೇಲ್‌ /ಎಸ್‌.ಎಂಎಸ್‌. / ವಾಟ್ಸ್‌ಆ್ಯಪ್‌ ಮುಖಾಂತರ ಕಳುಹಿಸಲಾಗುವುದು.

ಗ್ರಾಹಕರು ಸಹಾಯವಾಣಿ 1912ಕ್ಕೆ ಕರೆ ಮಾಡಿ ಅಕೌಂಟ್‌ ಐ.ಡಿ. ಹಾಗೂ ಮೊಬೈಲ್‌ ಸಂಖ್ಯೆಯನ್ನು ನೀಡಿದಲ್ಲಿ ಬಿಲ್‌ ವಿವರಗಳನ್ನು ಇ-ಮೇಲ್‌ / ಎಸ್‌.ಎಂಎಸ್‌/ ವಾಟ್ಸ್‌ಆ್ಯಪ್‌ ಮುಖಾಂತರ ಕಳುಹಿಸಲಾಗುವುದು.

Advertisement

ಗ್ರಾಹಕರು ಮೆಸ್ಕಾಂನ ಜಾಲತಾಣ www.mesco.in ನಲ್ಲಿ ನೋಂದಾಯಿಸಿಕೊಂಡು ಬಿಲ್‌ ವಿವರಗಳನ್ನು ಪಡೆಯಬಹುದು.

ಸಂಬಂಧಪಟ್ಟ ಉಪವಿಭಾಗ ಕಚೇರಿಯನ್ನು ಸಂಪರ್ಕಿಸಿಯೂ ವಿದ್ಯುತ್‌ ಬಿಲ್‌ ವಿವರ ಪಡೆಯಬಹುದು. (ಉಪವಿಭಾಗದ ಸಂಪರ್ಕ ವಿವರಗಳು ಜಾಲತಾಣದಲ್ಲಿ ಲಭ್ಯವಿವೆ.)

ಪಾವತಿ ಅಸಾಧ್ಯವೆನಿಸಿದರೆ ತಿಳಿಸಿ
ಯಾವುದೇ ಗ್ರಾಹಕರಿಗೆ ಬಿಲ್‌ ಪಾವತಿಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದಿದ್ದಲ್ಲಿ ಅಂತಹ ಗ್ರಾಹಕರು ಸ್ಥಳೀಯ ಮೆಸ್ಕಾಂ ಉಪವಿಭಾಗಾಧಿಕಾರಿ ಗಳ ಕಚೇರಿಗೆ ಮನವಿ ಸಲ್ಲಿಸುವುದು; ಅಂತಹ ಅರ್ಜಿಗಳನ್ನು ಉಪವಿಭಾಗಾಧಿ ಕಾರಿಗಳ ಕಚೇರಿಗಳಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲು ಸೂಚಿಸಲಾಗಿದೆ.

ಮೇ 1ರಿಂದ ಯಥಾ ಪ್ರಕಾರ ಮಾಪಕ ಓದುವಿಕೆ, ಬಿಲ್‌ ಹಂಚುವಿಕೆ ಹಾಗೂ ಬಿಲ್‌ ಸ್ವೀಕೃತಿ ಚಟುವಟಿಕೆಗಳನ್ನು ನಿರ್ವಹಿಸಲಾಗುವುದು ಮತ್ತು ವಾಸ್ತವಿಕ ಬಳಕೆಯಲ್ಲಿ ಹಾಗೂ ಸರಾಸರಿ ಬಳಕೆಯಲ್ಲಿ ತಪ್ಪು/ ವ್ಯತ್ಯಾಸ ಕಂಡುಬಂದಲ್ಲಿ ಮುಂದಿನ ತಿಂಗಳ ಬಿಲ್‌ನಲ್ಲಿ ಸರಿಪಡಿಸಲಾಗುವುದು ಎಂದು ಮೆಸ್ಕಾಂ ಪ್ರಕಟನೆ ವಿವರಿಸಿದೆ.

ಬಿಲ್‌ ಪಾವತಿ ವಿಧಾನ
ನಗರ ಪ್ರದೇಶದ ಗ್ರಾಹಕರು
www.mescom.org.in ಜಾಲತಾಣದಲ್ಲಿ ಲಾಗ್‌ಇನ್‌ ಆಗಿ ಬಿಲ್‌ ವೀಕ್ಷಿಸಿ ಮತ್ತು ಕ್ರೆಡಿಟ್‌ ಕಾರ್ಡ್‌ / ಡೆಬಿಟ್‌ ಕಾರ್ಡ್‌ / ಇಂಟರ್‌ನೆಟ್‌ ಬ್ಯಾಂಕಿಂಗ್‌ ಹಾಗೂ ಯುಪಿಐ ಸೌಲಭ್ಯಗಳೊಂದಿಗೆ ಮೊತ್ತ ಪಾವತಿಸಬಹುದು. ((Quick payment ಆಯ್ಕೆಯನ್ನು ಮಾಡಿ ಗ್ರಾಹಕರು ರಿಜಿಸ್ಟರ್‌ ಮಾಡಿಕೊಳ್ಳದೆಯೂ ಪಾವತಿಸಬಹುದು.)

ಪೇ-ಟಿಎಂ ಇಲ್ಲವೇ ಕರ್ನಾಟಕ ಮೊಬೈಲ್‌ ಒನ್‌ ಆಪ್‌ ಅಪ್ಲಿಕೇಷನ್‌ನಲ್ಲಿ ಕ್ರೆಡಿಟ್‌ ಕಾರ್ಡ್‌ / ಡೆಬಿಟ್‌ ಕಾರ್ಡ್‌ / ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕವೂ ಬಿಲ್‌ ಪಾವತಿಸಬಹುದಾಗಿದೆ.

//www.karnatakaone.gov.in/ ಜಾಲತಾಣದಲ್ಲೂ ಪಾವತಿಸಬಹುದು.

ಗ್ರಾಮೀಣ ಗ್ರಾಹಕರಿಗೆ
ಗ್ರಾಮೀಣ ಪ್ರದೇಶದ ಗ್ರಾಹಕರು (ಮೇಲೆ ತಿಳಿಸಿದ ಆರ್‌ಎಪಿಡಿಆರ್‌ಪಿ ವ್ಯಾಪ್ತಿಯ ಗ್ರಾಹಕರನ್ನು ಹೊರತುಪಡಿಸಿ)
www.mescomtrm.com ಜಾಲತಾಣದಲ್ಲಿ ಲಾಗ್‌ಇನ್‌ ಆಗಿ ಬಿಲ್‌ ವೀಕ್ಷಿಸಿ ಪಾವತಿಸಬಹುದು. (Quick pay ಆಯ್ಕೆಯನ್ನು ಮಾಡಿ ಗ್ರಾಹಕರು ರಿಜಿಸ್ಟರ್‌ ಮಾಡಿಕೊಳ್ಳದೆಯೂ ಪಾವತಿಸಬಹುದು.)

ಅದಲ್ಲದೆ ಉಪವಿಭಾಗದ ನಗದು ಕೌಂಟರ್‌ಗಳು ಎಲ್ಲ ಸುರಕ್ಷಾ ಮುನ್ನೆಚ್ಚರಿಕೆಗಳೊಂದಿಗೆ ಕಾರ್ಯನಿರ್ವಹಿಸಲಿವೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next