Advertisement
ಒಂದು ದಿನ ಶ್ವೇತಾ ತನ್ನ ಮಗನನ್ನು ಶಾಲೆಗೆ ಬಿಡಲು ಹೋಗಿದ್ದಾಗ, ಅದೇ ಶಾಲೆಗೆ ತನ್ನ ಮಗುವನ್ನು ಬಿಡಲು ಬರುತ್ತಿದ್ದ ರಮ್ಯಾ ಫೋನ್ ನಲ್ಲಿ ಬಿಸಿಬಿಸಿಯಾಗಿ ಮಾತನಾಡುತ್ತಿದ್ದುದು ಕೇಳಿಸಿತು. ಅವಳ ಮಾತಿನ ಧಾಟಿಯಲ್ಲಿ ಏನೋ ವಿಲಕ್ಷಣ ಸಂಗತಿ ನಡೆದಿರುವುದು ತಿಳಿಯಿತು. ಶ್ವೇತಾ ಮೆಲ್ಲನೆ, “”ಏನಾಯೆ¤ ರಮ್ಯಾ, ಎಲ್ಲಾ ಸುಗಮ ತಾನೆ” ಎಂದಾಗ, “”ಆಗುವುದೇನು, ನಾನು ಸಹಾಯ ಮಾಡಲು ಹೋಗಿ ದೊಡ್ಡ ತೊಂದರೆಯಲ್ಲಿ ಸಿಲುಕಿ ಹಾಕಿಕೊಂಡೆ. ಇದೆಲ್ಲಾ ಯಾರಿಗೆ ಬೇಕಿತ್ತು. 15 ದಿನದ ಹಿಂದೆ, ದಾರಿಯಲ್ಲಿ ಒಂದು ಪರ್ಸ್ ಸಿಕ್ಕಿತ್ತು. ತೆರೆದು ನೋಡಿದಾಗ ಅದರಲ್ಲಿ ಕ್ರೆಡಿಟ್ ಕಾರ್ಡ್, 500 ರೂಪಾಯಿಯ ಎರಡು ನೋಟ್ ಮತ್ತು ಇನ್ನಿತರ ದಾಖಲೆ ಪತ್ರಗಳಿದ್ದವು. ಕಳೆದುಕೊಂಡವನಿಗೆ ಹಿಂತಿರುಗಿಸುವ ಎಂದು ಅದರಲ್ಲಿದ್ದ ಮೊಬೈಲ್ ನಂಬರಿಗೆ ಫೋನ್ ಮಾಡಿ ಕರೆಸಿದೆ. ಹದಿಹರೆಯದ ಗಂಡಸು, ಕಾಣಲು ಸೌಮ್ಯನಂತಿದ್ದ. ಪರ್ಸ್ ಪಡೆದ ಮೇಲೆ ಬಹಳ ಖುಷಿ ಪಟ್ಟಿದ್ದ. ಈಗಿನ ಕಾಲದಲ್ಲಿ ನಿಮ್ಮಂಥವರು ಸಿಗುವುದು ಬಹಳ ಅಪರೂಪ, ದೇವರು ನಿಮಗೆ ಒಳ್ಳೆಯದು ಮಾಡಲೆಂದು ಹೊಗಳಿದ. ಇದೆಲ್ಲಾ ಮಾನವ ಸಹಜವಾಗಿ ಮಾಡುವಂತಹ ಕೆಲಸ, ಇದರಲ್ಲೇನು ವಿಶೇಷತೆ ಏನಿಲ್ಲ ಎಂದು ಮುಗುಳ್ಕಕ್ಕು ಬೀಳ್ಕೊಟ್ಟಿದ್ದೆ. ಆಶ್ಚರ್ಯ ಎಂದರೆ ಮರುದಿನ ಅವನಿಂದ ಗುಡ್ ಮಾರ್ನಿಂಗ್ ವಾಟ್ಸಾಪ್ ಮೆಸೇಜ್ ಬಂತು. ಮೇಲಾಗಿ, ನೀವು ಹೇಗಿದ್ದೀರಿ, ನಿಮಗೆ ತುಂಬಾ ಧನ್ಯವಾದಗಳು, ಹೀಗೆ ಅದು-ಇದು ಎಂದು ನನ್ನ ವೈಯಕ್ತಿಕ ವಿಷಯದ ಬಗ್ಗೆಯೂ ಕೇಳತೊಡಗಿದ. ಇವನ ಈ ವರ್ತನೆ ನನಗೆ ಹಿಡಿಸಲಿಲ್ಲ. ಇವನು ಸಂಬಂಧಿಕನೂ ಅಲ್ಲ, ಪರಿಚಯಸ್ಥನೂ ಅಲ್ಲ, ಮತ್ತೆ ಇದೆಲ್ಲಾ ಇವನಿಗೇಕೆ ಅಧಿಕಪ್ರಸಂಗ ಎಂದು ಸುಮ್ಮನಾಗಿದ್ದೆ. ಮತ್ತೆ ಅವನಿಂದ ಫೋನ್ ಕರೆ ಬಂದಾಗ ನನಗೆ ಕಿರಿಕಿರಿಯಾಯ್ತು, ಅಲ್ಲದೆ ಸಿಟ್ಟೂ ಬಂತು. ಇವನಿಗೆ ನನ್ನ ಮೌನದ ಮಿತಿಯನ್ನು ಪರೀಕ್ಷಿಸಲು ಬಿಡಬಾರದು, ಹೀಗೆ ಮುಂದುವರಿದರೆ ಜೀವನದಲ್ಲಿ ಅಶಾಂತಿ ಹುಟ್ಟಬಹುದೆಂದು, ಇನ್ನು ಮುಂದೆ ಈ ರೀತಿ ಮೆಸೇಜ್, ಫೋನ್ ಮಾಡಿ ಕಿರುಕುಳ ನೀಡಿದರೆ ಕಂಬಿ ಎಣಿಸ ಬೇಕಾಗುತ್ತದೆ ಎಂದು ಗಟ್ಟಿಯಾಗಿ ಗರ್ಜಿಸಿದಾಗಲೇ ಫೋನ್ ಕೆಳಗಿಟ್ಟಿದ್ದ. ಈ ಗಂಡಸರೇ ಹೀಗೆ, ಬೆರಳು ಕೊಟ್ಟರೆ ಕೈ ಹಿಡಿಯುತ್ತಾರೆ ಎಂದು ಸಿಟ್ಟಿನಲ್ಲಿಯೇ ಬಡಬಡಿಸಿದಳು.
Related Articles
Advertisement
ಅಲ್ಲದೆ, ಅವನಿಂದ ಒಂದು ದಿನ ಫೋನ್ ಕೂಡ ಬಂದಿತ್ತಲ್ಲ ! ಕಾಲ್ ರಿಸೀವ್ ಮಾಡಿ, “ಹಲೋ’ ಎಂದಿದ್ದಾಗ, “”ನೀವಾ, ಕ್ಷಮಿಸಿ, ನನ್ನ ಸಹೋದ್ಯೋಗಿ ಶ್ವೇತಾಳಿಗೆ ಫೋನ್ ಮಾಡಬೇಕಾಗಿತ್ತು, ಕೈ ತಪ್ಪಿ ನಿಮಗೆ ಕನೆಕ್ಟ್ ಆಯ್ತು”. ನನಗನಿಸಿತು, ಅವನು ಅರ್ಜಂಟ್ ಕೆಲಸದಲ್ಲಿರಬೇಕು, ಈಗ ಮಾತಾಡುವುದು ಬೇಡ ಎಂದು ಮಾತನ್ನು ನಿಲ್ಲಿಸಿದೆ. ಅವನು, “”ತೊಂದರೆ ಇಲ್ಲ, ಮಾತಾಡಿ. ಈ ಮೂಲಕವಾದರೂ ನಮಗೆ ಮಾತಾಡಲು ಅವಕಾಶ ಸಿಕ್ಕಿತ್ತಲ್ಲ” ಎಂದು ಅವನೇ ಮಾತು ಮುಂದುವರಿಸಿದ. ಬಹಳ ಸ್ವಾರಸ್ಯಕರ ರೀತಿಯಲ್ಲಿ ಮಾತಾಡುತ್ತಿದ್ದ. ತಣ್ತೀಜ್ಞಾನಿಯಂತೆ ಮಾತಾಡಿದ ರೀತಿ ಯಾರಿಗೂ ಮೆಚ್ಚುಗೆ ಆಗಬೇಕು. ಜೊತೆಗೆ ಮಗು, ಗಂಡ ಎಲ್ಲರನ್ನೂ ವಿಚಾರಿಸಿ ಆತ್ಮೀಯ ಸದಸ್ಯನಂತೆ ಕಾಳಜಿ ತೋರಿಸಿದ್ದ.
ಇದಲ್ಲದೆ, ಒಂದು ದಿನ ಶಾಲೆಯಿಂದ ಮಗುವನ್ನು ಕರೆತರುತ್ತಿ¨ªಾಗ ದಾರಿಯ ಮಧ್ಯೆ ಸಿಕ್ಕಿದ್ದ. “”ನೀವೇನು ಇಲ್ಲಿ ಅನಿರೀಕ್ಷಿತವಾಗಿ?” ಎಂದು ಕೇಳಿದಾಗ, “”ಇಲ್ಲಿ ಸಮೀಪದಲ್ಲಿಯೇ ಸ್ವಲ್ಪ ಕೆಲಸ ಇತ್ತು” ಎಂದು ಕೂಡಲೇ ಹೊರಟು ಹೋಗಿದ್ದ.
ದಿನವಿಡೀ ಅನುಭವಿಸಿದ ಒಂದಿಲ್ಲೊಂದು ಸಂಗತಿ ಶ್ವೇತಾಳ ಮನಸ್ಸನ್ನು ಕಳವಳಗೊಳಿಸಿತು. ಶ್ವೇತಾಳ ಒಂದು ಮನಸ್ಸು, “ಇಲ್ಲ ನಿತಿನ್ ತುಂಬಾ ಒಳ್ಳೆಯವರು, ಅವರು ಆ ರೀತಿಯ ವ್ಯಕ್ತಿ ಖಂಡಿತ ಆಗಿರಲಿಕ್ಕಿಲ್ಲ’ ಎಂದರೆ ಇನ್ನೊಂದು ಮನಸ್ಸು ಅದಕ್ಕೆ ವ್ಯತಿರಿಕ್ತವಾಗಿ ನುಡಿಯಿತು. ಈ ಗಂಡಸರನ್ನು ನಂಬಲು ಸಾಧ್ಯ ಇಲ್ಲ. ಮೊದಲು ನಯವಾಗಿ ಮಾತಾಡಿ ಹೆಣ್ಣಿನ ಸಖ್ಯ ಬೆಳೆಸುತ್ತಾರೆ. ಮತ್ತೆ, ಮೆಲ್ಲ, ಮೆಲ್ಲನೆ ಹೆಣ್ಣಿನ ಮನಸ್ಸನ್ನು ತನ್ನತ್ತ ಸೆಳೆದು ಸ್ವಾಧೀನ ಪಡಿಸಿಕೊಂಡು ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಾರೆ. ತಾನು ಅವನ ಮೆಸೇಜ್‌ನಿಂದ ಆಕರ್ಷಿತಳಾದದ್ದನ್ನು ನೋಡಿದರೆ ಅವಳಿಗದು ಸರಿ ಎಂದೆನಿಸುತ್ತದೆ. ಶ್ವೇತಾಳಿಗೆ ಇದನ್ನು ಎಣಿಸಿಯೇ ಭಯವಾಗತೊಡಗಿತು. ಇನ್ನು ಯಾರೊಡನೆಯೂ ಸಲುಗೆಯಿಂದ ನಡೆದುಕೊಳ್ಳಬಾರದಪ್ಪಾ. ಈ ಸಲುಗೆಯೇ ಮುಂದೆ ಮುಳ್ಳಾಗಿ ಕಾಡಿ ಬದುಕನ್ನು ಅಸಹ್ಯಗೊಳಿಸಬಹುದು. ಗಂಡನೂ ವಿದೇಶದಲ್ಲಿದ್ದಾರೆ, ಅವರಿಗಿದು ತಿಳಿದರೆ ಅಪಾರ್ಥ ಮಾಡಿಕೊಂಡಾರು!
ತಾನಾದರೋ ನಿತಿನ್‌ನ ಮೆಸೇಜ್‌ನ್ನು ಒಳ್ಳೆಯ ಮನಸ್ಸಿನಿಂದ ಸ್ವೀಕರಿಸಿದ್ದೆ. ಆದರೆ, ಅವನು ಅದನ್ನು ಯಾವ ರೀತಿಯಲ್ಲಿ ಅರ್ಥೈಸಿದ್ದಾನೆಂದು ಗೊತ್ತಿಲ್ಲ. ಜೀವನದ ಯಾತ್ರೆಯಲ್ಲಿ ಬಹಳಷ್ಟು ಜನರ ಸಂಪರ್ಕವಾಗುತ್ತದೆ. ಹಾಗಂತ ಎಲ್ಲರ ಜತೆ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಸಾಧ್ಯ ಇದ್ದರೂ ಕಾರಣ ಬೇಕಲ್ಲ. ಮೊತ್ತಮೊದಲಾಗಿ ಹೆಣ್ಣು ಅಪರಿಚಿತ ವ್ಯಕ್ತಿಗಿಂತ ತನ್ನವರಿಂದಲೇ ಹೆಚ್ಚಾಗಿ ಶೋಷಿತಳಾಗಿದ್ದಾಳೆ. ಏನಾದರಾಗಲಿ, ತನಗೆ ಈ ರಗಳೆ ಬೇಡ. ನಿತಿನ್ ಒಳ್ಳೆಯವನಿರಲಿ, ಇಲ್ಲದೇ ಇರಲಿ, ತನಗೇನಾಗಬೇಕು. ಇನ್ನು ಅವನ ವಾಟ್ಸಾಪ್ ಮೆಸೇಜಿನಿಂದ ದೂರ ಉಳಿಯುವುದೇ ಒಳಿತೆಂದು ತೀರ್ಮಾನಿಸಿದಳು. ಮೊದಲು, ತಾನು ಕಳಿಸುತ್ತಿದ್ದ ಮೆಸೇಜ್‌ನ ಆವರ್ತನವನ್ನು ನಿಧಾನವಾಗಿ ಕಡಿಮೆ ಮಾಡಿದಳು. ಬಳಿಕ ಕಮೆಂಟ್ಸ್ ಮತ್ತು ಲೈಕ್ ಮಾಡುವುದನ್ನು ನಿಲ್ಲಿಸಿದಳು. ಆ ಮೇಲೆ ಡಿಪಿಯಲ್ಲಿ ಎಂದೂ ಹಾಕದ ತನ್ನ ಮತ್ತು ಗಂಡನ ಪ್ರೀತಿಯ ವಿವಿಧ ಭಂಗಿಗಳ ಫೋಟೋವನ್ನು ಹಾಕತೊಡಗಿದಳು. ಜತೆಗೆ ತನ್ನ ಸ್ಟೇಟಸ್‌ನಲ್ಲಿ I love my husband, my love my business, that’s no one’s business….ಮತ್ತೂಂದು ಸಲ ನಿತಿನ್‌ನ ನಂಬರನ್ನು ಬ್ಲಾಕ್ ಮಾಡಿದಳು. ಹೆಸರು, ವಿವರಗಳನ್ನೆಲ್ಲ ಡಿಲೀಟ್ ಮಾಡಿದಳು. ಒಂದು ಸಲ ನಿಟ್ಟುಸಿರುಬಿಟ್ಟಳು.
ಆರು ತಿಂಗಳು ಕಳೆಯಿತು. ಶ್ವೇತಾ ಮಾಲ್‌ನಿಂದ ಸಾಮಾನು ಖರೀದಿಸಿ, ಇನ್ನೇನು ಹೊರಡಲು ಸ್ಕೂಟಿ ಸ್ಟಾರ್ಟ್ ಮಾಡ ಬೇಕೆನ್ನುವಷ್ಟರಲ್ಲಿಯೇ, ಎದುರಿನಿಂದ ನಿತಿನ್ ಬೈಕ್‌ನಲ್ಲಿ ಬರುತ್ತಿರುವುದು ಕಾಣಿಸಿತು. ಶ್ವೇತಾಳಿಗೆ ಮುಜುಗರವಾಯಿತು. ಇವನು ನೋಡಿದರೆ ಖಂಡಿತ ಮಾತಾಡಿಸುತ್ತಾನೆ, ಮತ್ತೆ ಮೆಸೇಜ್ ಬಗ್ಗೆಯೂ ವಿಚಾರಿಸ ಬಹುದೆಂದು ಕಲ್ಪಿಸಿದಳು. ಅವನನ್ನು ಎದುರಿಸಲಾಗದೆ, ಅವನ ಕಣ್ತಪ್ಪಿಸಲು ಪ್ರಯತ್ನ ಪಟ್ಟಳು. ಮನಸ್ಸಿನಲ್ಲಿ ಏನನ್ನೋ ತುಂಬಿಸಿ ಕೊಂಡು ಅಲ್ಲಿಲ್ಲಿ ನೋಡುತ್ತ, ಸ್ಕೂಟಿಯನ್ನು ತುಸು ಜೋರಾಗಿಯೇ ಓಡಿಸಿದಳು. ಮಳೆಗಾಲದ ಸಮಯ, ರಸ್ತೆಯಲ್ಲಿ ನೀರೂ ನಿಂತಿತ್ತು. ಸ್ಕೂಟಿ ಸ್ಕಿಡ್ ಆಯಿತು. ಸದ್ದು ಕೇಳಿ ಓಡಿಬಂದ ನಿತಿನ್. ತನ್ನೆದುರೇ ಮೂಛೆì ಬೀಳುತ್ತಿರುವವಳನ್ನು ಎತ್ತಿಕೊಂಡು ಟ್ಯಾಕ್ಸಿಯಲ್ಲಿ ಅವಳನ್ನು ಮಲಗಿಸಿ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ. ತನ್ನೆದುರು ಮಸುಕಾಗುತ್ತಿರುವ ನಿತಿನ್‌ನ ಮುಖವನ್ನು ನೋಡಿದ್ದೊಂದು ಶ್ವೇತಾಳಿಗೆ ಗೊತ್ತು. ಮತ್ತೆ ಯಾವುದರ ಅರಿವೂ ಇಲ್ಲ.
ಗುಣಮುಖಳಾಗಿ, ಎರಡು ದಿನದಲ್ಲೇ ಡಿಸ್‌ಚಾರ್ಜ್ ಆಗಿ ಮನೆಗೆ ಹೋದ ಶ್ವೇತಾಳಿಗೆ ತನ್ನನ್ನು ಈ ಅವಘಡದಿಂದ ಪಾರು ಮಾಡಿದ್ದು ನಿತಿನ್ ಎಂಬುದು ಜ್ಞಾಪಕಕ್ಕೆ ಬಂತು. ಯಾಕೋ ಫೋನ್ ಮಾಡಿ ಅವನಿಗೆ ಧನ್ಯವಾದ ಹೇಳ್ಳೋಣ ಎಂದು ಮೊಬೈಲ್ ಕೈಗೆತ್ತಿಕೊಂಡರೆ ಈ ಮೊದಲೇ ಅವನ ನಂಬರನ್ನು ಡಿಲೀಟ್ ಮಾಡಿಯಾಗಿತ್ತು !|
ಇಷ್ಟಕ್ಕೂ ನಿತಿನ್ ಹಾಗೆ ವರ್ತಿಸಿದ್ದಾದರೂ ಯಾಕೆ? ಅವನು ಮೆಸೇಜ್ ಮಾಡುತ್ತಿದ್ದುದು ತಪ್ಪೆ? ಇಷ್ಟಕ್ಕೂ ತಪ್ಪು ಎಂದು ಹೇಳುವಂಥಾದ್ದನ್ನು ಏನು ಮಾಡಿದ್ದಾನೆ? ಮತ್ತೆ ಅದೇ ಮಾಲ್‌ನ ಮುಂದೆ ನಿಂತುಕೊಳ್ಳುವಾಗಲೆಲ್ಲ ಹಾದುಹೋಗುವ ಬೈಕ್ ನಿತಿನ್‌ನದ್ದಿರಬಹುದೇ ಎಂದು ಅವಳ ಮನಸ್ಸು ತವಕಿಸುತ್ತದೆ. ಯಾರಲ್ಲಾದರೂ ಕೇಳ್ಳೋಣವೆಂದರೆ, ಹೇಗೆ ಕೇಳುವುದು!
ಮಾಲ್‌ನ ಮುಂದಿನ ರಸ್ತೆಯಲ್ಲಿ ಎಷ್ಟೊಂದು ವಾಹನಗಳು ತಮ್ಮ ಪಾಡಿಗೆ ತಾವು ಹಾದುಹೋಗುತ್ತಿದ್ದವು!
ಮೋಹನ ಕುಂದರ್