ಕಲಬುರಗಿ: ಸರ್ಕಾರವು ರೈತರ ಸಾಲ ಮನ್ನಾ ಮಾಡಿದೆ. ರೈತರು ಸಾಲಕ್ಕೆ ಧೃತಿಗೆಟ್ಟು ಆತ್ಮಹತ್ಯೆಗೆ ಶರಣಾಗಬಾರದು ಎನ್ನುವ ಸಂದೇಶವನ್ನು ಎಲ್ಲ ರೈತರಿಗೆ ಮುಟ್ಟಿಸಬೇಕು ಹಾಗೂ ರೈತರು ಖಾಸಗಿ ಸಂಸ್ಥೆಗಳಿಂದ ಪಡೆದ ಸಾಲ ಮರುಪಾವತಿಗೆ ಒತ್ತಡ ಇದ್ದಲ್ಲಿ ತಿಳಿದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ಜೆ. ರವಿಶಂಕರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಇಲಾಖೆಗಳಲ್ಲಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಲಿಖೀತ ರೂಪದಲ್ಲಿ ಸಲ್ಲಿಸಬೇಕು. ಆ ಸಮಸ್ಯೆಗಳ ನಿವಾರಣೆಗೆ ರಾಜ್ಯಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.
ಮುಂದಿನ ಸಭೆಗಳಲ್ಲಿ ಇಲಾಖಾವಾರು ಹಾಗೂ ಕೂಲಂಕೂಷವಾಗಿ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗುವುದು. ಇದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮರ್ಪಕ ಉತ್ತರ ನೀಡಬೇಕು. ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಂದಿನ ಸಭೆಗೆ ಗೈರು ಹಾಜರಾದ ಅಧಿಕಾರಿಗಳು ಬೆಂಗಳೂರಿನ ಸಭೆಗೆ ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಸಭೆ ಇರುವುದನ್ನು ಖಚಿತಪಡಿಸಬೇಕು. ಇಲ್ಲದಿದ್ದಲ್ಲಿ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಬೇಕೆಂದು ಜಿಲ್ಲಾಧಿಕಾರಿಗೆ ತಿಳಿಸಿದರು.
ಚಿಂಚೋಳಿ ತಾಲೂಕಿನ ಚಂದನಕೇರಾ ಬಹುಗ್ರಾಮ ಕುಡಿಯುವ ನೀರು ಯೋಜನೆಯ 70 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಇದೆ. ಇದನ್ನು ಗ್ರಾಪಂಗಳು ಭರಿಸಬೇಕು. ಆದರೆ ಸಾಧ್ಯವಾಗುತ್ತಿಲ್ಲ. 2015-16ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ಕಟ್ಟಡಗಳು ಇನ್ನೂ ಪೂರ್ಣಗೊಂಡಿಲ್ಲ ಇವುಗಳನ್ನು ಕ್ರೈಸ್ತ್ ಸಂಸ್ಥೆಯವರು ನಿರ್ಮಿಸುತ್ತಿದ್ದಾರೆ. ಅವರಿಗೆ ಅನುದಾನ ಬೆಂಗಳೂರಿನಿಂದಲೇ ನೇರವಾಗಿ ಬಿಡುಗಡೆಯಾಗಿ ಪ್ರಗತಿ ಪರಿಶೀಲನೆ ಅವರೇ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಈ ವರ್ಷ 29.41 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿ ಮಾಡಲು ಗುರಿ ನೀಡಲಾಗಿದೆ ಎಂದು ಹೇಳಿದರು. ಪಾಲಿಕೆ ಆಯುಕ್ತ ಪಿ. ರಘುನಂದನಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಐ.ಎಸ್.ಎಸ್. ಪ್ರೊಬೇಷನರಿ ಅಧಿಕಾರಿ ಲೋಖಂಡೆ ಸ್ನೇಹಲ ಸುಧಾಕರ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.