ಕಂಪ್ಲಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ.
ಎಲ್ಲಿ ನೋಡಿದರೂ ಬಿಸಾಡಿರುವ ಮದ್ಯದ ಬಾಟಲಿ, ಒಡೆದು ಹಾಕಿರುವ ಬಾಟಲಿಗಳ ಗಾಜಿನ ಚೂರುಗಳು ಕಣ್ಣಿಗೆ ರಾಚುತ್ತವೆ. ನಿರ್ವಹಣೆ ಕೊರತೆಯಿಂದ ಎಪಿಎಂಸಿ ಮಾರುಕಟ್ಟೆ ರೈತರ ಬದಲಿಗೆ ಪುಂಡ ಪೋಕರಿಗಳ ಹಾಗೂ ಕುಡಕರಿಗೆ ಆಶ್ರಯ ತಾಣವಾಗಿದೆ.
ಇದರಿಂದ ರೈತರ ಜತೆಗೆ ಸ್ಥಳೀಯ ವಾಯುವಿಹಾರಿಗಳು, ವಿದ್ಯಾಭ್ಯಾಸ, ಮಾರುಕಟ್ಟೆಗೆ ಬರುವ ವಿದ್ಯಾರ್ಥಿಗಳು ಬೇಸತ್ತಿದ್ದಾರೆ. ಇವುಗಳನ್ನು ಪ್ರತಿದಿನ ನೋಡುತ್ತಿರುವ ಕೆಲವರು ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಮಹಿಳೆಯರು ಹಾಗೂ ಹಿರಿಯ ನಾಗರಿಕರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಾಯುವಿಹಾರಕ್ಕೆ ಆಗಮಿಸುತ್ತಿದ್ದವರು ಸಹಿತ ಇಲ್ಲಿನ ಅವ್ಯವಸ್ಥೆಗೆ ರೋಸಿ ಹೋಗಿದ್ದಾರೆ.
ಹೊಸಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸುಪರ್ದಿಯಲ್ಲಿರುವ ಈ ಉಪ ಮಾರುಕಟ್ಟೆಯಲ್ಲಿ ಭತ್ತ, ಮೆಕ್ಕೆಜೋಳ, ಜೋಳ ಸೇರಿದಂತೆ ವಿವಿಧ ಬೆಳೆ ಒಣಗಿಸಲು ಎರಡು ಬೃಹತ್ ಪ್ಲಾಟ್ಫಾರ್ಮಗಳಿದ್ದು, ಇನ್ನೆರಡು ನಿರ್ಮಾಣ ಹಂತದಲ್ಲಿವೆ. ಮಾರುಕಟ್ಟೆ ಸಮಿತಿಗೆ ಒಂದು ಗೋದಾಮು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 2 ಗೋದಾಮು, ವಾಣಿಜ್ಯ ಚಟುವಟಿಕೆಗಳಿಗೆ 10 ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಎಪಿಎಂಸಿ ಕಚೇರಿ, ತಾಲೂಕು ಕಚೇರಿ, ನಾಡ ಕಚೇರಿಗೆ ತಲಾ ಒಂದೊಂದು ಕಟ್ಟಡ ಬಳಸಲಾಗುತ್ತಿದೆ. ಒಳಾಂಗಣದಲ್ಲಿ 5 ಮಳಿಗೆಗಳಿದ್ದು, ಟೆಂಡರ್ ಆಧಾರದ ಮೇಲೆ ವ್ಯಾಪಾರಸ್ಥರಿಗೆ ನೀಡಲಾಗಿದೆ. ಜತೆಗೆ ಪಟ್ಟಣದ ವ್ಯಾಪಾರಸ್ಥರು ಸಹಿತ ಬೃಹತ್ ಮಳಿಗೆಗಳನ್ನು ನಿರ್ಮಿಸಿ ವ್ಯಾಪಾರ ನಡೆಸುತ್ತಿದ್ದಾರೆ. ಜತೆಗೆ ರೈತ ಸಂಪರ್ಕ ಕೇಂದ್ರವೂ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದೆ.
ಎಪಿಎಂಸಿ ಪ್ರಾಂಗಣದಲ್ಲಿ ಶೌಚಾಗೃಹ, ಟಬ್‌ಗಳು ಬಿದ್ದಿವೆ. ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ, ರಸ್ತೆಗಳು ಹದಗೆಟ್ಟಿವೆ ಎಂದು ಸ್ಥಳೀಯರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
•ಜಿ.ಚಂದ್ರಶೇಖರಗೌಡ