Advertisement

ಮೆಸ್ಕಾಂ: ಕಾರ್ಯಾಚರಣೆಗಿಳಿದ ‘ಮಾನ್ಸೂನ್‌ ಗ್ಯಾಂಗ್‌’

11:22 AM May 21, 2022 | Team Udayavani |

ಉಡುಪಿ: ಉಡುಪಿ, ಕುಂದಾಪುರ, ಕಾರ್ಕಳ ಭಾಗದಲ್ಲಿ ಮಳೆಗಾಲ ಕಾರ್ಯನಿರ್ವಹಣೆಗೆ ಮೆಸ್ಕಾಂ ‘ಮಾನ್ಸೂನ್‌ ಗ್ಯಾಂಗ್‌’ ವಿಶೇಷ ಪಡೆ ಕಾರ್ಯಾಚರಣೆಗೆ ಸಜ್ಜಾಗಿದೆ. ಮೂರು ವಿಭಾಗಕ್ಕೆ ಪ್ರತ್ಯೇಕವಾಗಿ ಮಾನ್ಸೂನ್‌ ಗ್ಯಾಂಗ್‌ಗೆ ಕಾರ್ಮಿಕರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.

Advertisement

ಸಾರ್ವಜನಿಕರಿಗೆ ವಿದ್ಯುತ್‌ ಪೂರೈಕೆ ಯಲ್ಲಿ ಯಾವುದೇ ಸಮಸ್ಯೆಯಾಗದಂತೆ, ಜೀವ ಹಾನಿ ಸಂಭವಿಸದಂತೆ ನೋಡಿ ಕೊಳ್ಳಲು ಮೆಸ್ಕಾಂ ವಿಶೇಷ ಕಾರ್ಯ ಯೋಜನೆ ರೂಪಿಸಿದೆ.

ಮೆಸ್ಕಾಂನ 52 ಸೆಕ್ಷನ್‌ ವ್ಯಾಪ್ತಿಯಲ್ಲಿ ವಿಶೇಷ ಪಡೆ ಕಾರ್ಯನಿರ್ವಹಿಸಲಿದೆ. ತಾಂತ್ರಿಕ ಕೆಲಸ, ಬಾಕಿ ಬಿಲ್‌ ವಸೂಲಿ, ಕಂಬ ಹತ್ತಿ ಪರಿಶೀಲನೆಯನ್ನು ಮೆಸ್ಕಾಂ ಲೈನ್‌ ಮೆನ್ಸ್‌ ನೋಡಿಕೊಂಡರೆ, ಕಂಬ, ಲೈನ್‌ ಗಳ ಮೇಲೆ ಬೀಳುವ ಅಪಾಯಕಾರಿ ಮರ ತೆರವುಗೊಳಿಸುವ ಕೆಲಸ ಮತ್ತು ಕಂಬಗಳ ಬದಲಾವಣೆ, ಕೆಳಗೆ ಬಿದ್ದಿರುವ ತಂತಿಗಳ ನಿರ್ವಹಣೆ ಕೆಲಸವನ್ನು ಮಾನ್ಸೂನ್‌ ಗ್ಯಾಂಗ್‌ ಪಡೆ ಮಾಡಲಿದೆ.

ಈಗಾಗಲೇ ಮಾನ್ಸೂನ್‌ ಗ್ಯಾಂಗ್‌ ತೆಂಗಿನ ತೋಟ, ಗಿಡಮರಗಳು ಹೆಚ್ಚಿರುವ ಪ್ರದೇಶ ಗಳಲ್ಲಿ ಕಾರ್ಯಾರಂಭಿಸಿದೆ.

138 ಮಂದಿ, 11 ತುರ್ತು ವಾಹನ

Advertisement

ಉಡುಪಿ ವಿಭಾಗದಲ್ಲಿ 52, ಕುಂದಾಪುರ 56, ಕಾರ್ಕಳದಲ್ಲಿ 30 ಮಂದಿ ಸೇರಿ 138 ಜನರನ್ನು ಮನ್ಸೂನ್‌ ಗ್ಯಾಂಗ್‌ಗೆ ನೇಮಕ ಮಾಡಿಕೊಳ್ಳಲಾಗಿದೆ. ಈ ತಂಡದಲ್ಲಿ ಮೆಸ್ಕಾಂ ಸಿಬಂದಿಯೂ ಇದ್ದಾರೆ. ಜತೆಗೆ ಗ್ರಾಮೀಣ ಮತ್ತು ನಗರ ಭಾಗದಲ್ಲಿ ತುರ್ತು ತೆರಳಿ ಕೆಲಸಗಳನ್ನು ನಿರ್ವಹಿಸಲು ಉಡುಪಿಗೆ 5, ಕುಂದಾಪುರ 2, ಕಾರ್ಕಳದಲ್ಲಿ 4 ವಾಹನಗಳನ್ನು ಮೆಸ್ಕಾಂ ನೀಡಿದೆ. ಅಪಾಯಕಾರಿ ಮರಗಳ ತೆರವು, ಗ್ರೀಸಿಂಗ್‌ ವರ್ಕ್ಸ್, ಕೆಳಗೆ ಬಿದ್ದ ತಂತಿಗಳ ನಿರ್ವಹಣೆ, ಹೊಸ ತಂತಿ, ಕಂಬಗಳ ಅಳವಡಿಕೆ ಮೊದಲಾದ ಕೆಲಸಗಳನ್ನು ನಿರ್ವಹಿಸಲಿದೆ.

ಲೈನ್‌ಮನ್‌ಗಳು ಒತ್ತಡದಲ್ಲಿರುತ್ತಾರೆ, ಸಹಾಯವಾಣಿ ಸಂಪರ್ಕಿಸಿ

ಮಳೆಗಾಲವಾದ್ದರಿಂದ ತಾಂತ್ರಿಕ, ತಾಂತ್ರಿಕೇತರ ಕೆಲಸಗಳ ಒತ್ತಡದಲ್ಲಿ ಲೈನ್‌ಮೆನ್‌ ಗಳಿರುತ್ತಾರೆ. ಸ್ಥಳೀಯರ ಮೊಬೈಲ್‌ ಕರೆಗಳನ್ನು ಅವರು ಸ್ವೀಕರಿಸುವುದಿಲ್ಲ ಎಂಬ ದೂರಿನೊಂದಿಗೆ ಮೆಸ್ಕಾಂ ಸ್ಪಂದಿಸುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿ ಗ್ರಾಹಕರು ಮಾಡುತ್ತಾರೆ. ಅವರು ಕೆಲಸಗಳ ಒತ್ತಡದಲ್ಲಿ ಕರೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ವಿದ್ಯುತ್‌ ಪೂರೈಕೆ ಸಂಬಂಧಿತ ಯಾವುದೆ ದೂರುಗಳಿದ್ದಲ್ಲಿ ಮೆಸ್ಕಾಂ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿಗೆ 1912 ಕರೆ ಮಾಡಿ ವಿಷಯ ತಿಳಿಸಬಹುದು. ತತ್‌ಕ್ಷಣ ಸಂಬಂಧಪಟ್ಟ ಸೆಕ್ಷನ್‌ಗೆ ಮಾಹಿತಿ ರವಾನೆಯಾಗಿ ತುರ್ತು ಕ್ರಮಕೈಗೊಳ್ಳುತ್ತಾರೆ.

ಮುಂಜಾಗ್ರತೆ ಕ್ರಮ

ಮಳೆಗಾಲದಲ್ಲಿ ಮೆಸ್ಕಾಂ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸಾರ್ವಜನಿಕ ದೂರು ಮತ್ತಿತರ ತುರ್ತು ಕೆಲಸಗಳಿಗೆ ಮೆಸ್ಕಾಂ ಮಾನ್ಸೂನ್‌ ಗ್ಯಾಂಗ್‌ನಲ್ಲಿ ಕಾರ್ಯನಿರ್ವಹಿಸಲು 138 ಮಂದಿ ತಾತ್ಕಾಲಿಕ ಕಾರ್ಮಿಕರನ್ನು ತೆಗೆದುಕೊಂಡಿದ್ದೇವೆ. ಹೆಚ್ಚುವರಿ ವಾಹನಗಳನ್ನು ಪಡೆದು ಕಾರ್ಕಳ, ಉಡುಪಿ, ಕುಂದಾಪುರಕ್ಕೆ ನೀಡಲಾಗಿದೆ. ದೂರುಗಳನ್ನು ಮೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದು. ಗಂಭೀರ ಸಮಸ್ಯೆ, ದೂರುಗಳಿದ್ದಲ್ಲಿ ಆಯಾ ವ್ಯಾಪ್ತಿಯ ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರನ್ನು ಸಂಪರ್ಕಿಸಬಹುದು. -ನರಸಿಂಹ ಪಂಡಿತ್‌, ಅಧೀಕ್ಷಕ ಎಂಜಿನಿಯರ್‌, ಮೆಸ್ಕಾಂ, ಉಡುಪಿ ಜಿಲ್ಲೆ

ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next