Advertisement
ವಿದ್ಯುತ್ ವಿತರಣ ಕಂಪೆನಿಗಳನ್ನು ಖಾಸಗೀಕರಣ ಮಾಡುವ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿ ಸೋಮವಾರ ನಗರದ ಬಿಜೈಯಲ್ಲಿರುವ ಮೆಸ್ಕಾಂ ಕಾರ್ಪೊರೆಟ್ ಕಚೇರಿ ಎದುರು ಮೆಸ್ಕಾಂ ನೌಕರರು ಮತ್ತು ಅಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ, ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ವಿದ್ಯುತ್ ಮಂಡಳಿ ಎಂಜಿನಿಯರ್‌ಗಳ ಸಂಘದ ಹಿರಿಯ ಉಪಾಧ್ಯಕ್ಷ ಮಂಜಪ್ಪ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಈಗ ವಿದ್ಯುತ್ ವಿತರಣ ಕಂಪೆನಿಗಳು ಬಿಪಿಎಲ್ ಕುಟುಂಬಗಳಿಗೆ, ರೈತರಿಗೆ, ಸಣ್ಣ ಕೈಗಾರಿಕೆಗಳಿಗೆ ಅತಿ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸುತ್ತಿವೆ; ಒಂದೊಮ್ಮೆ ಖಾಸಗೀಕರಣ ಮಾಡಿದರೆ ಯಾರಿಗೂ ಕಡಿಮೆ ದರದಲ್ಲಿ ವಿದ್ಯುತ್ ಲಭಿಸಲಾರದು. ಎಲ್ಲ ವರ್ಗಗಳ ಗ್ರಾಹಕರ ವಿದ್ಯುತ್ ದರದಲ್ಲಿ ಏರಿಕೆ ಆಗಲಿದೆ. ಈಗಾಗಲೇ ಖಾಸಗೀಕರಣ ಮಾಡಿರುವ ದಿಲ್ಲಿ ಮತ್ತು ಮುಂಬಯಿಯ ವಿದ್ಯುತ್ ದರಕ್ಕೂ, ಕರ್ನಾಟಕದ ವಿದ್ಯುತ್ ದರಕ್ಕೂ ಅಜಗಜಾಂತರವಿದೆ. ಖಾಸಗೀಕರಣವು ರಾಜ್ಯ ಸರಕಾರ ಮತ್ತು ಜನತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು. ಖಾಸಗೀಕರಣ ಪ್ರಕ್ರಿಯೆಯಲ್ಲಿ ಪ್ರಸ್ತುತ ಇರುವ ಎಲ್ಲ ಹೊಣೆಗಾರಿಕೆಗಳನ್ನು ಮತ್ತು ಸಾಲಗಳನ್ನು ಉತ್ತರಾಧಿಕಾರಿಗೆ ವರ್ಗಾಯಿಸಲು ಅವಕಾಶ ಇಲ್ಲದ ಕಾರಣ ಅವುಗಳ ಹೊರೆ ರಾಜ್ಯ ಸರಕಾರದ ಮೇಲೆ ಬೀಳುತ್ತದೆ. ಮುಂದಿನ 2 ವರ್ಷಗಳಲ್ಲಿ ವಿದ್ಯುತ್ ಸಬ್ಸಿಡಿ ಮೊತ್ತವು 3 ಪಟ್ಟು ಹೆಚ್ಚಾಗಲಿದ್ದು, ಎಲ್ಲ ಎಸ್ಕಾಂಗಳ ಸಬ್ಸಿಡಿ ಮೊತ್ತ ಸೇರಿಸಿದರೆ ಲಕ್ಷ ಕೋಟಿ ರೂ. ಆಗುತ್ತದೆ. ರಾಜ್ಯ ಸರಕಾರ ಈ ಮೊತ್ತವನ್ನು ಒಂದೇ ಬಾರಿಗೆ ಭರಿಸಬೇಕಾಗುತ್ತದೆ. ಈಗಾಗಲೇ ಕೊರೊನಾ ಹಾವಳಿಯಿಂದ ನಲುಗಿರುವ ರಾಜ್ಯ ಸರಕಾರದ ಆರ್ಥಿಕತೆಗೆ ಇನ್ನಷ್ಟು ದೊಡ್ಡ ಹೊರೆಯಾಗಲಿದೆ ಎಂದರು.
Related Articles
ಇಂದಿನದು ಸಾಂಕೇತಿಕ ಪ್ರತಿಭಟನೆ ಮಾತ್ರ; ಖಾಸಗೀಕರಣ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಹಿಂಪಡೆಯದಿದ್ದರೆ ಮುಂದೆ ತೀವ್ರತರವಾದ ಪ್ರತಿಭಟನೆ ನಡೆಸಲಾಗುವುದು ಎಂದರು. ಉತ್ತರ ಪ್ರದೇಶದಲ್ಲಿ ಪ್ರತಿಭಟಿಸಿದ ವಿದ್ಯುತ್ ನೌಕರರ ಸಂಘದ ಮುಖಂಡರನ್ನು ಬಂಧಿಸಿರುವುದು ಖಂಡನೀಯ; ಅಲ್ಲಿನ ನೌಕರರ ಹೋರಾಟಕ್ಕೆ ನಮ್ಮ ಸಂಘ ಬೆಂಬಲಿಸುತ್ತದೆ ಎಂದರು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ (ಮೆಸ್ಕಾಂ)ದ ಉಪಾಧ್ಯಕ್ಷ ಎಚ್.ಎಸ್. ಗುರುಮೂರ್ತಿ ಅವರು ರಾಜ್ಯ ಸರಕಾರಕ್ಕೆ ಸಲ್ಲಿಸುವ ಮನವಿಯನ್ನು ವಾಚಿಸಿ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಬೇಡ, ಖಾಸಗೀಕರಣ ಬೇಡವೇ ಬೇಡ ಎಂದರು.
Advertisement
ಮನವಿ ಸಲ್ಲಿಕೆಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ ಒಕ್ಕೂಟದ ಪ್ರಮುಖರಿಂದ ಮನವಿ ಸ್ವೀಕರಿಸಿದರು. ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಸಂಘಟನ ಕಾರ್ಯದರ್ಶಿ ಮುರಳೀಧರ ನಾಯಕ್, ಒಕ್ಕೂಟದ ಪ್ರಮುಖರಾದ ಸುನಿಲ್ ಮೊಂತೇರೊ, ಕೃಷ್ಣರಾಜ್, ಶ್ರೀನಿವಾಸಪ್ಪ ಉಪಸ್ಥಿತರಿದ್ದರು. ವಿವಿಧೆಡೆ ಪ್ರತಿಭಟನೆ
ಖಾಸಗೀಕರಣ ಪ್ರಸ್ತಾವವನ್ನು ವಿರೋಧಿಸಿ ದ.ಕ., ಉಡುಪಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲೂ ಮೆಸ್ಕಾಂ ನೌಕರರು ಪ್ರತಿಭಟನೆ ನಡೆಸಿದ್ದಾರೆ.