Advertisement

ಮೆಸ್ಕಾಂ ಬಿಲ್ಲಿಂಗ್‌ ಸಾಫ್ಟ್ ವೇರ್‌ ಬದಲಾವಣೆ: ಗ್ರಾಹಕರಿಗೆ ಶುಲ್ಕದ ಶಾಕ್‌!

02:17 PM Mar 30, 2019 | Naveen |
ಬೆಳ್ತಂಗಡಿ : ಸಾಮಾನ್ಯವಾಗಿ ಮನೆಗೆ ಮೆಸ್ಕಾಂನ ವಿದ್ಯುತ್‌ ಶುಲ್ಕ ಬರುವ ಸಂದರ್ಭ ಇಂತಿಷ್ಟೇ ಮೊತ್ತ ಇರುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಕೆಲವೊಮ್ಮೆ ಅದು ಕೊಂಚ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಆದರೆ ಅದನ್ನೆಲ್ಲ ಮೀರಿ ಲಕ್ಷಾಂತರ ರೂ. ಬಿಲ್‌ ಬಂದರೆ ಆ ಗ್ರಾಹಕನ ಸ್ಥಿತಿ ಹೇಗಾಗಿರಬೇಡ !
ಮೆಸ್ಕಾಂ ಕಳೆದ ಕೆಲವು ತಿಂಗಳ ಹಿಂದೆ ಬಿಲ್ಲಿಂಗ್‌ ಸಾಫ್ಟ್‌ವೇರ್‌ ಬದಲಿಸಿದ ಹಿನ್ನೆಲೆಯಲ್ಲಿ ಕೆಲವು ಗ್ರಾಹಕರಿಗೆ ಈ ರೀತಿ ಲಕ್ಷಾಂತರ ರೂ. ಬಿಲ್‌ ನೀಡಿ ಶಾಕ್‌ ನೀಡುತ್ತಿದೆ. ಬಳಿಕ ಹತ್ತಿರದ ಮೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿದರೆ ನಿಟ್ಟುಸಿರುವ ಬಿಡುವ ಪರಿಸ್ಥಿತಿ ಇದೆ. ಸಾಫ್ಟ್‌ ವೇರ್‌ ಬದಲಿಸಿದ ಬಳಿಕ ಹಂತ ಹಂತವಾಗಿ ಮೆಸ್ಕಾಂ ಇಂತಹ ತೊಂದರೆಗಳನ್ನು ಸರಿ ಮಾಡುತ್ತಿದ್ದು, ಕೆಲವೆಡೆ ಈಗಲೂ ಅಂತಹ ವಿಚಿತ್ರ ಬಿಲ್‌ಗ‌ಳು ಗ್ರಾಹಕರ ಕೈ ಸೇರುತ್ತಿವೆ.
ಕಳೆದ ತಿಂಗಳು 35 ರೂ.;  ಈ ಬಾರಿ 6 ಲಕ್ಷ ರೂ. !
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಉಜಿರಂಡಿಪಲ್ಕೆ ನಿವಾಸಿ ಸುಂದರ ಬಂಗೇರ ಅವರ ಕಟ್ಟಡವೊಂದಕ್ಕೆ ಪ್ರತಿ ತಿಂಗಳು ನಿಗದಿತ 35 ರೂ.ನಿಂದ 70 ರೂ.ವರೆಗೆ ಶುಲ್ಕ ಬರುತ್ತಿತ್ತು. ಆದರೆ ಮಾ.26ರಂದು ಬಂದ ವಿದ್ಯುತ್‌ ಬಿಲ್ಲಿನಲ್ಲಿ ಶುಲ್ಕ 6 ಲಕ್ಷ ರೂ. ದಾಟಿದೆ. ಈ ಬಾರಿಯ ಬಿಲ್‌ನಲ್ಲಿ 87,454 ಬಳಸಿದ ಯೂನಿಟ್‌ಗಳು, ಅದಕ್ಕೆ 6,16,186 ರೂ. ಶುಲ್ಕ, 55,456 ತೆರಿಗೆ ಸಹಿತ ಇತರ ಶುಲ್ಕಗಳು ಸೇರಿ ಒಟ್ಟು 6,71,679 ರೂ. ಬಿಲ್‌ ಬಂದಿದೆ.
ಅಸಹಜ ಬಿಲ್‌ ನೀಡದಂತೆ ಸೂಚನೆ
ಮೆಸ್ಕಾಂನ ವಿದ್ಯುತ್‌ ಶುಲ್ಕದ ಬಿಲ್‌ ನೀಡುವ ಕಾರ್ಯವನ್ನು ಹೊರಗುತ್ತಿಗೆ ಆಧಾರದಲ್ಲಿ ಮೀಟರ್‌ ರೀಡರ್‌ ಗಳು ನಿರ್ವಹಿಸುತ್ತಿದ್ದಾರೆ. ಅಸಹಜ (ಅಬ್‌ನಾರ್ಮಲ್‌) ಬಿಲ್‌ಗ‌ಳು ಬಂದರೆ ಅಂತಹ ಬಿಲ್‌ಗ‌ಳನ್ನು ಗ್ರಾಹಕರಿಗೆ ನೀಡದೆ ಬದಲಾಗಿ ಅದನ್ನು ಮೆಸ್ಕಾಂ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ. ಆದರೆ ಕೆಲವು ಮೀಟರ್‌ ರೀಡರ್‌ಗಳು ಅಸಹಜ ಬಿಲ್‌ಗ‌ಳು ಬಂದರೂ ಗ್ರಾಹಕರಿಗೆ ನೀಡುತ್ತಾರೆ. ಹೆಚ್ಚಿನ ಸಂದರ್ಭ ರೀಡರ್‌ ಗಳು ಬಿಲ್ಲಿನ ಮೊತ್ತ ನೋಡುವುದಿಲ್ಲ. ಹೀಗಾಗಿ ಗ್ರಾಹಕರು ಗೊಂದಲಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ.
ಮೀಟರ್‌ ಚೇಂಜ್‌ ತೊಂದರೆ?
ಹೊಸ ಸಾಫ್ಟ್‌ವೇರ್‌ ಅಳವಡಿಕೆ ಬಳಿಕ ಬದಲಾವಣೆಗೊಂಡ ಮೀಟರ್‌ಗಳಲ್ಲಿ ಇಂತಹ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಅದು ಹಿಂದಿನ ರೀಡಿಂಗ್‌ ತೋರಿಸಿದಾಗ ಹೆಚ್ಚಿನ ಶುಲ್ಕ ಬರುತ್ತದೆ. ಅಂತಹ ಪ್ರಕರಣಗಳನ್ನು ಅಧ್ಯಯನ ಮಾಡಿ ಸಮಸ್ಯೆ ಪರಿಹರಿಸುವ ಕೆಲಸ ಮಾಡಲಾಗುತ್ತಿದೆ  ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ.
ಸಾಫ್ಟ್‌ ವೇರ್‌ ಸಮಸ್ಯೆ
ಸಾಫ್ಟ್‌ವೇರ್‌ ಬದಲಿಸಿದ ಹಿನ್ನೆಲೆಯಲ್ಲಿ ಅಸಹಜ ಬಿಲ್‌ ಸಮಸ್ಯೆ ಕಂಡು ಬರುತ್ತಿದೆ. ಅಸಹಜ ಶುಲ್ಕಗಳಿದ್ದಲ್ಲಿ ಗ್ರಾಹಕರಿಗೆ ನೀಡದಂತೆ ಮೀಟರ್‌ ರೀಡರ್‌ಗಳಿಗೆ ತಿಳಿಸಲಾಗಿದೆ. ಗ್ರಾಹಕರು ಮೆಸ್ಕಾಂ ಕಚೇರಿಯನ್ನು ಸಂಪರ್ಕಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ.
ರಾಮಚಂದ್ರ, ಎಕ್ಸಿಕ್ಯೂಟಿವ್‌
  ಎಂಜಿನಿಯರ್‌, ಮೆಸ್ಕಾಂ ಬಂಟ್ವಾಳ
  ಉಪವಿಭಾಗ
ಜೆಇ ಗಮನಕ್ಕೆ ತಂದಿದ್ದೆ
ನಮ್ಮ ಒಂದು ಸಣ್ಣ ಬಾಡಿಗೆ ರೂಮಿನ ವಿದ್ಯುತ್‌ ಶುಲ್ಕ ಗರಿಷ್ಠ ಅಂದರೆ 70 ರೂ. ಬರುತ್ತಿತ್ತು. ಆದರೆ ಈ ಬಾರಿ 6 ಲಕ್ಷ ರೂ.ಗಳಿಗೂ ಅಧಿಕ ಬಿಲ್‌ ಬಂದಾಗ ಗೊಂದಲವಾಯಿತು. ಬಳಿಕ ಮೆಸ್ಕಾಂ ಜೆಇ ಅವರ ಗಮನಕ್ಕೆ ತಂದಾಗ ಮೀಟರ್‌ ರೀಡರ್‌ ಅವರ ಬಳಿ ವಿಚಾರಿಸಿದ್ದಾರೆ.
ಸುಂದರ ಬಂಗೇರ
ಮೆಸ್ಕಾಂ ಗ್ರಾಹಕ
ಕಿರಣ್‌ ಸರಪಾಡಿ
Advertisement

Udayavani is now on Telegram. Click here to join our channel and stay updated with the latest news.

Next