Advertisement

ಮೆಸ್ಕಾಂ ವಿದ್ಯುತ್‌ ಬಿಲ್‌ ದೂರು : ತ್ವರಿತ ಸ್ಪಂದನೆಗೆ ಕೋಟ ಸೂಚನೆ

10:08 AM Jun 07, 2020 | Team Udayavani |

ಮಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ವಿದ್ಯುತ್‌ ಬಿಲ್‌ ಅಧಿಕ ಬಂದಿರುವುದಾಗಿ ಸಾರ್ವಜನಿಕರಿಂದ ವ್ಯಕ್ತವಾಗಿರುವ ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಈ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದ ಸಚಿವರು, ಮಾರ್ಚ್‌-ಎಪ್ರಿಲ್‌ ಬಿಲ್ಲನ್ನು ಒಟ್ಟಿಗೆ ನೀಡಿರುವುದರಿಂದ ಮೊತ್ತ ಅಧಿಕವಾಗಿರುವುದು ಸಹಜ. ಆದರೆ ಪ್ರತೀ ಯುನಿಟ್‌ ದರ ಲೆಕ್ಕ ಹಾಕುವಾಗ ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರಿಂದ ಅತೃಪ್ತಿ ವ್ಯಕ್ತವಾಗಿವೆ. ಈ ನಿಟ್ಟಿನಲ್ಲಿ ಮೆಸ್ಕಾಂ ಸಾರ್ವಜನಿಕ ಕುಂದು-ಕೊರತೆ ಸಭೆ ನಡೆಸಿ, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಬೇಕು. ಸಾಮಾಜಿಕ ಜಾಲತಾಣ, ಸಹಾಯವಾಣಿಗಳ ಮೂಲಕವೂ ದೂರುಗಳಿಗೆ ತ್ವರಿತ ಪರಿಹಾರ ನೀಡಬೇಕು. ಬಿಲ್‌ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಬೇಕು ಎಂದರು.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್‌ಆರ್‌. ಮಾತನಾಡಿ, ಗ್ರಾಹಕರಿಗೆ ನಿಗದಿತ ದರದಲ್ಲಿಯೇ ಬಿಲ್‌ ನೀಡಲಾಗಿದ್ದು, ಯಾವುದೇ ಲೋಪವಾಗಿಲ್ಲ. ಬಡ್ಡಿ ಕೂಡ ಹಾಕಿಲ್ಲ. ಹೆಚ್ಚುವರಿಯಾಗಿ ಬಿಲ್‌ನಲ್ಲಿ ಮೊತ್ತ ನಮೂದಿಸಿದ್ದರೆ, ಮುಂದಿನ ಬಿಲ್‌ನಲ್ಲಿ ಹೊಂದಾಣಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಕಂತುಗಳಲ್ಲಿ ಪಾವತಿ ಅವಕಾಶ
ಬಿಲ್‌ ಮೊತ್ತವನ್ನು ಕಂತುಗಳಾಗಿ ಪಾವತಿಸ ಬಹುದು. ಯಾವುದೇ ದೂರುಗಳಿಗೆ ಆಯಾ ಮೆಸ್ಕಾಂ ಉಪವಿಭಾಗದ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹರಿಸಿ ಕೊಳ್ಳ ಬಹುದು. ಸಹಾಯವಾಣಿ ಸಂಖ್ಯೆ 1912 ಅಥವಾ ವಾಟ್ಸ್‌ಆ್ಯಪ್‌ 9483041912ಕ್ಕೆ ದೂರು ನೀಡಬಹುದು ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.

ಮಳೆಗಾಲಕ್ಕೆ ಸಿದ್ಧತೆ
ಮುಖ್ಯ ಅಭಿಯಂತ ಮಂಜಪ್ಪ ಅವರು ಮಳೆಗಾಲಕ್ಕೆ ಪೂರ್ವ ತಯಾರಿಯ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. 24 ಗಂಟೆಗಳ ಕಾರ್ಯನಿರ್ವಹಿಸುವ ಕಂಟ್ರೋಲ್‌ ರೂಂ (ಸಂಖ್ಯೆ 1912) ನಿರಂತರವಾಗಿ ಗ್ರಾಹಕರ ಅಹವಾಲುಗಳಿಗೆ ಸ್ಪಂದಿಸಲಿದೆ ಎಂದು ತಿಳಿಸಿದರು.

Advertisement

ಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಪದ್ಮಾವತಿ, ಮೇಯರ್‌ ದಿವಾಕರ್‌, ಜಿಲ್ಲಾಧಿಕಾರಿ ಸಿಂಧೂ. ರೂಪೇಶ್‌, ಅಪರ ಜಿಲ್ಲಾಧಿಕಾರಿ ರೂಪಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next