Advertisement

ಮೆಸ್ಕಾಂ ಬಿಲ್‌ ಗ್ರಾಹಕರಿಗೆ ಮೊಬೈಲ್‌ ಸಂದೇಶ: ದಯಾನಂದ್‌

03:04 PM Oct 27, 2017 | |

ಉಳ್ಳಾಲ: ಮೆಸ್ಕಾಂನ ಬಿಲ್‌ ಮೊತ್ತ, ಪಾವತಿಯಾಗಿರುವ ಬಗ್ಗೆ ಹಾಗೂ ಬಾಕಿಯಿದ್ದಲ್ಲಿ ಮೊಬೈಲ್‌ನಲ್ಲಿ ಸಂದೇಶ ಕಳುಹಿಸುವ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಗ್ರಾಹಕರ ಮೊಬೈಲ್‌ ಸಂಖ್ಯೆ ಸಂಗ್ರಹ ಮಾಡಲಾಗಿದೆ ಎಂದು ಉಳ್ಳಾಲ ವಿಭಾಗದ ಸಹಾಯಕ ಕಾರ್ಯನಿರ್ವಹಕ ಅಭಿಯಂತರ ದಯಾನಂದ ತಿಳಿಸಿದರು. 

Advertisement

ಉಳ್ಳಾಲ ಚೆಂಬುಗುಡ್ಡೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಕಚೇರಿಯಲ್ಲಿ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ಉಳ್ಳಾಲ ಉಪ ವಿಭಾಗದ ಜನಸಂಪರ್ಕ ಸಭೆಯಲ್ಲಿ ಮೆಸ್ಕಾಂ ಗ್ರಾಹಕರಿಗೆ ಅವರು ಮಾಹಿತಿ ನೀಡಿದರು.

ಸಭೆಯಲ್ಲಿ ಸೋಮೇಶ್ವರ ಗ್ರಾಮ ಪಂಚಾಯತ್‌ ಸದಸ್ಯ ಹರಿಶ್ಚಂದ್ರ ಅಡ್ಕ ಅವರು ಮೆಸ್ಕಾಂ ದೂರವಾಣಿ ಸಂಪರ್ಕದ ಸಮಸ್ಯೆ ಸೇರಿದಂತೆ ಕೋಟೆಕಾರಿನಿಂದ ಸೋಮೇಶ್ವರ ಸಂಪರ್ಕಿಸುವ ರಸ್ತೆಯಲ್ಲಿ ಬೀದಿ ದೀಪದ ಕೊರತೆಯ ಬಗ್ಗೆ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ದಯಾನಂದ್‌ ಅವರು ಉಳ್ಳಾಲ ನಗರಸಭೆ ಈ ಕಾರ್ಯಕ್ಕೆ ಈಗಾಗಲೇ 57 ಲಕ್ಷ ರೂ. ಹಣ ಪಾವತಿಸಿದೆ. ಕಂಬದಲ್ಲೇ ಮೀಟರ್‌ ಹಾಗೂ ಸ್ವಯಂಚಾಲಿತ ಸ್ವಿಚ್‌ ಅಳವಡಿಸಲಿದ್ದು, ಇದು ಉತ್ತಮ ಯೋಜನೆಯಾಗಿದೆ ಎಂದರು.

ಅಲೆದಾಡಿಸುವುದೇಕೆ?
ವಿದ್ಯುತ್‌ ಸಂಪರ್ಕ ಪಡೆಯಲು ಡೋರ್‌ ನಂಬರ್‌ ಸಹಿತ ದಾಖಲೆಗಳನ್ನು ಮಾತ್ರವೇ ನೀಡಬೇಕಾಗುತ್ತದೆ, ಆದರೆ ಪಿಡಿಒ ಅವರಿಂದ ನಿರಪೇಕ್ಷಣ ಪತ್ರವೂ ಪಡೆಯಬೇಕು ಎನ್ನುವ ನಿಯಮ ಎಲ್ಲೂ ಇಲ್ಲ. ಸುಖಾಸುಮ್ಮನೆ ಬಡವರನ್ನು ಅಲೆದಾಡಿಸುವುದೇಕೆ ಎಂದು ಗ್ರಾಹಕ ಅಬ್ಟಾಸ್‌ ಉಚ್ಚಿಲ್‌ ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭಾಧ್ಯಕ್ಷ ಹುಸೈನ್‌ ಕುಂಞಿ ಮೋನು, ಸದಸ್ಯ ದಿನೇಶ್‌ ರೈ, ಮೆಸ್ಕಾಂ ಅತ್ತಾವರ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರಾಜಾರಾಮ್‌, ಸಹಾಯಕ ಅಭಿಯಂತರರಾದ ಪ್ರವೀಣ್‌, ರಾಜೇಶ್‌, ತಾಂತ್ರಿಕ ವಿಭಾಗ ಅಭಿಯಂತರೆ ನೀನಾ, ಲೆಕ್ಕಾಧಿಕಾರಿ ಮೆಲ್ವಿನ್‌, ಕಿರಿಯ ಅಭಿಯಂತರರಾದ ವಿನೋದ್‌, ನಿತೇಶ್‌, ಗುತ್ತಿಗೆದಾರ ಟಿ.ಎಸ್‌.ಅಬೂಬಕ್ಕರ್‌, ಮುಖಂಡರಾದ ಸೀತಾರಾಮ್‌ ಬಂಗೇರ, ಸಂತೋಷ್‌ ಭಂಡಾರಿ ಉಪಸ್ಥಿತರಿದ್ದರು.

Advertisement

10 ರೂ. ಕಾಯಿನ್‌ ಸ್ವೀಕರಿಸುತ್ತಿಲ್ಲ 
ಮೆಸ್ಕಾಂನಲ್ಲಿ ಸಂಜೆ ಐದು ಗಂಟೆ ಬಳಿಕ ವಿದ್ಯುತ್‌ ಬಿಲ್‌ ಪಾವತಿಸಲು ಬಂದರೆ 500 ಹಾಗೂ 2000 ರೂ.ನೋಟು ಸ್ವೀಕರಿಸದ ಕಾರಣ ಗ್ರಾಹಕರು ಹಿಂದಕ್ಕೆ ಹೋಗಬೇಕು, ಇಲ್ಲವೇ ಚಿಲ್ಲರೆಗಾಗಿ ಪರದಾಡಬೇಕು. ಮರುದಿನ ಸಿಬಂದಿ ಫ್ಯೂಸ್‌ ತೆಗೆದುಕೊಂಡು ಹೋಗುತ್ತಾರೆ. ಅಲ್ಲದೆ 10 ರೂ.ಕಾಯಿನ್‌ ಅನ್ನು ಮೆಸ್ಕಾಂನಲ್ಲಿ ಸ್ವೀಕರಿಸುವುದಿಲ್ಲ ಗ್ರಾಹಕ ಜೀವನ್‌ ಉಳಿಯ ದೂರಿದರು.

ದಾರಿದೀಪ ಅಳವಡಿಸಿ
14ನೇ ಹಣಕಾಸು ಯೋಜನೆಯಡಿ ದಾರಿದೀಪಗಳ ಅಳವಡಿಕೆ ನಿಟ್ಟಿನಲ್ಲಿ ನಗರ ಸಭೆಯಿಂದ ಹಣ ಪಾವತಿಸಲಾಗಿದ್ದರೂ, ಕಂಬ ಅಳವಡಿಸುವ ಕೆಲಸ ಮುಗಿದಿಲ್ಲ. ಶೀಘ್ರ ಚುನಾವಣೆ ಇರುವುದರಿಂದ ಬಳಿಕ ಕೆಲಸ ಮಾಡಲು ಆಗದ ಕಾರಣ ಕಂಬ ಆದಷ್ಟು ಬೇಗ ಅಳವಡಿಸಿ ದಾರಿದೀಪ ಹಾಕಲು ಅವಕಾಶ ಕಲ್ಪಿಸಿ ಎಂದು ನಗರಸಭಾ ಸದಸ್ಯ ಬಾಝಿಲ್‌ ಡಿ’ಸೋಜಾ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next