Advertisement

Tomorrow ಬೆಳಗಾವಿಯಲ್ಲಿ ಕಿತಾಪತಿಗೆ ಸಜ್ಜಾದ ಎಂಇಎಸ್‌ ಪುಂಡರು

09:22 PM Oct 30, 2023 | Team Udayavani |

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಬಂತೆಂದರೆ ಬೆಳಗಾವಿಯಲ್ಲಿ ತಕರಾರು ತೆಗೆಯುವ ಮಹಾರಾಷ್ಟ್ರ ಏಕೀಕರಣ ಸಮಿತಿ ಈ ಸಲವೂ ಕರ್ನಾಟಕದ ವಿರುದ್ಧ ನಡೆಸುವ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡದಿದ್ದರೂ ಕಳ್ಳ ದಾರಿಯಿಂದ ಬೆಳಗಾವಿಗೆ ಬರುವುದಾಗಿ ಮಹಾರಾಷ್ಟ್ರದ ಉದ್ಧವ ಠಾಕ್ರೆ ಬಣದ ಶಿವಸೇನೆ ಪಕ್ಷದವರು ಉದ್ಧಟತನ ಮೆರೆದಿದ್ದಾರೆ. ಇದಕ್ಕೆ ಸಿಎಂ ಏಕನಾಥ ಶಿಂಧೆ ಸಹ ಧ್ವನಿಗೂಡಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

Advertisement

ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿರೋಧಿಸಲು ಎಂಇಎಸ್‌ ಕಾರ್ಯಕರ್ತರು ಕರಾಳ ದಿನ ಆಚರಿಸಿ ಕಪ್ಪು ಪಟ್ಟಿ ಕಟ್ಟಿಕೊಂಡು ರ‍್ಯಾಲಿ ನಡೆಸುತ್ತಾರೆ. ಈ ಸಲವೂ ಪ್ರತಿಭಟನೆ ನಡೆಸಲು ಎಂಇಎಸ್‌ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಿಲ್ಲಾಡಳಿತ ಇದುವರೆಗೆ ಅನುಮತಿ ನೀಡಿಲ್ಲ.

ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ಅನುಮತಿ ನೀಡದಿದ್ದರೂ ನಾವು ಕಳ್ಳ ದಾರಿಯಿಂದ ಬೆಳಗಾವಿಗೆ ನುಗ್ಗಿ ರ್ಯಾಲಿಯಲ್ಲಿ ಭಾಗವಹಿಸುತ್ತೇವೆ. ಕರ್ನಾಟಕದಲ್ಲಿ ಮರಾಠಿಗರ ಮನೆಯಲ್ಲಿ ಹಲವಾರು ವರ್ಷಗಳಿಂದ ಅನ್ಯಾಯವಾಗುತ್ತಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ನ್ಯಾಯಯುತ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೆ ಕರ್ನಾಟಕ ಸರ್ಕಾರ ಮರಾಠಿಗರ ಮೇಲೆ ಶೋಷಣೆ ಮಾಡುತ್ತಿದೆ. ಮರಾಠಿಗರ ಮೇಲೆ ಬಲವಂತವಾಗಿ ಕನ್ನಡ ಭಾಷೆ ಹೇರುತ್ತಿದೆ. ಕರ್ನಾಟಕ ರಾಜ್ಯೋತ್ಸವದಂದು ನಾವು ನಡೆಸುತ್ತಿರುವ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಬೇಕು. ನಮ್ಮ ಬೇಡಿಕೆ ತಿಳಿಸಲು ಮೌನ ಮೆರವಣಿಗೆಗೆ ಅವಕಾಶ ಮಾಡಿಕೊಡಬೇಕು ಎಂದು ಕೊಲ್ಲಾಪುರ ಶಿವಸೇನೆ ಅಧ್ಯಕ್ಷ ವಿಜಯ ದೇವಣೆ ಹಾಗೂ ಸಂಜಯ ಪವಾರ ಆಗ್ರಹಿಸಿದ್ದಾರೆ.

ಕರಾಳ ದಿನಕ್ಕೆ ಮಹಾರಾಷ್ಟ್ರ ನಾಯಕರು ಬೆಳಗಾವಿಗೆ ಬರುತ್ತಾರೆ: ಏಕನಾಥ ಶಿಂಧೆ
ನ.1ರಂದು ಎಂಇಎಸ್‌ನ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೂ ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ ಹೋಗುತ್ತಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅನುಮತಿ ಇಲ್ಲದಿದ್ದರೂ ಬೆಳಗಾವಿಯಲ್ಲಿ ಅಶಾಂತಿ ಸೃಷ್ಟಿಸಲು ಬರುವ ನಾಯಕರಿಗೆ ಅವಕಾಶ ನೀಡಬಾರದು. ಕನ್ನಡ ಹಬ್ಬದ ಸಂದರ್ಭದಲ್ಲಿ ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು ಎಂದು ವಿವಿಧ ಕನ್ನಡ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.

ಅನುಮತಿ ತಿರಸ್ಕರಿಸಿದ
ಪೊಲೀಸ್‌ ಆಯುಕ್ತರು
ಈ ಬಾರಿ ಕರಾಳ ದಿನಾಚರಣೆಗೆ ಸೈಕಲ್‌ ರ್ಯಾಲಿ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿ ಎಂಇಎಸ್‌ ಕಾರ್ಯಕರ್ತರು ಮಹಾನಗರ ಪೊಲೀಸ್‌ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದ್ದು, ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ. 67 ವರ್ಷದಿಂದ ನಾವು ನ.1ರಂದು ಸೈಕಲ್‌ ರ್ಯಾಲಿ ನಡೆಸಿಕೊಂಡು ಬಂದಿದ್ದೇವೆ. ಈ ಸಲವೂ ಇದಕ್ಕೆ ಜಿಲ್ಲಾಡಳಿತ ಅನುಮತಿ ನೀಡಬೇಕು. ಧರ್ಮವೀರ ಸಂಭಾಜಿ ವೃತ್ತದಿಂದ ಅಂದು ಬೆಳಗ್ಗೆ 9 ಗಂಟೆಗೆ ರ್ಯಾಲಿ ಆರಂಭವಾಗಿ ನಗರದ ಪ್ರಮುಖ ಮಾರ್ಗದಲ್ಲಿ ಸಾಗಿ ಮರಾಠಾ ಮಂದಿರದಲ್ಲಿ ಮುಕ್ತಾಯವಾಗಲಿದೆ. ಕೂಡಲೇ ಇದಕ್ಕೆ ಅನುಮತಿ ನೀಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸ್‌ ಕಮಿಷನರ್‌ ಸಿದ್ದರಾಮಪ್ಪ, ಕರಾಳ ದಿನಾಚರಣೆ ನಡೆಸಲು ಅನುಮತಿ ನೀಡುವುದಿಲ್ಲ ಎಂದು ತಿರಸ್ಕರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next