ಬೆಳಗಾವಿ: ಗಡಿಭಾಗ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ ತೋರಿದೆ. ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿ ಕುಣಿದ ಕಾರಣಕ್ಕೆ ವಧು-ವರ ಸೇರಿ ಕನ್ನಡಿಗ ಯುವಕರ ಮೇಲೆ ಎಂಇಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಬೆಳಗಾವಿ ತಾಲೂಕಿನ ಧಾಮಣೆ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ವರ ಸಿದ್ದು ಸೈಬಣ್ಣವರ್, ವಧು ರೇಷ್ಮಾ, ವರನ ತಮ್ಮ ಭರಮಾ ಸೇರಿ ಐವರ ಮೇಲೆ ಹಲ್ಲೆ ಮಾಡಲಾಗಿದೆ. ವಧು ವರ ಸೇರಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ. ಆತನಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಏನಿದು ಘಟನೆ:
ಗುರುವಾರ ಧಾಮಣೆ ಗ್ರಾಮದಲ್ಲಿ ಸೈಬಣ್ಣವರ ಕುಟುಂಬದ ಮದುವೆ ಸಮಾರಂಭವಿತ್ತು. ಹೀಗಾಗಿ ಕುಟುಂಬಸ್ಥರು ರಾತ್ರಿ ಬ್ಯಾಂಡ್ ನೊಂದಿಗೆ ಮೆರವಣಿಗೆ ಮೂಲಕ ವಧು-ವರನನ್ನು ಮನೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಯುವಕರು ಕನ್ನಡ ಧ್ವಜ ಹಿಡಿದು ‘ಕರುನಾಡೇ ಕೈ ಚಾಚಿದೆ ನೋಡೆ…’ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದರು.
ಇದನ್ನೂ ಓದಿ:ಸ್ತ್ರೀಯರ ವೇಷದಲ್ಲಿ ಫೈನಾನ್ಸ್‌ನಲ್ಲಿ ಕಳವಿಗೆ ಯತ್ನ: ಸೈರನ್ ಶಬ್ದ ಕೇಳಿ ಆರೋಪಿಗಳು ಪರಾರಿ
ಈ ವೇಳೆ ಸ್ಥಳಕ್ಕಾಗಮಿಸಿದ ಎಂಇಎಸ್ ನ ಕೆಲವು ಯುವಕರು ಕನ್ನಡ ಧ್ಚಜ ಹಿಡಿದು ಕನ್ನಡ ಹಾಡಿಗೆ ಡ್ಯಾನ್ಸ್ ಮಾಡಿದ್ದಕ್ಕೆ ಆಕ್ಷೇಪವೆತ್ತಿದ್ದಾರೆ. ಅಜಯ ಯಳ್ಳೂರಕರ, ಆಕಾಶ ಸೇರಿ ಹಲವು ಯುವಕರು ಹಲ್ಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಬೆಳಗಾವಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.
ಬೆಳಗಾವಿ ಅಧಿವೇಶನದ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ಕಿರಿಕ್ ಮಾಡಿದ್ದ ಎಂಇಎಸ್ ಇದೀಗ ಮತ್ತೆ ಬಾಲ ಬಿಚ್ಚಿದೆ. ಇವರ ವಿರುದ್ದ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.