Advertisement

ವಿಜಯ ಬ್ಯಾಂಕ್‌ ವಿಲೀನ ವಿರುದ್ಧ ಭುಗಿಲೆದ್ದ ಆಕ್ರೋಶ

04:38 AM Jan 04, 2019 | |

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಹುಟ್ಟಿ ದೇಶದೆಲ್ಲೆಡೆ ಎರಡು ಸಾವಿರಕ್ಕೂ ಅಧಿಕ ಶಾಖೆಗಳೊಂದಿಗೆ ಕರಾವಳಿ ಜನರ ಪಾಲಿನ ಹೆಮ್ಮೆಯ ಪ್ರತೀಕವಾಗಿರುವ ವಿಜಯ ಬ್ಯಾಂಕ್‌ ಅನ್ನು ಬ್ಯಾಂಕ್‌ ಆಫ್‌ ಬರೋಡ ಜತೆಗೆ ವಿಲೀನಗೊಳಿಸುವ ಕೇಂದ್ರ ಸರಕಾರದ ತೀರ್ಮಾನದ ವಿರುದ್ಧ ಜಿಲ್ಲೆಯಲ್ಲಿ ಇದೀಗ ಜನಾಕ್ರೋಶ ಭುಗಿಲೆದ್ದಿದೆ.  
ಅದರಲ್ಲಿಯೂ ಕಾಂಗ್ರೆಸ್‌ ನಾಯಕರು, ವಿಜಯ ಬ್ಯಾಂಕ್‌ ಅಸ್ತಿತ್ವಕ್ಕೆ ಧಕ್ಕೆಯುಂಟು ಮಾಡುವ ಕೇಂದ್ರ ಸರಕಾರದ ತೀರ್ಮಾನಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಇಡೀ ದೇಶದಲ್ಲೇ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಿನಲ್ಲಿ ಲಾಭ ಗಳಿಕೆಯಲ್ಲಿ ಮುಂಚೂಣಿಯಲ್ಲಿರುವ ವಿಜಯ ಬ್ಯಾಂಕ್‌ ಅನ್ನು ನಷ್ಟದಲ್ಲಿರುವ ಬ್ಯಾಂಕ್‌ಗಳ ಜತೆ ವಿಲೀನಗೊಳಿಸುವುದರ ಹಿಂದೆ ಹುನ್ನಾರ ಅಡಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಆರೋಪಿಸಿದ್ದಾರೆ.

ವಿಲೀನ ತೀರ್ಮಾನವನ್ನು ಕೈಬಿಡುವಂತೆ ಪ್ರಧಾನಿ ಹಾಗೂ ವಿತ್ತ ಸಚಿವರಿಗೆ ಪತ್ರ ಬರೆಯುವಂತೆ ವಿಧಾನ
ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಅವರನ್ನು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ವಿಜಯ ಬ್ಯಾಂಕ್‌ ವಿಲೀನಗೊಳಿಸುವುದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಸಮಾನ ಮನಸ್ಕರ ತಂಡವೊಂದು ಪ್ರತಿಭಟನೆ ನಡೆಸಿದ್ದಾರೆ.

ಎಲ್ಲ ಬ್ಯಾಂಕ್‌ ಎದುರು ಪ್ರತಿಭಟನೆ
ವಿಲೀನ ವಿರೋಧಿಸಿ ಜಿಲ್ಲೆಯ ಎಲ್ಲ ವಿಜಯ ಬ್ಯಾಂಕ್‌ ಕಚೇರಿಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ವಿಜಯ ಬ್ಯಾಂಕ್‌ ಎ.ಬಿ. ಶೆಟ್ಟಿ ಮತ್ತು ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಕನಸಿನ ಕೂಸು ಆಗಿತ್ತು. ಆದರೆ, ಅವರದೇ ಸಮುದಾಯಕ್ಕೆ ಸೇರಿದ ಸಂಸದ ನಳಿನ್‌ ಕುಮಾರ್‌ ಅವರು ಕೇಂದ್ರ ಸರಕಾರದ ಈ ಪ್ರಕ್ರಿಯೆಯನ್ನು ತಡೆಯಬೇಕಿತ್ತು ಎಂದರು.

ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ ಮಾತನಾಡಿ, ಕರಾವಳಿಯ ಪ್ರತಿಷ್ಠೆಯಂತಿರುವ ವಿಜಯ ಬ್ಯಾಂಕ್‌ ಉಳಿಸಲು ಕಾನೂನು ರೀತಿ ಹೋರಾಟ ಮಾಡುತ್ತೇವೆ. ಪ್ರಧಾನಿ ಮೋದಿ ಅವರು ತಮ್ಮ ರಾಜ್ಯದ ವ್ಯವಸ್ಥೆಯನ್ನು ಉಳಿಸುವ ಸಲುವಾಗಿ ಲಾಭದಲ್ಲಿರುವ ವಿಜಯ ಬ್ಯಾಂಕನ್ನು ವಿಲೀನಗೊಳಿಸುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಗ್ರಾಹಕರಿಗೆ ಡಿವಿಡೆಂಟ್‌ ನೀಡುವ ಬ್ಯಾಂಕ್‌ಗಳಲ್ಲಿ ವಿಜಯ ಬ್ಯಾಂಕ್‌ ಪ್ರಮುಖ ಎಂದರು.

Advertisement

ಪ್ರತಿಭಟನೆಯಲ್ಲಿ ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ, ಹೋರಾಟಗಾರ ಎಂ.ಜಿ. ಹೆಗ್ಡೆ, ನ್ಯಾಯವಾದಿ ಮೊಹಮ್ಮದ್‌ ಹನೀಫ್‌, ದಿನೇಶ್‌ ಹೆಗ್ಡೆ, ಮಾಧವ ಶೆಟ್ಟಿ, ಎಂ. ದೇವದಾಸ್‌, ಪಿ.ವಿ. ಮೋಹನ್‌, ಯೋಗೀಶ್‌ ಕುಮಾರ್‌ ಜೆಪ್ಪು, ಮೊಹಮ್ಮದ್‌ ಮುಸ್ತಫಾ, ಬಿ.ಎಂ. ಮಾಧವ, ವಾಸುದೇವ ಉಚ್ಚಿಲ ಮೊದಲಾದವರು ಇದ್ದರು.

ಪಿಎಂಗೆ ಪತ್ರ: ಐವನ್‌ 
ರಾಜ್ಯದ ಹೆಮ್ಮೆಯ ವಿಜಯ ಬ್ಯಾಂಕ್‌ ಅನ್ನು ಬ್ಯಾಂಕ್‌ ಆಫ್‌ ಬರೋಡದಲ್ಲಿ ವಿಲೀನಗೊಳಿಸುವ ಕೇಂದ್ರ ಸಚಿವ ಸಂಪುಟದ ನಿರ್ಣಯ ಕೈಬಿಡುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವಂತೆ ಆಗ್ರಹಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮನವಿ ಸಲ್ಲಿಸಿದ್ದಾರೆ. 10,000ಕ್ಕೂ ಅಧಿಕ ನೌಕರರು ಉದ್ಯೋಗ ನಷ್ಟದ ಭೀತಿಯಲ್ಲಿದ್ದಾರೆ. ದ.ಕ. ಜಿಲ್ಲೆಯಲ್ಲಿ ಹುಟ್ಟಿದ ವಿಜಯ ಬ್ಯಾಂಕ್‌ ಕೃಷಿಕರ ಬ್ಯಾಂಕ್‌ ಎಂಬ ಹೆಗ್ಗಳಿಕೆ ಹೊಂದಿದ್ದು ಅದಕ್ಕೆ ಬಹುದೊಡ್ಡ ಹೊಡೆತ ಎದುರಾಗಲಿದೆ ಎಂದರು.

ವಿಜಯ ಬ್ಯಾಂಕ್‌ ವಿಲೀನ; ಕರಾವಳಿ ಸಂಸದರು, ಕೇಂದ್ರ ಸಚಿವರ ಮೌನ ಯಾಕೆ: ಖಾದರ್‌ ಪ್ರಶ್ನೆ
ಮಂಗಳೂರು: ಲಾಭದಲ್ಲಿರುವ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ಬ್ಯಾಂಕ್‌ ಆಫ್ ಬರೋಡದೊಂದಿಗೆ ವಿಲೀನಗೊಳಿಸಿ “ಬ್ಯಾಂಕ್‌ ಆಫ್ ಬರೋಡ’ ಹೆಸರನ್ನೇ ಅಂತಿಮಗೊಳಿಸಿ ಕೇಂದ್ರ ಸರಕಾರ ನಿರ್ಧಾರ ಕೈಗೊಂಡಿರುವುದು ಖಂಡನೀಯ. ಹಾಗೂ ಇದರ ವಿರುದ್ಧ ಧ್ವನಿಯೆತ್ತದ ಕರಾವಳಿ ಭಾಗದ ಸಂಸದರು,  ಕೇಂದ್ರ ಸಚಿವರೇಕೆ ಮೌನವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರು, ಬ್ಯಾಂಕ್‌ ಆಫ್ ಬರೋಡ 3,000 ಕೋ.ರೂ. ನಷ್ಟದಲ್ಲಿದ್ದರೆ, ವಿಜಯ ಬ್ಯಾಂಕ್‌ 200 ಕೋ. ರೂ. ಲಾಭದಲ್ಲಿದೆ. ವಿಲೀನಗೊಳಿಸುವಾಗ ಲಾಭದಲ್ಲಿರುವ ಬ್ಯಾಂಕ್‌ ಹೆಸರನ್ನೇ ಇಡಬೇಕಿತ್ತು. ಆದರೆ ಕೇಂದ್ರವು  ಉತ್ತಮ ಆರ್ಥಿಕ ಆಡಳಿತ ನಡೆಸಿದ ವಿಜಯ ಬ್ಯಾಂಕ್‌ ಹೆಸರನ್ನೇ ಕೈಬಿಟ್ಟಿದೆ. ಇದು ಯಾವ ನ್ಯಾಯ?  ಬ್ಯಾಂಕ್‌ ಆಫ್ ಬರೋಡ ಗುಜರಾತಿನ ಬ್ಯಾಂಕ್‌ ಎಂದು ಈ ಹೆಸರನ್ನು ಇಡಲಾಗಿದೆಯೇ? ದೇನಾ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್ ಬರೋಡಕ್ಕೆ ಹಲವು ಮಂದಿ ಮೋಸ ಮಾಡಿದ್ದರಿಂದಲೇ ಅವುಗಳು ನಷ್ಟಕ್ಕೆ ತುತ್ತಾಗಿವೆ ಎಂಬ ಮಾಹಿತಿಯಿದೆ. ಮೂರೂ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ “ಬ್ಯಾಂಕ್‌ ಆಫ್ ಬರೋಡ’ ಹೆಸರಿಟ್ಟಿರುವ ಕೇಂದ್ರ ಸರಕಾರ ಈ ಬ್ಯಾಂಕ್‌ಗಳಿಗೆ ಮೋಸ ಮಾಡಿದವರ ಹೆಸರುಗಳನ್ನು ಬಹಿರಂಗಗೊಳಿಸಲಿ. ಆಗ ನಿಜವಾದ ಸಂಗತಿ ಜನರಿಗೆ ತಿಳಿಯಲಿದೆ. ಬದಲಾಗಿ, ಏಕಪಕ್ಷೀಯ ನಿರ್ಧಾರ ಕೈಗೊಳ್ಳಬಾರದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next