Advertisement

ಬಿಸಿಗಾಳಿಯ ಹಾವಳಿ; 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಸಿಲ ಧಗೆ

10:09 PM Apr 27, 2022 | Team Udayavani |

ನವದೆಹಲಿ: ದೇಶಾದ್ಯಂತ 15ಕ್ಕೂ ಹೆಚ್ಚು ರಾಜ್ಯಗಳು ಕಾದ ಬಾಣಲೆಯಂತಾಗಿವೆ. ವಿಪರೀತ ಬಿಸಿಳಿನ ಝಳವು ಜನರಿಗೆ ಮನೆಯಿಂದ ಹೊರಗೆ ಕಾಲಿಡಲೂ ಆಗದಂಥ ಸ್ಥಿತಿಯನ್ನು ನಿರ್ಮಿಸಿದೆ.

Advertisement

ದೆಹಲಿ, ರಾಜಸ್ಥಾನ, ಗುಜರಾತ್‌, ಬಿಹಾರ, ಜಾರ್ಖಂಡ್‌, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಗೆ ಬಿಸಿಗಾಳಿ ವ್ಯಾಪಿಸಿದ್ದು, ಈ ಬಗ್ಗೆ ಆದಷ್ಟು ಎಚ್ಚರಿಕೆಯಲ್ಲಿರುವಂತೆ ಪ್ರಧಾನಿ ನರೇಂದ್ರ ಮೋದಿ ಅವರೂ ಸೂಚಿಸಿದ್ದಾರೆ.

ಬಿಸಿಗಾಳಿಯ ವ್ಯಾಪಿಸುವಿಕೆ ಬಗ್ಗೆ ಬುಧವಾರ ಪ್ರಸ್ತಾಪಿಸಿರುವ ಪ್ರಧಾನಿ ಮೋದಿ, ಕೂಡಲೇ ಎಲ್ಲ ರಾಜ್ಯಗಳೂ ವಿಶೇಷವಾಗಿ ಆಸ್ಪತ್ರೆಗಳಲ್ಲಿ ಸುರಕ್ಷತಾ ಆಡಿಟ್‌ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ದೇಶದ ಹಲವು ಭಾಗಗಳಲ್ಲಿ ತಾಪಮಾನವು ಏರಿಕೆಯಾಗುತ್ತಿರುವುದರಿಂದಲೇ ಅಗ್ನಿ ಅವಘಡಗಳ ಸಂಖ್ಯೆ ವಿಪರೀತ ಹೆಚ್ಚಳವಾಗುತ್ತಿದೆ. ಕಾಡ್ಗಿಚ್ಚು, ಆಸ್ಪತ್ರೆಗಳು ಸೇರಿದಂತೆ ವಿವಿಧ ಕಟ್ಟಡಗಳಲ್ಲಿ ಬೆಂಕಿ ಆಕಸ್ಮಿಕಗಳು ಸಂಭವಿಸಿ ಅಮಾಯಕರು ಸಾವಿಗೀಡಾಗುತ್ತಿದ್ದಾರೆ.

ಹೀಗಾಗಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಅಗ್ನಿ ಸುರಕ್ಷತೆಗೆ ಸಂಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಗಳಲ್ಲಿ ಕೂಡ ಅಗ್ನಿ ಸುರಕ್ಷತಾ ಆಡಿಟ್‌ಗಳನ್ನು ಮಾಡಿ, ಬೆಂಕಿ ಅವಘಡದಂಥ ಘಟನೆಗಳನ್ನು ತಪ್ಪಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Advertisement

ದೆಹಲಿಗೆ ಡಬಲ್‌ ಆಘಾತ:
ಸುಡು ಬಿಸಿಲಿನಿಂದ ಬೇಯುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಗೆ ಡಬಲ್‌ ಆಘಾತ ಉಂಟಾಗಿದೆ. ವಿಪರೀತ ಉಷ್ಣತೆಯಿಂದಾಗಿ ದೆಹಲಿ ಹೊರವಲಯದ ಭಾಲ್‌ಸ್ವಾ ಎಂಬಲ್ಲಿನ ತ್ಯಾಜ್ಯ ಹಾಕುವ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದರ ಪರಿಣಾಮವೆಂಬಂತೆ, ಎದ್ದಿರುವ ವಿಷಕಾರಿ ದಟ್ಟ ಹೊಗೆಯು ರಾಜಧಾನಿಯಾದ್ಯಂತ ವ್ಯಾಪಿಸುತ್ತಿದೆ.

ಇನ್ನೊಂದೆಡೆ, ಒಂದೆರಡು ದಿನಗಳಲ್ಲೇ ಮತ್ತೆ 2-3 ಡಿ.ಸೆ.ನಷ್ಟು ತಾಪಮಾನ ಹೆಚ್ಚಳವಾಗಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಜತೆಗೆ, ದೆಹಲಿಯಾದ್ಯಂತ ಯೆಲ್ಲೋ ಅಲರ್ಟ್‌ ಕೂಡ ಘೋಷಿಸಿದೆ.

ಸಾರ್ವಕಾಲಿಕ ದಾಖಲೆಯತ್ತ ದೆಹಲಿ?
ಮಂಗಳವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನ 40.8 ಡಿ.ಸೆ. ಆಗಿತ್ತು. ಬುಧವಾರ ಇದು 42 ಡಿ.ಸೆ.ಗೆ ತಲುಪಿದ್ದು, ಗುರುವಾರ 44 ಡಿ.ಸೆ. ಆಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಷ್ಟೇ ಅಲ್ಲ, ಗರಿಷ್ಠ ತಾಪಮಾನವು 46 ಡಿ.ಸೆ.ಗೆ ತಲುಪುವ ಎಚ್ಚರಿಕೆಯನ್ನೂ ಅದು ಕೊಟ್ಟಿದೆ. ಒಂದು ವೇಳೆ, ಇದು ನಿಜವಾದರೆ ದೆಹಲಿಯು ಗರಿಷ್ಠ ತಾಪಮಾನದಲ್ಲಿ ಸಾರ್ವಕಾಲಿಕ ದಾಖಲೆ ಬರೆಯಲಿದೆ. ಏಕೆಂದರೆ, ಈ ಹಿಂದೆ 1941ರ ಏಪ್ರಿಲ್‌ 29ರಂದು 45.6 ಡಿ.ಸೆ. ತಾಪಮಾನ ದಾಖಲಾಗುವ ಮೂಲಕ ದೆಹಲಿಯ ಇತಿಹಾಸದಲ್ಲೇ ಗರಿಷ್ಠ ತಾಪಮಾನ ಎಂಬ ದಾಖಲೆ ಸೃಷ್ಟಿಯಾಗಿತ್ತು.

ಮಾ.14ರಿಂದ ಈವರೆಗೆ ಎಷ್ಟು ರಾಜ್ಯಗಳಿಗೆ ಬಿಸಿಗಾಳಿ ವ್ಯಾಪಿಸಿದೆ? 
ದೆಹಲಿಯಲ್ಲಿ ಗರಿಷ್ಠ ತಾಪಮಾನ ಎಷ್ಟಕ್ಕೇರುವ ಭೀತಿಯಿದೆ? – 46 ಡಿ.ಸೆ.
ಈ ಹಿಂದಿನ ಸಾರ್ವಕಾಲಿಕ ಗರಿಷ್ಠ ತಾಪಮಾನ ದಾಖಲೆ – 45.6
ಆ ದಾಖಲೆ ಆಗಿದ್ದು ಯಾವಾಗ? – ಏ.29, 1941
1971-2019ರವರೆಗೆ ಭಾರತದಲ್ಲಿ ಬಿಸಿಗಾಳಿಯಿಂದ ಮೃತಪಟ್ಟವರು – 17,000

 

Advertisement

Udayavani is now on Telegram. Click here to join our channel and stay updated with the latest news.

Next