ತಮಿಳಿನಲ್ಲೊಂದು “ಮರ್ಕ್ಯುರಿ’ ಎಂಬ ಸಿನಿಮಾ ತಯಾರಾಗಿದ್ದು ನಿಮಗೆ ಗೊತ್ತಿರಬಹುದು. ಈ ಚಿತ್ರದ ವಿಶೇಷವೆಂದರೆ ಇದು ಸೈಲೆಂಟ್ ಮೂವೀ. ಈ ಹಿಂದೆ “ಪುಷ್ಪಕ ವಿಮಾನ’ ಬಂದಿತ್ತು. ಈಗ “ಮರ್ಕ್ಯುರಿ’. ಪ್ರಭುದೇವ ಈ ಚಿತ್ರದ ನಾಯಕ. “ಪಿಜ್ಜಾ’, “ಜಿಗರ್‌ಥಂಡಾ’ ಚಿತ್ರಗಳನ್ನು ನಿರ್ದೇಶಿಸಿರುವ ಕಾರ್ತಿಕ್ ಸುಬ್ಬರಾಜು “ಮರ್ಕ್ಯುರಿ’ ಚಿತ್ರದ ನಿರ್ದೇಶಕರು. ಚಿತ್ರ ಏಪ್ರಿಲ್ 13 ರಂದು ಬಿಡುಗಡೆಯಾಗುತ್ತಿದೆ.
ಎಲ್ಲಾ ಓಕೆ, “ಮರ್ಕ್ಯುರಿ’ ಸಿನಿಮಾ ಬಗ್ಗೆ ಯಾಕೆ ಈ ಪೀಠಿಕೆ ಎಂದು ನೀವು ಕೇಳಬಹುದು. ಅದಕ್ಕೆ ಕಾರಣ ಪುಷ್ಕರ್ ಹಾಗೂ ರಕ್ಷಿತ್. ಹೌದು, ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಜೊತೆಯಾಗಿ “ಮರ್ಕ್ಯುರಿ’ ಸಿನಿಮಾದ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಪರಭಾಷಾ ಸಿನಿಮಾವೊಂದರ ವಿತರಣೆಗೂ ಪುಷ್ಕರ್ ಫಿಲಂಸ್ ಹಾಗೂ ಪರಂವಾ ಸ್ಟುಡಿಯೋ ಕೈ ಹಾಕಿದೆ.
ಅಷ್ಟಕ್ಕೂ ಈ ಚಿತ್ರದ ವಿತರಣೆ ಪಡೆಯಲು ಕಾರಣವೇನು ಎಂದರೆ ಹೊಸ ಪ್ರಯೋಗ ಎಂಬ ಉತ್ತರ ಬರುತ್ತದೆ. ಮೊದಲಿಗೆ ಇದೊಂದು ಸೈಲೆಂಟ್ ಸಿನಿಮಾ. ಇಲ್ಲಿ ಯಾವುದೇ ಭಾಷೆ ಇಲ್ಲ. ಜೊತೆಗೆ ಥ್ರಿಲ್ಲರ್ ಚಿತ್ರವಾಗಿದ್ದು, ಸಿನಿಮಾ ನೋಡಿದ ಪುಷ್ಕರ್ ಅಂಡ್ ಟೀಂ ಖುಷಿಯಾಗಿದೆ. ಈ ಕಾರಣದಿಂದ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡಲು ಮುಂದಾಗಿದೆ.
ಪಕ್ಕಾ ಕನ್ನಡ ಚಿತ್ರವನ್ನು ಬಿಡುಗಡೆ ಮಾಡುವಂತೆ “ಮರ್ಕ್ಯುರಿ’ ಸಿನಿಮಾವನ್ನು ಬಿಡುಗಡೆ ಮಾಡಲು ಪುಷ್ಕರ್ ಯೋಚಿಸಿದ್ದು, ಅದಕ್ಕಾಗಿ ಅಣಜಿ ನಾಗರಾಜ್ ಬಳಿ ಇದ್ದ “ಮರ್ಕ್ಯುರಿ’ ಟೈಟಲ್ ಅನ್ನು ಕೂಡಾ ಪಡೆದುಕೊಂಡಿದೆ. ಚಿತ್ರದ ಟೈಟಲ್ ಕಾರ್ಡ್ ಅನ್ನು ಸಂಪೂರ್ಣವಾಗಿ ಕನ್ನಡದಲ್ಲೇ ಹಾಕುವ ಯೋಚನೆ ಕೂಡಾ ಪುಷ್ಕರ್ ಅವರಿಗಿದೆ. ಈ ಬಗ್ಗೆ ಮಾತನಾಡುವ ಪುಷ್ಕರ್, “ಮರ್ಕ್ಯುರಿ ಸಿನಿಮಾ ನೋಡಿ ಖುಷಿಯಾದೆ.
ತುಂಬಾ ಚೆನ್ನಾಗಿ ಮಾಡಿದ್ದಾರೆ. ಮುಖ್ಯವಾಗಿ ಈ ಸಿನಿಮಾಕ್ಕೆ ಯಾವುದೇ ಭಾಷೆ ಇಲ್ಲ. ಅದೇ ಕಾರಣದಿಂದ ಇಲ್ಲಿ ಬಿಡುಗಡೆ ಮಾಡಲು ಮುಂದಾದೆವು. ಸಿಂಗಲ್ ಥಿಯೇಟರ್‌ನಲ್ಲಿ ಜಯಣ್ಣ ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ ನಾವು ಬಿಡುಗಡೆ ಮಾಡಲಿದ್ದೇವೆ. ನಮ್ಮ ಬ್ಯಾನರ್ ಮೂಲಕ ಹೊಸ ಬಗೆಯ ಸಿನಿಮಾವೊಂದನ್ನು ಬಿಡುಗಡೆ ಮಾಡುತ್ತಿರುವ ಖುಷಿ ಇದೆ’ ಎನ್ನುತ್ತಾರೆ ಪುಷ್ಕರ್.