ಕಮಲ್ ಹಾಸನ್ ಅವರ ಮೂಕಿ ಚಿತ್ರ “ಪುಷ್ಪಕ ವಿಮಾನ’ವನ್ನು ಜನ ಇವತ್ತಿಗೂ ಮರೆತಿಲ್ಲ. ಒಂದೇ ಒಂದು ಡೈಲಾಗ್ ಇಲ್ಲದೇ ಕೇವಲ ನಟನೆಯ ಮೂಲಕ ರಂಜಿಸಿದ ಆ ಚಿತ್ರ ಇವತ್ತಿಗೂ ಜನಮಾನಸದಲ್ಲಿದೆ. ಈಗ ಮತ್ತೂಂದು ಮೂಕಿ ಚಿತ್ರ ಈ ವಾರ ತೆರೆಕಾಣುತ್ತಿದೆ. ಅದು “ಮರ್ಕ್ಯುರಿ’. ಪ್ರಭುದೇವ ನಟನೆಯ “ಮರ್ಕ್ಯುರಿ’ ಚಿತ್ರವನ್ನು ಕನ್ನಡದಲ್ಲಿ ಪುಷ್ಕರ್ ಹಾಗೂ ರಕ್ಷಿತ್ ವಿತರಣೆ ಮಾಡುತ್ತಿದ್ದಾರೆ.
ಮಲ್ಟಿಪ್ಲೆಕ್ಸ್‌ನ ವಿತರಣೆಯ ಜವಾಬ್ದಾರಿ ಇವರಿಗಾದರೆ, ಸಿಂಗಲ್ ಸ್ಕ್ರೀನ್ ಜಯಣ್ಣ ಫಿಲಂಸ್ ಮೂಲಕ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ನಿರ್ದೇಶಿಸಿರೋದು ಕಾರ್ತಿಕ್ ಸುಬ್ಬರಾಜು. ಈ ಹಿಂದೆ “ಜಿಗರ್‌ಥಂಡಾ’ ಸೇರಿದಂತೆ ಹಲವು ಚಿತ್ರ ಮಾಡಿರುವ ಕಾರ್ತಿಕ್ ಈಗ “ಮರ್ಕ್ಯುರಿ’ ಎಂಬ ಮೂಕಿಚಿತ್ರ ಮಾಡಿದ್ದಾರೆ. ಕನ್ನಡದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿರುವ ಪುಷ್ಕರ್ ನಿರ್ಮಾಪಕ ಅಣಜಿ ನಾಗರಾಜ್ ಬಳಿ ಇದ್ದ “ಮರ್ಕ್ಯುರಿ’ ಟೈಟಲ್ ಕೂಡಾ ಪಡೆದಿದ್ದಾರೆ.
ಜೊತೆಗೆ ಚಿತ್ರದ ಟೈಟಲ್ ಕಾರ್ಡ್ ಕೂಡಾ ಸಂಪೂರ್ಣವಾಗಿ ಕನ್ನಡದಲ್ಲೇ ಇರಲಿದೆ. ಮೊದಲೇ ಹೇಳಿದಂತೆ ಮೂಕಿ ಚಿತ್ರವಾದ್ದರಿಂದ ಇದಕ್ಕೆ ಯಾವುದೇ ಭಾಷೆಯ ಹಂಗಿಲ್ಲದ ಕಾರಣ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಲು ಪುಷ್ಕರ್ ಯೋಚಿಸಿದ್ದಾರೆ. ಈ ಬಗ್ಗೆ ಮಾತನಾಡುವ ಪುಷ್ಕರ್, “ಇವತ್ತಿಗೂ ನಮ್ಮ ಕಣ್ಣ ಮುಂದೆ “ಪುಷ್ಪಕ ವಿಮಾನ’ ಚಿತ್ರವಿದೆ.
ಮೂಕಿಚಿತ್ರವಾದರೂ ಅದರ ಕಥೆ ಹಾಗೂ ನಟನೆಯಿಂದ ಗಮನ ಸೆಳೆದಿತ್ತು. ಈಗ “ಮರ್ಕ್ಯುರಿ’ ಬರುತ್ತಿದೆ. ಈ ಸಿನಿಮಾ ನೋಡಿದಾಗ ನಮಗೆ ತುಂಬಾ ಹೊಸದಾಗಿ ಕಾಣಿಸಿತು. ಪ್ರಭುದೇವ ಅವರ ಅಭಿನಯ, ನಿರೂಪಣೆ ಎಲ್ಲವೂ ಭಿನ್ನವಾಗಿದೆ. ಅದೇ ಕಾರಣಕ್ಕಾಗಿ ಈ ಸಿನಿಮಾ ವಿತರಣೆ ಮಾಡುತ್ತಿದ್ದೇವೆ. ಭಾಷೆಯ ಹಂಗಿಲ್ಲದ ಕಾರಣ ಕನ್ನಡದಂತೆ ಬಿಡುಗಡೆ ಮಾಡುತ್ತೇವೆ’ ಎನ್ನುವುದು ಪುಷ್ಕರ್ ಮಾತು.
ಇನ್ನು, ಪುಷ್ಕರ್ ಹಾಗೂ ರಕ್ಷಿತ್ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ “ಕಥೆಯೊಂದು ಶುರುವಾಗಿದೆ’ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಜೂನ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ದಿಗಂತ್ ನಾಯಕ. ಇದಲ್ಲದೇ ರಕ್ಷಿತ್ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಫಸ್ಟ್ ಲುಕ್ ರಕ್ಷಿತ್ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. ಸದ್ಯ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ಹಾಕಿರುವ ಸೆಟ್‌ನಲ್ಲಿ ನಡೆಯಲಿದೆ.