ಮುಳಬಾಗಿಲು: ನಗರದ ಪ್ರಮುಖ ರಸ್ತೆಯ ಫುಟ್ಪಾತ್‌ನಲ್ಲಿ ಹೂ ಮತ್ತು ಹಣ್ಣು ವ್ಯಾಪಾರ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಇದನ್ನು ತಪ್ಪಿಸಲು ನಗರಸಭೆಯು ಲಕ್ಷಾಂತರ ರೂ. ವೆಚ್ಚ ಮಾಡಿ ಮಾರುಕಟ್ಟೆ ನಿರ್ಮಿಸಿದ್ದರೂ ಯಾರು ಅಲ್ಲಿಗೆ ಹೋಗುತ್ತಿಲ್ಲ. ಇದರಿಂದ ಮಳಿಗೆಗಳು ಮಲ ಮೂತ್ರ ವಿಸರ್ಜನೆ ತಾಣಗಳಾಗಿವೆ.
2007-08ರಲ್ಲಿ ಅಂದಿನ ಪೌರಾಡಳಿತ ಸಚಿವ ಆಲಂಗೂರ್ ಶ್ರೀನಿವಾಸ್ ಕ್ಷೇತ್ರಾಭಿವೃದ್ಧಿ ಅನುದಾನ ದಲ್ಲಿ ಬಸ್ ನಿಲ್ದಾಣದಂಚಿನಲ್ಲಿ ನಗರಸಭೆಯು 10 ಲಕ್ಷ ರೂ.ನಲ್ಲಿ ಹೂವು ಮತ್ತು ಹಣ್ಣು ಮಾರುಕಟ್ಟೆ ಸ್ಥಾಪಿಸಿದೆ. ಒಟ್ಟು 250 ವ್ಯಾಪಾರಿಗಳಿಗೆ ಮಳಿಗೆಗಳನ್ನು ಗೊತ್ತು ಮಾಡಿ, 2500 ರೂ. ಠೇವಣಿ, ಮಾಸಿಕ ಬಾಡಿಗೆ 260 ರೂ. ನಿಗದಿ ಪಡಿಸಿ, ವ್ಯಾಪಾರಕ್ಕೆ ಚಾಲನೆ ನೀಡಲಾಗಿತ್ತು.
ಆದಾಯಕ್ಕೆ ಹೊಡೆತ: ಪ್ರಾರಂಭದ ದಿನಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟುಗಳು ನಡೆಯುತ್ತಿತ್ತು. ಈ ಸಮಯದಲ್ಲಿ ಪ್ರಮುಖ ರಸ್ತೆಗಳಲ್ಲಿರುವ ಅಂಗಡಿ ವರ್ತಕರು ಹಲವು ವರ್ಷಗಳಿಂದ ತಮ್ಮ ಅಂಗಡಿ ಮುಂಭಾಗದಲ್ಲಿ ವ್ಯಾಪಾರ ಮಾಡಲು ಹೂವು ಮತ್ತು ಹಣ್ಣು ಮಾರಾಟಗಾರರಿಗೆ ಸ್ಥಳ ನೀಡಿ, ದಿನವೊಂದಕ್ಕೆ 100-150 ರೂ.ನಂತೆ ಶುಲ್ಕ ಪಡೆಯು ತ್ತಿದ್ದರು.ನಗರಸಭೆ ಮಾರುಕಟ್ಟೆ ಸ್ಥಾಪಿಸಿದ್ದರಿಂದ ಆದಾಯಕ್ಕೆ ಹೊಡೆತ ಬಿದ್ದಿತ್ತು.
ಸರ್ಕಾರಕ್ಕೆ ನಷ್ಟ: ಬಜಾರು ರಸ್ತೆ, ಎಂ.ಸಿ.ರಸ್ತೆ ವರ್ತಕರಿಗೆ ಫುಟ್ಪಾತ್ ವ್ಯಾಪಾರಿಗಳಿಂದ ತಿಂಗಳಿಗೆ 3 ರಿಂದ 4 ಸಾವಿರ ರೂ. ಆದಾಯ ಬರುತ್ತಿತ್ತು. ಇದಕ್ಕೆ ಕತ್ತರಿ ಬಿದ್ದಿದ್ದರಿಂದ ಮುಖ್ಯರಸ್ತೆಗಳೇ ವ್ಯಾಪಾರಕ್ಕೆ ಸೂಕ್ತ ಎಂದು ಹೂ ಹಣ್ಣು ಮಾರಾಟಗಾರನ್ನು ಮರಳು ಮಾಡಿ ಅಲ್ಲಿಂದ ಖಾಲಿ ಮಾಡುವಂತೆ ಮಾಡಿದರು.
ಮಾರುಕಟ್ಟೆ ನಿರ್ಮಾಣ ಮಾಡಿ ಹಲವು ವರ್ಷ ಕಳೆದರೂ ಮಳಿಗೆ ಬಾಡಿಗೆ ಪಡೆದಿರುವ ಮಾರಾಟಗಾರರು, ಇತ್ತ ಸುಳಿದಿಲ್ಲ.ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟವಾಗಿದೆ. ಈ ವಿಚಾರದ ಬಗ್ಗೆ ಹೂ ಮತ್ತು ಹಣ್ಣು ಮಾರಾಟಗಾರರ ಸಂಘ ಹಲವು ಬಾರಿ ತಿಳಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದೆ.
ಮಾರುಕಟ್ಟೆಯಲ್ಲಿ ಅಂಗಡಿ ದುರಸ್ತಿಗೊಳಿಸಿ ಶೀಘ್ರದಲ್ಲಿಯೇ ಹರಾಜು ಹಾಕಲಾಗುವುದು ಎಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಹೇಳಿದರು.
● ಎಂ.ನಾಗರಾಜಯ್ಯ