ಬೇಲೂರು: ಯುಗಾದಿ ಹಬ್ಬದ ವಾರದ ಸಂತೆನಡೆಸಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ವ್ಯಾಪಾರಿಗಳು ಸೋಮವಾರ ಪುರಸಭೆ ಮುಖ್ಯಾಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸಿದರು.
ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯ ಮೇರೆಗೆ ಜಿಲ್ಲಾಡಳಿತ ಜಿಲ್ಲಾದ್ಯಂತ ಸಭೆ, ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಿದೆ.
ಬೇಲೂರಿನಲ್ಲಿ ಸೋಮವಾರ ಸಂತೆಯನ್ನು ನಿಷೇಧಿಸಿದ್ದರೂ ಬೆಳಗಿನಿಂದಲೇ ಕೆಲ ವರ್ತರು ಸಂತೆ ನಡೆಯುವ ದೇಗುಲದ ಹಿಂಭಾಗದ ಜಾಗ ದಲ್ಲಿ ತರಕಾರಿ, ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್, ಆರೋಗ್ಯ ನಿರೀ ಕ್ಷಕ ವೆಂಕಟೇಶ್, ಪರಿಸರ ಅಧಿಕಾರಿ ಮಧು ಸೂದನ್, ವ್ಯಾಪಾರಿಗಳಿಗೆ ಸಂತೆ ನಡೆಸದಂತೆ ಹೇಳಿದರು.
ಈ ಸಂದರ್ಭದಲ್ಲಿ ಆಕ್ರೋಶಗೊಂಡ ವರ್ತಕರು, ಸಾವಿರಾರು ರೂ.ಬಂಡವಾಳ ಹಾಕಿ ತರಕಾರಿ ಹಾಗೂ ದಿನಸಿ ಖರೀದಿಸಿದ್ದೇವೆ. ಸಂತೆ ನಡೆಯದಿದ್ದರೆ ನಮಗೆ ನಷ್ಟವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ
ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ವ್ಯಾಪಿಸಿದ ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ಕ್ರಮಕೈಗೊಂಡು ಪಟ್ಟಣವನ್ನು ಲಾಕ್‌ಡೌನ್ ಮಾಡಿತ್ತು. ಕಳೆದ ವಾರದ ಸಂತೆಯನ್ನು ರದ್ದು ಪಡಿಸಿತ್ತು. ಈ ವಾರದ ಸಂತೆಯನ್ನು ರದ್ದು ಪಡಿಸಿದರೂ. ಕೆಲ ವರ್ತರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ವ್ಯಾಪಾರ ವಹಿವಾಟು ನಡೆಸಲು ಮುಂದಾಗಿದ್ದು ವ್ಯಾಪಾರ ಮಾಡದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.