Advertisement
ಕಳೆದ ಆ.13 ರಂದು ನಿಯಮಾನುಸಾರ ಅಂಗಡಿ ಮಳಿಗೆಗಳನ್ನು ಹರಾಜು ನಡೆಸಿ ಲಾಟರಿ ಮೂಲಕ ವರ್ತಕರಿಗೆ ವಿತರಣೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿಗಳೇ ಖುದ್ದು ನಗರಸಭಾ ಸಭಾಂಗಣದಲ್ಲಿ ವರ್ತಕರ ಸಭೆ ನಡೆಸಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಆದರೆ ಆ.13 ರಂದು ನಡೆಯಬೇಕಿದ್ದ ಹರಾಜು ಪ್ರಕ್ರಿಯೆಗೆ ವರ್ತಕರು ಪಾಲ್ಗೊಳ್ಳದೇ ಬಹಿಷ್ಕಾರ ಹಾಕಿರುವುದು ಬೆಳಕಿಗೆ ಬಂದಿದೆ.
Related Articles
Advertisement
ಅಕ್ರಮ ಚಟುವಟಿಕೆಗಳ ತಾಣ: ಜಿಲ್ಲಾ ಕೇಂದ್ರದಲ್ಲಿ ನಗರಸಭೆ ವತಿಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ವರ್ಷಗಳೇ ಉರುಳಿವೆ. ಇದರಿಂದ ಇಡೀ ಬಸ್ ನಿಲ್ದಾಣದಲ್ಲಿ ಅಂಗಡಿ ಮಳಿಗೆಗಳು ರಾತ್ರಿಯಾದರೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಮತ್ತೂಂದು ಕಡೆ ಮಾಸಿಕ ನಗರಸಭೆಗೆ ಹರಿದು ಬರಬೇಕಿದ್ದ ಲಕ್ಷಾಂತರ ರೂ. ಬಾಡಿಗೆ ಕೂಡ ನಗರಸಭೆಗೆ ಬಾರದಂತೆ ಆಗಿದೆ.
ಸ್ಥಳೀಯ ವರ್ತಕರ ವಾದ ಏನು?: ಈ ಹಿಂದೆ ಹಳೆಯ ಖಾಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಪ್ರಸ್ತುತ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಪ್ರತ್ಯೇಕಗೊಂಡಿವೆ. ಸದ್ಯ ಖಾಸಗಿ ಬಸ್ ನಿಲ್ದಾಣಕ್ಕೆ ಕೇವಲ ಬೆರಳೆಣಿಕೆಯಷ್ಟು ಖಾಸಗಿ ಬಸ್‌ಗಳು ಬರುತ್ತವೆ. ಹೆಚ್ಚಿನ ಪ್ರಯಾಣಿಕರು ಬರುವುದಿಲ್ಲ. ಹೀಗಾಗಿ ದುಬಾರಿ ಬಾಡಿಗೆ, ಠೇವಣಿ ಕಟ್ಟಿ ವ್ಯಾಪಾರ ಮಾಡಿ ಬದುಕಲು ಕಷ್ಟವಾಗುತ್ತದೆ. ಈ ಹಿಂದೆ ಹಳೆ ಬಸ್ ನಿಲ್ದಾಣದಲ್ಲಿ ಮಳಿಗೆಗಳಿಗೆ 500, 600 ರೂ. ಮಾತ್ರ ಬಾಡಿಗೆ ಕಟ್ಟುತ್ತಿದ್ದೇವು.
ಆದರೆ ಇದೀಗ ಲಕ್ಷಗಟ್ಟಲೇ ಠೇವಣಿ, ಸಾವಿರಾರು ರೂ. ಬಾಡಿಗೆ ಕಟ್ಟಬೇಕು ಎಂದರೆ ಕಷ್ಟವಾಗುತ್ತದೆ. ಸಂತೆ ಮಾರುಕಟ್ಟೆಯಲ್ಲಿರುವ ಸಂಕೀರ್ಣದಲ್ಲಿ 4,000 ಬಾಡಿಗೆ ನಿಗದಿ ಮಾಡಿದರೂ ವರ್ತಕರು ಹೋಗದೆ ಖಾಲಿ ಉಳಿದಿವೆ. ಆದ್ದರಿಂದ ಠೇವಣಿ, ಬಾಡಿಗೆ ಕಡಿಮೆ ಮಾಡಬೇಕು ಎಂದು ವರ್ತಕರು ಮನವಿ ಮಾಡಿದ್ದರು. ಆದರೆ ಇದಕ್ಕೆ ಜಿಲ್ಲಾಡಳಿತ ಒಪ್ಪಿರಲಿಲ್ಲ. ಹೀಗಾಗಿ ಆ.13 ರಂದು ನಡೆಯಬೇಕಿದ್ದ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ವರ್ತಕರ ಬಹಿಷ್ಕಾರದಿಂದ ಸ್ಥಗಿತಗೊಂಡಿದೆ.
ಹೈಕೋರ್ಟ್ ಆದೇಶದಂತೆ ಆ.13 ರಂದು ಮಳಿಗೆಗಳ ಹರಾಜು ನಡೆಯಬೇಕಿತ್ತು. ಆದರೆ ವರ್ತಕರು ದುಬಾರಿ ಬಾಡಿಗೆ, ಠೇವಣಿ ಎಂದು ಹೇಳಿ ಯಾರು ಕೂಡ ಭಾಗವಹಿಸಿಲ್ಲ. ಈ ಬಗ್ಗೆ ಮತ್ತೆ ಹೈಕೋರ್ಟ್ ಗಮನಕ್ಕೆ ತಂದು ಮುಂದೆ ಕೋರ್ಟ್ ನೀಡುವ ಸೂಚನೆಯಂತೆ ಮುಂದಿನ ಕ್ರಮ ವಹಿಸುತ್ತೇವೆ.-ಉಮಾಕಾಂತ್, ನಗರಸಭೆ ಆಯುಕ್ತರು