ಜೇವರ್ಗಿ: ಉದ್ಯೋಗ ಖಾತ್ರಿ ಸಂಪೂರ್ಣ ಜಾರಿಗೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕಿನ ಹರನೂರ ಗ್ರಾಮ ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಪ್ರಾಂತ ರೈತ ಸಂಘ ತಾಲೂಕು ಘಟಕದ ಅಧ್ಯಕ್ಷ ಸುಭಾಷ ಹೊಸಮನಿ ಮಾತನಾಡಿ, 60 ವರ್ಷ ದಾಟಿದ ರೈತರು, ಕೂಲಿ ಕಾರ್ಮಿಕರಿಗೆ ಪ್ರತಿ ತಿಂಗಳು ಕನಿಷ್ಟ 7,500ರೂ. ಮಾಸಾಶನ ಮಂಜೂರಿ ಮಾಡಬೇಕು. ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಬೆಳಗ್ಗೆ 9ರಿಂದ ಸಂಜೆ 4 ಗಂಟೆ ವರೆಗೆ ಉದ್ಯೋಗ ಖಾತ್ರಿ ಕೆಲಸ ನಿರ್ವಹಿಸಬೇಕು ಎನ್ನುವ ಸರ್ಕಾರದ ಆದೇಶ ರದ್ದುಪಡಿಸಬೇಕು. ಅರ್ಜಿ ಸಲ್ಲಿಸಿದ ಎಲ್ಲರಿಗೂ ನಿಗದಿ ಪಡಿಸಿದ 150 ದಿನಗಳ ಕಾಲ ನಿರಂತರ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.
ಡಾ| ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು. ಸಕ್ಕರೆ ಕಾರ್ಖಾನೆಗಳು ರೈತರು ಬೆಳೆದ ಕಬ್ಬನ್ನು ಕೂಡಲೇ ಕಟಾವು ಮಾಡಿ ಬೆಂಬಲ ಬೆಲೆಯಲ್ಲಿ ಖರೀದಿಸಿ ರೈತರ ಖಾತೆಗಳಿಗೆ ನೇರವಾಗಿ ಹಣ ಸಂದಾಯ ಮಾಡಬೇಕು ಎಂದು ಒತ್ತಾಯಿಸಿದರು.
ಈ ಎಲ್ಲ ಬೇಡಿಕೆಗಳು ಈಡೇರುವ ವರೆಗೂ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು. ಒಂದು ವೇಳೆ ಬೇಡಿಕೆಗಳನ್ನು ಈಡೇಸುವಲ್ಲಿ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದರೆ ತಾಲೂಕಿನಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಪರಶುರಾಮ ಬಡಿಗೇರ, ಮಲ್ಕಪ್ಪ ಹರನೂರ, ಸಕ್ರೆಪ್ಪ ಹರನೂರ, ರೇವು ಜಾಧವ ರೇವನೂರ, ಶಂಕರಲಿಂಗ ಹನ್ನೂರ, ಯಲ್ಲಾಲಿಂಗ ತಳವಾರ, ರಸೂಲಬಿ ಹರನೂರ, ತಾರಾಬಾಯಿ ರಾಠೊಡ, ಬಸಮ್ಮ ಮ್ಯಾಗೇರಿ, ಸುನಂದಾ ಬಳಗಾರ, ಶಾರದಾ ರಾಠೊಡ, ಭೀಮಬಾಯಿ ರೇವನೂರ, ಚಂದ್ರಬಾಯಿ ಇಜೇರಿ, ರಾಜು ಸಾಥಖೇಡ ರೇವನೂರ, ಶ್ರೀನಿವಾಸ ದಾಸರ ಹಾಗೂ ರೇವನೂರ, ಹರನೂರಿನ ರೈತರು, ಕೂಲಿಕಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.