Advertisement

ಬಾಹ್ಯಾಕಾಶ ಯಾತ್ರಿಗಳ “ಮೆನು’ರೆಡಿ

06:23 AM Feb 23, 2019 | |

ಬೆಂಗಳೂರು: ದೇಶದ ಬಹುನಿರೀಕ್ಷಿತ ಗಗನಯಾನ ಯೋಜನೆ ಅಡಿ 2022ಕ್ಕೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವವರಿಗಾಗಿ “ಫೆವರಿಟ್‌ ಮೆನು’ ಈಗಲೇ ರೆಡಿ ಆಗಿದೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕಾಗಿ ಮೈಸೂರಿನ ಆಹಾರ ಸಂಶೋಧನಾ ಪ್ರಯೋಗಲಯ (ಡಿಎಫ್ಆರ್‌ಎಲ್‌)ವು, ಈಗಾಗಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಮೆನು ಲಿಸ್ಟ್‌ ಕಳುಹಿಸಿಕೊಟ್ಟಿದೆ.

Advertisement

ಇದರಲ್ಲಿ ಎಗ್‌ಕಟ್ಟಿ ರೋಲ್‌, ಚಿಕನ್‌ಕಟ್ಟಿ ರೋಲ್‌, ವೆಜ್‌ಕಟ್ಟಿ ರೋಲ್‌, ಫ್ರೀಜ್‌ ಮಾಡಿದ ಮ್ಯಾಂಗೋ ಮತ್ತು ಪೈನಾಪಲ್‌ ಜ್ಯೂಸ್‌ ಸೇರಿದಂತೆ 15 ಆಹಾರ ಪದಾರ್ಥಗಳ ಪಟ್ಟಿಯನ್ನು ಕಳುಹಿಸಲಾಗಿದೆ. ಇದನ್ನು ಪರೀಕ್ಷೆಗೊಳಪಡಿಸಿ, ಹಲವು ಪ್ರಕ್ರಿಯೆಗಳನ್ನು ಪೂರೈಸಿದ ನಂತರ ಅಂತಿಮಗೊಳಿಸಲಾಗುತ್ತದೆ. 

ಬಾಹ್ಯಾಕಾಶಕ್ಕೆ ತೆರಳಲಿರುವವರಲ್ಲಿ ಬಹುತೇಕರು ಇಷ್ಟಪಟ್ಟಿದ್ದು ಎಗ್‌, ಚಿಕನ್‌, ವೆಜ್‌ಕಟ್ಟಿ ರೋಲ್‌ಗ‌ಳನ್ನು. ಹಾಗಾಗಿ, ಪ್ರಯಾಣ ಬೆಳೆಸಲಿರುವ ವಿಜ್ಞಾನಿಗಳು, ತಜ್ಞರೆಲ್ಲರ ಅಭಿಪ್ರಾಯ ಸಂಗ್ರಹಿಸಿ, ಈ ಆಹಾರಗಳನ್ನು ಸಿದ್ಧಪಡಿಸಿ ಪೂರೈಸಲಾಗಿದೆ. ಅತಿ ಹೆಚ್ಚು ಒತ್ತಡ ಮತ್ತು ಉಷ್ಣಾಂಶದಲ್ಲಿ ಬೇಯಿಸಿ ಇದನ್ನು ತಯಾರಿಸಲಾಗಿದ್ದು, ಭೂಮಿಯಿಂದ ಬಾಹ್ಯಾಕಾಶಕ್ಕೆ ಯಾವುದೇ ಸೂಕ್ಷ್ಮಾಣುಜೀವಿ ಹೋಗದಂತೆ ತುಂಬಾ ಎಚ್ಚರಿಕೆ ವಹಿಸಲಾಗಿದೆ ಎಂದು ಡಿಎಫ್ಆರ್‌ಎಲ್‌ನ ವಿಜ್ಞಾನಿ ಪಾಲ್‌ ಮಧುಕರನ್‌ ಸ್ಪಷ್ಟಪಡಿಸಿದರು.  

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಹಾಗಾಗಿ, ಎಲ್ಲವೂ ಗಾಳಿಯಲ್ಲಿ ತೇಲುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದಲ್ಲಿ ತಯಾರಿಸಿದ “ಮೆನು’ ಅಲ್ಲಿನ ವಾತಾವರಣಕ್ಕೆ ಹೇಳಿಮಾಡಿಸಿದ್ದಾಗಿದೆ. ಎಲ್ಲ ವರ್ಗದ ಜನರಿಗೂ ಇದು ಹೊಂದುತ್ತದೆ ಎಂದ ಅವರು, 1980ರಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದ ರಾಕೇಶ್‌ ಶರ್ಮ ಅವರಿಗೂ ಡಿಎಫ್ಆರ್‌ಎಲ್‌ನಿಂದ ಆಹಾರ ಪೂರೈಸಲಾಗಿತ್ತು. ಅವರು ಅಂದು ಮ್ಯಾಂಗೋ ಬಾರ್‌ಗಳನ್ನು ತೆಗೆದುಕೊಂಡು ಹೋಗಿದ್ದರು ಎಂದೂ ಪಾಲ್‌ ಮಧುಕರನ್‌ ಮೆಲುಕು ಹಾಕಿದರು.

ಸೈನಿಕರ ರಕ್ಷಣೆಗೆ ಡೈ ಮಾರ್ಕರ್‌: ಇದಲ್ಲದೆ, ಸಂಸ್ಥೆಯು ಇತ್ತೀಚೆಗೆ ಹಲವು ಉತ್ಪನ್ನಗಳನ್ನು ಹೊರತಂದಿದೆ. ಆ ಪೈಕಿ ಸಮುದ್ರದಲ್ಲಿ ನಾಪತ್ತೆಯಾಗುವ ಸೈನಿಕರ ರಕ್ಷಣೆಗಾಗಿ “ಫ್ಲೋರೊಸೆಂಟ್‌ ಸಿ ಡೈ ಮಾರ್ಕರ್‌’ ಅಭಿವೃದ್ಧಿಪಡಿಸಲಾಗಿದೆ. ಸಮುದ್ರದಲ್ಲಿ ನಮ್ಮ ಸೈನಿಕರು ಕಳೆದುಹೋದಾಗ, ಈ ಡೈ ಮಾರ್ಕರ್‌ ಅನ್ನು ತೆರೆದರೆ ಸಾಕು, ಅದು ಸಮುದ್ರದ ಅರ್ಧ ಕಿ.ಮೀ. ವ್ಯಾಪ್ತಿಯಲ್ಲಿ ಹಬ್ಬುತ್ತದೆ.

Advertisement

ಸುಮಾರು ಒಂದು ತಾಸು ಹಾಗೇ ಇರುತ್ತದೆ. ಸೂರ್ಯನ ಕಿರಣಗಳು ಇದರ ಮೇಲೆ ಬಿದ್ದಾಗ ಹೊಳೆಯುತ್ತದೆ. ಮೂರು ಕಿ.ಮೀ. ಎತ್ತರದಿಂದ ಸುಲಭವಾಗಿ ಇದನ್ನು ಗುರುತಿಸಬಹುದು. ಹಾಗಾಗಿ, ರಕ್ಷಣಾ ಕಾರ್ಯಕ್ಕೆ ಇದು ತುಂಬಾ ಅನುಕೂಲಕರವಾಗಿದೆ ಎಂದು ಮಧುಕರನ್‌ ಹೇಳಿದರು. 

ಜತೆಗೆ ಗಡಿಗಳಲ್ಲಿ ಪರ್ವತಗಳ ತುದಿಯಲ್ಲಿ ಸೈನಿಕರಿಗೆ ಬಿಸಿ ಆಹಾರ ಪೂರೈಸಲು ಸುಲಭವಾದ ಸೋಲಾರ್‌ ಆಧಾರಿತ “ಫ‌ುಡ್‌ ವಾರ್ಮರ್‌’ ಪರಿಚಯಿಸಲಾಗಿದೆ. ಪ್ರಸ್ತುತ ಚಿಕ್ಕ ರೆಡಿಮೇಡ್‌ ಒಲೆ ಇದೆ. ಇದರ ಮುಂದುವರಿದ ಭಾಗವಾಗಿ ಸೋಲಾರ್‌ ಪ್ಯಾನೆಲ್‌ಗ‌ಳಿರುವ ವಾರ್ಮರ್‌ನಲ್ಲಿ ಸಿದ್ಧ ಆಹಾರವನ್ನು ಇಟ್ಟರೆ ಸಾಕು, ಹತ್ತು ನಿಮಿಷಗಳಲ್ಲಿ ಬಿಸಿ ಬಿಸಿಯಾಗಿ ಹೊರಬರುತ್ತದೆ.

ಆಹಾರ ಸೇವೆನೆಗೂ ತರಬೇತಿ!: ಅಂದಹಾಗೆ, ಈ ಬಾಹ್ಯಾಕಾಶ ಯಾನಕ್ಕೆ ಮೊದಲ ಹಂತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟಾರೆ ಹತ್ತು ಜನರನ್ನು ಆಯ್ಕೆ ಮಾಡಲಾಗಿದ್ದು, ಅವರೆಲ್ಲರಿಗೆ ತರಬೇತಿ ನೀಡಲಾಗುತ್ತಿದ್ದು, ಆಹಾರ ಸೇವನೆಯೂ ಆ ತರಬೇತಿಯಲ್ಲಿ ಒಂದಾಗಿದೆ. ಅಂತಿಮವಾಗಿ ಈ ಪೈಕಿ ಮೂವರನ್ನು ಯಾನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next