ಶಿರ್ವ: ಹದಿಹರೆಯದ ಸಮಸ್ಯೆ, ಮಾನಸಿಕ ಒತ್ತಡ ಮತ್ತು ಅದರ ಭಾವನಾತ್ಮಕ ಹಿನ್ನಲೆಯನ್ನು ಗುರುತಿಸಲು ವಿದ್ಯಾರ್ಥಿಗಳಿಗಾಗಿ ಮಣಿಪಾಲದ ವೈದ್ಯಕೀಯ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಿಂದ ಒಂದು ದಿನದ ಮನಸೋಲ್ಲಾಸ ಕಾರ್ಯಾಗಾರವು ನ. 14 ರಂದು ಮೂಡುಬೆಳ್ಳೆ ನೆಲ್ಲಿಕಟ್ಟೆ ಜ್ಞಾನಗಂಗಾ ಪ.ಪೂ. ಕಾಲೇಜಿನ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಮೋಹನ್ ಮಾತನಾಡಿ, ವಿದ್ಯಾರ್ಥಿಗಳು ಹದಿಹರೆಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲಕ್ಕೀಡಾಗಬಹುದು. ಹೆತ್ತವರು ಮತ್ತು ಶಿಕ್ಷಕರು ಹೇಳುವ ಬುದ್ಧಿಮಾತನ್ನು ವ್ಯತಿರಕ್ತವಾಗಿ ಯೋಚಿಸುವ ಹರೆಯ ಇದಾಗಿದ್ದು ಮುಖ್ಯ ಸಮಸ್ಯೆಯಾಗಿದೆ. ಈ ಸಂದರ್ಭದಲ್ಲಿ ಹದಿಹರೆಯದ ಸಮಸ್ಯೆ, ಮಾನಸಿಕ ಒತ್ತಡವನ್ನು ನಿವಾರಿಸಲು ಆಯೋಜಿಸಿರುವ ಮನಸೋಲ್ಲಾಸ ಕಾರ್ಯಗಾರದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಮಣಿಪಾಲದ ವೈದ್ಯಕೀಯ ಮನೋವಿಜ್ಞಾನ ವಿಭಾಗದ ತಜ್ಞ ವೈದ್ಯರಾದ ಡಾ| ಶ್ವೇತಾ ರೈ, ಪ್ರೊ| ಶ್ಯಾಮ್ ಹಾಗೂ ಪ್ರೊ| ಡಾನ್ ಅವರೊಂದಿಗೆ 6 ಸಂಶೋಧನಾ ವಿದ್ಯಾರ್ಥಿಗಳನ್ನೊಳಗೊಂಡ ತಂಡವು 30 ರಿಂದ 35 ವಿದ್ಯಾರ್ಥಿಗಳ ಮೂರು ತಂಡವನ್ನಾಗಿ ಮಾಡಿ 3 ತಜ್ಞರನ್ನೊಳಗೊಂಡಂತೆ 3 ಕೊಠಡಿಯಲ್ಲಿ ಕಾರ್ಯಾಗಾರ ನಡೆಯಿತು.
ವೈದ್ಯಕೀಯ ಮನೋ ವಿಜ್ಞಾನದ ತಜ್ಞರು ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಹನ ಸಾಧ್ಯತೆಯನ್ನು ಪಡೆಯಲು ಅವರ ಮಾನಸಿಕ ಒತ್ತಡ, ಭಾವನಾತ್ಮಕ ಹಿನ್ನೆಲೆಯನ್ನು ಗುರುತಿಸಲು, ವಿವಿಧ ರೀತಿಯ ಚಟುವಟಿಕೆ, ಗುಂಪು ಚರ್ಚೆ ಹಾಗೂ ಹಲವು ಬಗೆಯ ಆಟ ಪಾಠದೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದರು.
ಪ್ರಾಂಶುಪಾಲ ಯು. ಎಲ್. ಭಟ್ ಸ್ವಾಗತಿಸಿದರು. ಗಣಕ ವಿಜ್ಞಾನದ ಪ್ರಾಧ್ಯಾಪಕಿ ಕಮಲಾಕ್ಷಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.