Advertisement

Ganapathi Inscriptions: ಶಾಸನಗಳಲ್ಲಿ ಗಣಪತಿಯ ಉಲ್ಲೇಖ

05:32 PM Sep 18, 2023 | Team Udayavani |

ವಿಘ್ನನಿವಾರಕನಾದ ಗಣಪತಿ ಭಾರತೀಯ ಸಂಸ್ಕತಿ ಹಾಗೂ ಹಿಂದೂ ಧರ್ಮದಲ್ಲಿ ಬಹುಮುಖ್ಯ ವಾದ ಸ್ಥಾನ ಪಡೆದಿದ್ದಾನೆ. ಗಣ
ಪತಿಯ ಆರಾಧನೆ ವೇದ ಕಾಲದಲ್ಲಿ ಆರಂಭವಾಯಿತೆನ್ನಲಾಗಿದೆ. ಹಿಂದೂ ಧರ್ಮದಲ್ಲಿ ಮಾತ್ರವಲ್ಲ ಬೌದ್ಧ, ಜೈನ ಧರ್ಮಗಳಲ್ಲಿಯೂ ವಿನಾಯಕನಿಗೆ ಸ್ಥಾನವಿತ್ತು. ಹೀಗೆ ಆರಂಭವಾದ ಗಣಪತಿ ಆರಾಧನೆ ಕಾಲ ಕಳೆದಂತೆ ಬೆಳವಣಿಗೆಯನ್ನು ಕಂಡಿತು. ಅದು ಎಲ್ಲಿಯ ವರೆಗೆ ಪ್ರಾಬಲ್ಯವನ್ನು ಕಂಡಿತೆಂದರೆ ಗಣಪತಿ ಆರಾಧಕರ ಒಂದು ಪ್ರತ್ಯೇಕ ವರ್ಗ ಜನ್ಮ ತಾಳಿತು. ಅವರು ಗಾಣಪತ್ಯರು ಎಂಬುದಾಗಿ ಪ್ರಚಾರ ಪಡೆದರು.

Advertisement

ಕಾಲಕಳೆದಂತೆ ಅವರ ಪ್ರಭಾವ ಕಡಿಮೆಯಾಯಿತು. ಅವರು ಇತರರೊಂದಿಗೆ ಸೇರಿಕೊಂಡರು. ಭಾರತೀಯ ಸಂಸ್ಕೃತಿ ಪ್ರಪಂ
ಚದ ಬೇರೆಡೆಗೆ ವಿಸ್ತಾರಗೊಂಡಾಗ ಗಣಪತಿಯ ಆರಾಧನೆ ಅಲ್ಲಿಯೂ ಪ್ರಚಾರ ಪಡೆಯಿತು. ಚೀನದ ದೇವಸ್ಥಾನದ ಗೋಡೆಯ ಮೇಲಿರುವ ಕ್ರಿ.ಶ. 531ರ ಗಣಪತಿ ವಿದೇಶದಲ್ಲಿ ಕಂಡುಬರುವ ಅತ್ಯಂತ ಹಳೆಯ ಗಣಪತಿಯೆಂದು ಪರಿಗಣಿಸಲ್ಪಟ್ಟಿದೆ. ಗಣಪತಿ ಅತ್ಯಂತ ಜನಪ್ರಿಯ ದೇವರು. ಒಂದು ಅರ್ಥದಲ್ಲಿ ರಾಷ್ಟ್ರೀಯ ದೇವ ರೆಂದೂ ಹೇಳಬಹುದು. ಭಾರತೀಯ ಸಂಸ್ಕೃತಿಯಲ್ಲಿ ಕಾಣುವ ವಿವಿಧತೆಯಲ್ಲಿ ಏಕತೆಗೆ ಗಣಪತಿಯೂ ಒಂದು ಸಾಕ್ಷಿ.

ಕ್ರಿ. ಶ. 5-6ನೆಯ ಶತ ಮಾನದ ಹೊತ್ತಿಗೆ ಈಗ ಪ್ರಚಲಿತವಿರುವ ಸ್ವರೂಪವನ್ನು ಗಣಪತಿ ಪಡೆದುಕೊಂಡ ಬಗ್ಗೆ ಎಲ್ಲರೂ ಒಪ್ಪುತ್ತಾರೆ. ಕರ್ನಾಟಕದಲ್ಲಿ ಮೊದಲ ವಿಸ್ತಾರವಾದ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾದ ಬಾದಾಮಿ ಚಾಲುಕ್ಯರ ಕಾಲದಲ್ಲಿ ನಾವು ಗಣೇಶ ಮೂರ್ತಿಗಳನ್ನು ಕಾಣುತ್ತೇವೆ.

ಕ್ರಿ.ಶ. 8ನೇ ಶತಮಾನದ ಹೊತ್ತಿಗೆ ಕುಶಲ ಧರ್ಮ ಮತ್ತು ಧರ್ಮಣರು ಮಹಾಕೂಟ ಸಮೀಪ ಗಣೇಶ ಹಾಗೂ ಸ್ಕಂದರ ಮೂರ್ತಿಗಳನ್ನು ಕೆತ್ತಿಸಿದರೆಂದು ಕಂಡು ಬರುತ್ತದೆ. ವಿಜಯ ನಗರ ಕಾಲಕ್ಕೆ ಬರುವಾಗ ಗಣಪತಿಯ ಆರಾಧನೆ ಅತೀ ಹೆಚ್ಚಿನ ಪ್ರಗತಿಯನ್ನು ಕಂಡಿತು. ಗಣಪತಿ ದೇವಾಲಯವನ್ನು ನಿರ್ಮಿಸಿ, ಗಣಪತಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನದಲ್ಲಿ ವಿವಿಧ ಸೇವೆಗಳಿಗಾಗಿ ದಾನಧರ್ಮ ನೀಡುವುದು ಸಾಮಾನ್ಯವಾಯಿತು. ಕರಾವಳಿ ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಉಡುಪಿ ಜಿಲ್ಲೆಯಲ್ಲಿ ಪ್ರಾಚೀನ ಕಾಲದಿಂದ ಗಣಪತಿಯ ಆರಾಧನೆಗೆ ಪ್ರಾಶಸ್ತ್ಯ ನೀಡಲಾಗಿತ್ತು. ಇಲ್ಲಿ ಅನೇಕ ಪ್ರಾಚೀನ ಗಣಪತಿ ದೇವಸ್ಥಾನಗಳಿವೆ.

ತುಳುನಾಡಿನ ರಾಜಧಾನಿ ಬಾರಕೂರಿನ ವಿನಾಯಕ ದೇವಸ್ಥಾನಗಳು ಹೆಚ್ಚಿನ ಸಂಖ್ಯೆಯಲ್ಲಿ ದಾನ ಧರ್ಮಗಳನ್ನು ಪಡೆದ ಬಗ್ಗೆ ಶಾಸನಿಕ ದಾಖಲೆಗಳಿವೆ. ಅವುಗಳಲ್ಲಿ ಚೌಳಿಕೇರಿಯ ವಿನಾಯಕ ದೇವಸ್ಥಾನ ಅತೀ ಹೆಚ್ಚು ದಾನಧರ್ಮ ಪಡೆದ ದೇವ ಸ್ಥಾನವಾಗಿದೆ. ಶಾಸನಗಳಲ್ಲಿ ಇದು ಕೆರೆಯ ಬಳಿಯ ವಿನಾಯಕ ದೇವರು, ಕೆಲ್ಲಂಗೆರೆಯ ವಿನಾಯಕ ದೇವರು ಎಂಬುದಾಗಿ ಉಲ್ಲೇಖಿಸಲ್ಪಟ್ಟಿದೆ. ಆದರೆ ಇಂದು ಅದು ಭೈರವ ಗಣಪತಿ ಎಂಬುದಾಗಿ ಪ್ರಚಾರ ಪಡೆದಿದೆ. ಅದು ಎಷ್ಟು ಪ್ರಾಮುಖ್ಯವಾಗಿತ್ತೆಂದರೆ ಮಹಾರಾಜ ದೇವರಾಯ ಮಹಾರಾಯರಿಗೆ ಕಂಟಕ ಬಂದಾಗ ಅದು ನಿವಾರಣೆಯಾಗಬೇಕೆಂದು ಈ ವಿನಾಯಕ ದೇವಸ್ಥಾನಕ್ಕೆ ಪಶ್ಚಿಮ ಸಮುದ್ರ ತೀರದಲ್ಲಿ ದಾನ ನೀಡಿದ್ದನ್ನು ಕಾಣುತ್ತೇವೆ. ಅಲ್ಲದೆ ಈ ದೇವರನ್ನು ಸಮಸ್ತರು ಕೊಂಡಾಡುವಂತೆ ಕೆಲ್ಲಂಗೆರೆಯ ವಿನಾಯಕ ದೇವರು ಎಂಬುದಾಗಿ ಇನ್ನೊಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಹಲವು ಶಾಸನಗಳಲ್ಲಿ ಈ ದೇವಸ್ಥಾನದ ಉಲ್ಲೇಖವಿದೆ.

Advertisement

ಅದರೊಂದಿಗೆ ತುಳುನಾಡಿನ ರಾಜಧಾನಿ ಬಾರಕೂರಿನಲ್ಲಿ 10 ಕೇರಿಗಳಿದ್ದವು ಅವುಗಳಲ್ಲಿ ಪ್ರತಿಯೊಂದು ಕೇರಿಗೂ ಒಂದು ದೇವಸ್ಥಾನ ಇತ್ತು. ಅವುಗಳಲ್ಲಿ ಹಲವು ಕೇರಿಗಳಲ್ಲಿ ವಿನಾಯಕ ಪ್ರಧಾನ ದೇವರಾಗಿದ್ದನ್ನು ಕಾಣಬಹುದು. ಒಟ್ಟಿನಲ್ಲಿ ಕರಾವಳಿ ಕರ್ನಾಟಕದಲ್ಲಿ ವಿನಾಯಕ ದೇವರು ಪ್ರಮುಖ ಆರಾಧನಾ ಶಕ್ತಿಯಾಗಿದ್ದನ್ನು ಈ ಭಾಗದ ಅನೇಕ ಶಾಸನಗಳು ಉಲ್ಲೇಖಿಸಿರುವುದನ್ನು ಕಾಣಬಹುದು.

ಡಾ| ಬಿ. ಜಗದೀಶ್‌ ಶೆಟ್ಟಿ,ಆಡಳಿತಾಧಿಕಾರಿ

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಾಹೆ

Advertisement

Udayavani is now on Telegram. Click here to join our channel and stay updated with the latest news.

Next