Advertisement

ವಿದ್ಯಾರ್ಥಿ ಹತ್ಯೆ: ಇನ್ನು ಮಾನಸಿಕ ದೃಢತೆ ಟೆಸ್ಟ್‌

07:10 AM Sep 15, 2017 | Team Udayavani |

ನವದೆಹಲಿ: ಗುರುಗ್ರಾಮದ ಖಾಸಗಿ ಶಾಲೆಯಲ್ಲಿ 2 ತರಗತಿ ವಿದ್ಯಾರ್ಥಿ ಹತ್ಯೆಗೀಡಾದ ಹಿನ್ನೆಲೆಯಲ್ಲಿ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಶಾಲೆಗಳಿಗೆ ಹೊಸತಾಗಿ ಸುರಕ್ಷತಾ ಕ್ರಮಗಳ ಪಟ್ಟಿಯನ್ನು ಪ್ರಕಟಿಸಿದೆ. ಶಾಲೆಯ ಅಧ್ಯಾಪಕರು ಮತ್ತು ಇತರ ಸಿಬ್ಬಂದಿಗೆ ಮಾನಸಿಕ ದೃಢತೆ ಪರೀಕ್ಷೆ ನಡೆಸಬೇಕೆಂದು ಆದೇಶಿಸಿದೆ. ಮುಂದಿನ ಎರಡು ತಿಂಗಳಲ್ಲಿ ಈ ಪ್ರಕ್ರಿಯೆ ಮುಕ್ತಾಯಗೊಳಿಸಿ, ಅದನ್ನು ಅನುಷ್ಠಾನ ಮಾಡಬೇಕೆಂದು ಹೇಳಿದೆ.

Advertisement

ಶಾಲೆಯ ಇತರ ಸಿಬ್ಬಂದಿಗಳಾದ ಬಸ್‌ ಡ್ರೈವರ್‌, ಜವಾನ, ನಿರ್ವಾಹಕರು ಮತ್ತು ಇತರರನ್ನು ನೇಮಕ ಮಾಡುವ ವೇಳೆ ಬಹಳ ಜಾಗರೂಕತೆ ವಹಿಸಬೇಕು. ಅವರ ಬಗ್ಗೆ ಸಂಗ್ರಹಿಸಲಾಗಿರುವ ವಿವರಗಳನ್ನು ಆನ್‌ಲೈನ್‌ ಮೂಲಕ ಸಿಬಿಎಸ್‌ಇಗೆ ಸಲ್ಲಿಸಬೇಕು ಎಂದು ಮಂಡಳಿ ಹೇಳಿದೆ. ಶಿಕ್ಷಕ-ರಕ್ಷಕ- ವಿದ್ಯಾರ್ಥಿಗಳ ಸಂಘದ ಸ್ಥಾಪನೆ, ಶಾಲೆಯ ಆವರಣದಲ್ಲಿ ಕೈಗೊಳ್ಳಲಾಗಿರುವ ಭದ್ರತಾ ವ್ಯವಸ್ಥೆಗಳ ಪರಿಶೀಲನೆ, ಸಿಸಿಟಿವಿ ಅಳವಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅದರಲ್ಲಿ ಸೂಚಿಸಲಾಗಿದೆ.

ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಕಲಿಯುವಂಥ ವಾತಾವರಣ ಇರುವುದೇ ಆದ್ಯತೆಯಾಗಬೇಕು. ಜತೆಗೆ ಕ್ಯಾಂಪಸ್‌ಗೆ ಹೊರಗಿನವರ ಪ್ರವೇಶಕ್ಕೆ ತಡೆ ಹಾಕಬೇಕು. ಅವರ ಜತೆ ಯಾವ ರೀತಿಯಲ್ಲಿ ವರ್ತಿಸಬೇಕು ಎಂಬುದರ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ಖಡಕ್‌ ಸೂಚನೆ ನೀಡಲಾಗಿದೆ. ನಿಯಮಗಳ ಉಲ್ಲಂಘನೆ ಆದಲ್ಲಿ ಶಾಲೆ ಮಾನ್ಯತೆ ತೆಗೆದು ಹಾಕಲಾಗುತ್ತದೆ ಎಂದೂ ಎಚ್ಚರಿಕೆ ನೀಡಲಾಗಿದೆ.

ಈ ನಡುವೆ ಗುರುಗ್ರಾಮದ ಶಾಲೆಯ ಆಡಳಿತ ಮಂಡಳಿ ಟ್ರಸ್ಟ್‌ ಸದಸ್ಯರು ದೇಶ ಬಿಟ್ಟು ಹೋಗಬಾರದು ಎಂದು ಬಾಂಬೆ ಹೈಕೋರ್ಟ್‌ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next