ಹಂಪನಕಟ್ಟೆ: ಮನುಷ್ಯರ ಮಾನಸಿಕ ಸ್ಥಿರತೆ ಒಬ್ಬರಿಗಿಂತ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಮನುಷ್ಯ ಮಾನಸಿಕವಾಗಿ ಆರೋಗ್ಯವಂತನಾಗಿರಬೇಕಾದರೆ ಆತ್ಮ ವಿಶ್ವಾಸ ಹೆಚ್ಚಿರಬೇಕು ಎಂದು ಮಿಲಾಗ್ರಿಸ್ ಸಮೂಹ ಸಂಸ್ಥೆಗಳ ನಿರ್ದೇಶಕ ವಂ| ಮೈಕಲ್ ಸಾಂತುಮಾಯರ್ ಅಭಿಪ್ರಾಯಪಟ್ಟರು.
ದ.ಕ. ಜಿಲ್ಲಾಡಳಿತ, ಜಿ.ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ವಿಭಾಗ), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸಹಯೋಗದೊಂದಿಗೆ ಮಿಲಾಗ್ರಿಸ್ ಪ.ಪೂ. ಕಾಲೇಜು ಆಡಿಟೋರಿಯಂನಲ್ಲಿ ನಡೆದ ವಿಶ್ವ ಚಿತ್ತವೈಕಲ್ಯ ದಿನ – 2019 ಕಾರ್ಯಕ್ರಮವನ್ನು ಅವರು ಗುರುವಾರ ಉದ್ಘಾಟಿಸಿದರು.
ಮನುಷ್ಯರಲ್ಲಿ ಯಾವುದಾದರೊಂದು ನ್ಯೂನತೆಗಳು ಇದ್ದೇ ಇರುತ್ತವೆ. ಆದರೆ, ಆ ನ್ಯೂನತೆಗಳೇ ತೊಂದರೆಗಳೆನಿಸಿದಾಗ ತತ್‌ಕ್ಷಣವೇ ಸರಿಯಾದ ಚಿಕಿತ್ಸೆ, ಪರಿಹಾರೋ ಪಾಯಗಳನ್ನು ಕಂಡುಕೊಳ್ಳಬೇಕು. ವಿಶ್ವ ಚಿತ್ತವೈಕಲ್ಯ ಗಮನಕ್ಕೆ ಬಂದ ತತ್‌ಕ್ಷಣ ಅದನ್ನು ಪರಿಹರಿಸಲು ಮುಂದಾಗ ಬೇಕು. ಸಮಸ್ಯೆಯೇ ಅಲ್ಲ ಎಂದು ದಿನದೂಡುವುದರಿಂದ ಸಮಸ್ಯೆ ಬೃಹದಾಕಾರವಾಗುತ್ತದೆ. ಆತ್ಮವಿಶ್ವಾಸ ಬೆಳೆಸಿಕೊಂಡಲ್ಲಿ ಮನಸ್ಸಿಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳು ನಿವಾರಣೆ ಯಾಗುತ್ತವೆ ಎಂದವರು ಹೇಳಿದರು.
ತತ್‌ಕ್ಷಣ ಚಿಕಿತ್ಸೆ ಮಾಡಿ
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್, ಬಹುತೇಕ ಮಂದಿ ದೈಹಿಕವಾಗಿ ಅನಾರೋಗ್ಯ ಬಂದಾಗ ಮಾತ್ರ ಅದನ್ನು ಅನಾರೋಗ್ಯವೆಂದು ಪರಿಗಣಿಸುತ್ತಾರೆ. ಆದರೆ ಮನಸ್ಸಿಗಾಗುವ ನೋವುಗಳನ್ನು ನಿರ್ಲಕ್ಷé ವಹಿಸುತ್ತಾರೆ ಎಂದು ವಿಷಾದಿಸಿದರು.
ಮಾನಸಿಕ ಸಮಸ್ಯೆಗಳೇನೇ ಕಂಡು ಬಂದರೂ ಅಂತಹ ವ್ಯಕ್ತಿಯನ್ನು ತತ್‌ಕ್ಷಣವೇ ವೈದ್ಯರ ಬಳಿ ಕೊಂಡೊಯ್ದು ಚಿಕಿತ್ಸೆ ಕೊಡಿಸಬೇಕು. ಹೆತ್ತವರು, ಶಿಕ್ಷಕರು, ಸ್ನೇಹಿತರು ಮತ್ತು ಸಂಬಂಧಿಕರೆಲ್ಲರೂ ಸಾಮಾಜಿಕ ಜವಾಬ್ದಾರಿ ಅರಿತು ಆ ವ್ಯಕ್ತಿಗೆ ಬೆಂಬಲವಾಗಿ ನಿಂತಾಗ ಅಲ್ಪಕಾಲದಲ್ಲೇ ಆತ ಎಲ್ಲರಂತಾಗಲು ಸಾಧ್ಯವಿದೆ ಎಂದರು. ಮನೋರೋಗ ತಜ್ಞ ಡಾ| ಅನಿರುದ್ಧ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕಾರ್ಯಕ್ರಮವನ್ನು ಪ.ಪೂ. ಕಾಲೇಜು ಪ್ರಾಂಶುಪಾಲ ಡಾ| ಜಾನ್ ಪಾಯ್ಸ ಸ್ವಾಗತಿಸಿದರು.