ಧಾರವಾಡ: ಮಾನಸಿಕ ರೋಗವೂ ಸಹ ದೈಹಿಕ ರೋಗದ ಹಾಗೆಯೇ ಎಂಬ ತಿಳಿವಳಿಕೆ ಸಾರ್ವತ್ರಿಕವಾಗಿ ಬರಬೇಕಾಗಿದೆ ಎಂದು ಚಿಂತಕ ಪ್ರೊ| ಕೆ.ಎಸ್. ಶರ್ಮಾ ಹೇಳಿದರು.
ಕವಿಸಂನಲ್ಲಿ ಖ್ಯಾತ ಜ್ಯೋತಿಷಿ ದಿ| ಎನ್.ಕೆ. ಜೋಗಳೇಕರ ಸ್ಮರಣಾರ್ಥ ದತ್ತಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಜಾಗೃತಿಯಿಂದ ಢಂಬಾಚಾರ ಹಾಗೂ ಅಸಾಂಪ್ರದಾಯಿಕ ಜ್ಯೋತಿಷ, ದೇವಪೂಜೆಗಳು ನಿಯಂತ್ರಣಕ್ಕೆ ಬರಬಹುದು ಎಂದರು.
ನೊಂದು ಬೆಂದವರಿಗೆ ಸಾಂತ್ವನ ನೀಡಿ ಅವರ ಬಾಳ ಪಥದಲ್ಲಿ ನವೋಲ್ಲಾಸ ಮತ್ತು ನವೋತ್ಸಾಹವನ್ನು ನೀಡುತ್ತಿದ್ದ ಜ್ಯೋತಿಷಿ ಎನ್.ಕೆ. ಜೋಗಳೇಕರ ಅವರು ಜ್ಯೋತಿಷ್ಯಕ್ಕಿಂತ ಹೆಚ್ಚಾಗಿ ಮನೋವಿಜ್ಞಾನಿಯಂತೆ ವರ್ತಿಸುತ್ತಿದ್ದರು. ಉತ್ತರ ಕರ್ನಾಟಕ ಭಾಗದ ಜ್ಯೋತಿಷಿಗಳಿಗೆ ತಮ್ಮ ಕಾರ್ಯ ಚಟುವಟಿಕೆ ಹಾಗೂ ಅನುಪಮ ಮಾನವೀಯ ಸೇವೆಯೊಂದಿಗೆ ಮಹತ್ವದ ಸ್ಥಾನ ನೀಡಿದವರು ಅವರಾಗಿದ್ದರು ಎಂದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಹಿರಿಯ ನ್ಯಾಯವಾದಿ ವಿ.ಡಿ. ಕಾಮರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜ್ಯೋತಿಷ್ಯ ಕ್ಷೇತ್ರದಲ್ಲಿ ಎನ್. ಕೆ. ಜೋಗಳೇಕರ ಅವರಂತ ಮೇಧಾವಿ ಮತ್ತು ಆದರ್ಶ ಜ್ಯೋತಿಷಿಗಳ ಸಂಖ್ಯೆ ಇಳಿಮುಖವಾಗಿದೆ. ಬದಲಿಗೆ ಢೋಂಗಿ ಜ್ಯೋತಿಷಿಗಳ ಸಂಖ್ಯೆ ಹೆಚ್ಚಾಗಿದ್ದು, ಜನರ ಸಮಸ್ಯೆಗಳನ್ನು ದುರುಪಯೋಗಪಡಿಸಿಕೊಂಡು ವ್ಯವಸ್ಥಿತವಾಗಿ ಸುಲಿಯುವ ಜ್ಯೋತಿಷಿಗಳು ಹುಟ್ಟಿಕೊಂಡಿದ್ದಾರೆ. ನೈಜ ಜ್ಯೋತಿಷ್ಯಶಾಸ್ತ್ರದವರು ಇದಕ್ಕೆ ಸೂಕ್ತ ಪರಿಹಾರ ಹುಡುಕಬೇಕಾಗಿದೆ ಎಂದು ಹೇಳಿದರು.
ಮನೋಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ದಿ| ಗಿರೀಶ ಕಾರ್ನಾಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದತ್ತಿದಾನಿ ಸುಹಾಸ ಜೋಗಳೇಕರ, ಶಿವಣ್ಣ ಬೆಲ್ಲದ ಇದ್ದರು. ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಶಾಂತೇಶ ಗಾಮನಗಟ್ಟಿ ವಂದಿಸಿದರು.