Advertisement
ಆರೋಗ್ಯ ಎಂದರೆ ಕೇವಲ ದೈಹಿಕ ಸ್ವಾಸ್ಥ್ಯ ಮಾತ್ರವಲ್ಲ. ಅದು ದೈನಂದಿನ ಜೀವನದಲ್ಲಿ ಕಾರ್ಯನಿರ್ವಹಿಸುವ ಮತ್ತು ಭಾಗವಹಿಸುವ ನಮ್ಮ ಸಾಮರ್ಥ್ಯಕ್ಕೂ ಸಂಬಂಧಿಸಿದೆ. ಒಬ್ಬ ವ್ಯಕ್ತಿಗೆ ದೈನಂದಿನ ಕಾರ್ಯವೈಖರಿಯಲ್ಲಿ ಅಥವಾ ಅದರಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಏನಾದರೂ ಸಮಸ್ಯೆ ಕಂಡುಬಂದಲ್ಲಿ ಅದನ್ನು ವೈಕಲ್ಯ ಅಥವಾ ಅಂಗವೈಕಲ್ಯ ಎಂದು ಕರೆಯಬಹುದು. ಸಾಮಾನ್ಯವಾಗಿ ದೈಹಿಕ ಕಾಯಿಲೆ, ಆಘಾತ ಅಥವಾ ಯಾವುದೇ ಆರೋಗ್ಯ ಸ್ಥಿತಿಯಿಂದ ವೈಕಲ್ಯ ಉಂಟಾಗುತ್ತದೆ. ವಿಶ್ವ ಜನಸಂಖ್ಯೆಯ ಸುಮಾರು ಶೇ.15 ಮಂದಿ ನಾನಾ ರೀತಿಯ ವೈಕಲ್ಯಗಳನ್ನು ಹೊಂದಿದ್ದಾರೆ ಎಂದು ವಿಶ್ವಸಂಸ್ಥೆಯು ಅಂದಾಜಿಸಿದೆ. ಈ ವೈಕಲ್ಯ ಅಥವಾ ಅಂಗವೈಕಲ್ಯಗಳು ತಾತ್ಕಾಲಿಕವಾಗಿರಬಹುದು ಅಥವಾ ಶಾಶ್ವತವಾಗಿ ವ್ಯಕ್ತಿಗೆ ಕಾಡಬಹುದು. ಅಲ್ಲದೆ ಸೌಮ್ಯವಾಗಿ ಅಥವಾ ಅತಿಯಾಗಿ ಕಾಣಬಹುದು. ನಮ್ಮ ಸಮಾಜವು ಈ ವಿಕಲಚೇತನರನ್ನು ಸಾಮಾನ್ಯರಂತೆ ನೋಡುವುದಿಲ್ಲ. ಈ ಮನೋಭಾವವು ಆ ವ್ಯಕ್ತಿಗಳನ್ನು ಸಮಾಜದಿಂದ ಬೇರ್ಪಡಿಸುವಂತೆ ಮಾಡುತ್ತದೆ.
ಹಲವಾರು ತರಹದ ಮಾನಸಿಕ ಕಾಯಿಲೆಗಳು ವೈಕಲ್ಯಕ್ಕೆ ಕಾರಣವಾಗಬಹುದು. ಸ್ಕಿಜೋಫ್ರೀನಿಯಾ ಮತ್ತು ಉನ್ಮಾದ, ವಿಷಾದದಂತಹ ತೀವ್ರ ಮಾನಸಿಕ ಅಸ್ವಾಸ್ಥ್ಯವು ರೋಗಿಯ ಒಟ್ಟಾರೆ ಕಾರ್ಯಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ರೋಗಿಗೆ ವೈಯಕ್ತಿಕವಾಗಿ ಅಥವಾ ಇತರ ರೀತಿಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ತೀವ್ರವಾದ ಮಾನಸಿಕ ಅಸ್ವಾಸ್ಥ್ಯದಿಂದ ಬಳಲುತ್ತಿರುವ ಹೆಚ್ಚಿನ ರೋಗಿಗಳು ತಮ್ಮನ್ನು ತಾವು ನೋಡಿಕೊಳ್ಳುವಲ್ಲಿ ಸಮಸ್ಯೆಯನ್ನು ಹೊಂದಿರುತ್ತಾರೆ. ಉದಾಹರಣೆಗೆ, ಅವರಷ್ಟಕ್ಕೆ ಸ್ನಾನ ಮಾಡುವುದಾಗಲೀ ಅಥವಾ ಆಹಾರವನ್ನು ಸೇವಿಸುವುದಾಗಲೀ ಸಮಸ್ಯೆ ಆಗಬಹುದು. ಹಲವು ಸಂದರ್ಭಗಳಲ್ಲಿ ತನ್ನ ಮಾನಸಿಕ ಕಾಯಿಲೆಯಿಂದಾಗಿ ಅನೇಕ ರೋಗಿಗಳು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಾರೆ ಅಥವಾ ಅವರು ಕೆಲಸ ಮಾಡಲು ಶಕ್ತರಾಗಿ ಇರುವುದಿಲ್ಲ. ಹಾಗಾಗಿ ಮಾನಸಿಕ ಕಾಯಿಲೆಯು ಅವರ ಕೆಲಸದ ಮೇಲೆಯೂ ಪ್ರಭಾವವನ್ನು ಬೀರುತ್ತದೆ. ಮನೋ ಕಾಯಿಲೆಯಿಂದ ಉಂಟಾದ ವೈಕಲ್ಯದಿಂದ ರೋಗಿಯು ಮೊದಲಿನಂತೆ ಇತರರೊಂದಿಗೆ ಸಂವಹನ ನಡೆಸಲು ಅಥವಾ ಸಾಮಾಜಿಕ ಕಾರ್ಯಗಳಿಗೆ ಅಶಕ್ತನಾಗಬಹುದು. ಒಂದು ವೇಳೆ ರೋಗಿಯು ವಿದ್ಯಾರ್ಥಿಯಾಗಿದ್ದರೆ ಅದು ಆತನ ಶೈಕ್ಷಣಿಕ ಜೀವನಕ್ಕೂ ಅಡ್ಡಿಯಾಗಬಹುದು. ಈ ಅಂಗವೈಕಲ್ಯವು ಕುಟುಂಬದ ಮೇಲೆ ಸಹಜವಾಗಿ ದುಷ್ಪರಿಣಾಮವನ್ನು ಬೀರುತ್ತದೆ. ಇವುಗಳಲ್ಲಿ ಹೆಚ್ಚಿನ ಪರಿಣಾಮಗಳು ದೀರ್ಘಕಾಲದ ವರೆಗೆ ಇರುತ್ತವೆ. ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಕೌಟುಂಬಿಕವಾಗಿ ಯಾವುದೇ ಪಾತ್ರಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ, ಇತರ ಕುಟುಂಬ ಸದಸ್ಯರು ಕುಟುಂಬದ ಜವಾಬ್ದಾರಿಗಳನ್ನು ಪೂರೈಸಬೇಕಾಗುತ್ತದೆ. ಕುಟುಂಬ ಸದಸ್ಯನು/ರು ಕೌಟುಂಬಿಕ ಜವಾಬ್ದಾರಿಯ ಜತೆಗೆ ರೋಗಿಯ ಆರೈಕೆಯಲ್ಲಿ ಕೂಡ ತೊಡಗಿಸಿಕೊಳ್ಳಬೇಕಾದ ಅನಿವಾರ್ಯವೂ ಬರಬಹುದು. ಈ ಹೆಚ್ಚುವರಿ ಜವಾಬ್ದಾರಿಗಳು ಮುಂದಿನ ದಿನಗಳಲ್ಲಿ ರೋಗಿಯ ಆರೈಕೆಗಾರರಲ್ಲಿ ಖನ್ನತೆಯಂತಹ ಸಮಸ್ಯೆಗಳಿಗೆ ದಾರಿ ಮಾಡಿಕೊಡ ಬಹುದು.
ತೀವ್ರ ತರಹದ ದೈಹಿಕ ಅಥವಾ ಮಾನಸಿಕ ಕಾಯಿಲೆಗಳು ವೈಕಲ್ಯಕ್ಕೆ ಕಾರಣವಾಗ ಬಹುದು. ನೆನಪಿರಲಿ, ರೋಗಿಯು ತನ್ನ ಕೆಲಸ ಕಾರ್ಯಗಳನ್ನು ಮಾಡದಂತೆ ತಡೆಗಟ್ಟುವುದು ಆತನ ಕಾಯಿಲೆಯೇ ವಿನಾ ಆತ ಉದ್ದೇಶಪೂರ್ವಕವಾಗಿ ಮಾಡುವುದಲ್ಲ. ವಿಕಲಚೇತನರು ನಮ್ಮ ಸಮಾಜದಲ್ಲಿ ಇತರರಂತೆ ಸಕ್ರಿಯವಾಗಿ ಜೀವನವನ್ನು ನಡೆಸಬಹುದು ಮತ್ತು ಅದು ಅವರ ಹಕ್ಕು ಕೂಡ. ಈ ನಿಟ್ಟಿನಲ್ಲಿ ವೈದ್ಯಕೀಯ ಸಲಹೆಯ ಜತೆಗೆ ಕುಟುಂಬಸ್ತರ, ಆಪ್ತರ ಹಾಗೂ ಸಮಾಜದ ಸಹಕಾರವು ರೋಗಿಯನ್ನು ವೈಕಲ್ಯವನ್ನು ಮೆಟ್ಟಿ ನಿಲ್ಲುವಂತೆ ಮಾಡಬಹುದು.
Related Articles
ಅಂಗವೈಕಲ್ಯವನ್ನು ಹೇಗೆ ಕಡಿಮೆ ಮಾಡುವುದು?
ಆರಂಭಿಕ ಹಂತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸುವುದು ಮತ್ತು ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದರಿಂದ ರೋಗಿ ಬೇಗನೆ ಗುಣಮುಖ ಹೊಂದುತ್ತಾನೆ. ಜತೆಗೆ ಅದು ವೈಕಲ್ಯದಿಂದ ಪಾರು ಮಾಡಬಹುದು. ಒಂದು ವೇಳೆ ವ್ಯಕ್ತಿಯು ಮಾನಸಿಕ ರೋಗದಿಂದ ಬಳಲುತ್ತಿದ್ದರೆ ಆತ ಮನೋವೈದ್ಯರ ಸಲಹೆಯಂತೆ ಔಷಧವನ್ನಾಗಲೀ ಅಥವಾ ಬೇಕಾದ ಆಪ್ತ ಸಮಾಲೋಚನೆಯನ್ನಾಗಲೀ ಪಡೆದುಕೊಂಡಲ್ಲಿ ವೈಕಲ್ಯವನ್ನು ಕಡಿಮೆ ಮಾಡಿಕೊಳ್ಳಬಹುದು. ಜತೆಗೆ ಭವಿಷ್ಯದಲ್ಲಿ ರೋಗ ಮರುಕಳಿಸದಂತೆ ತಡೆಗಟ್ಟಬಹುದು. ಒಂದು ವೇಳೆ ರೋಗಿಯು ತೀವ್ರ ವೈಕಲ್ಯದಿಂದಿದ್ದರೆ ಆತ ಮನೋಚಿಕಿತ್ಸಾ ಪುನರ್ವಸತಿ ಕೇಂದ್ರಗಳ ಅಥವಾ ಡೇ ಕೇರ್ ಸೌಲಭ್ಯಗಳ ಬಳಕೆಯನ್ನು ಮಾಡಿಕೊಳ್ಳಬಹುದು.
ರೋಗಿಗೆ ಬೇಕಾದ ಭಾವನಾತ್ಮಕ ಬೆಂಬಲ, ರೋಗಿಯ ಅಭಿರುಚಿಗೆ ಸಂಬಂಧಿಸಿದ ಕೌಶಲಗಳ ತರಬೇತಿಯನ್ನು ಸಂಬಂಧಿಕರು ಅಥವಾ ಸ್ನೇಹಿತರು ನೀಡುವ ಮೂಲಕ ರೋಗಿಯಲ್ಲಿ ವೈಕಲ್ಯದ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಹಾಗಾಗಿ ಬಂಧುಮಿತ್ರರ ಪಾತ್ರವು ಅತೀ ಮುಖ್ಯ. ಕೊನೆಯದಾಗಿ, ಜನಸಾಮಾನ್ಯರ ಪಾತ್ರ ಅತ್ಯಂತ ಆವಶ್ಯಕ. ಮಾನಸಿಕ ಅಸ್ವಸ್ಥರ ಬಗ್ಗೆ ಯಾವುದೇ ನಕಾರಾತ್ಮಕ ಮನೋಭಾವವಿಲ್ಲದೆ ಮಾನಸಿಕ ಅಸ್ವಾಸ್ಥ್ಯವುಳ್ಳ ರೋಗಿಯನ್ನು ಸಮಾಜವು ಕಾಳಜಿಯಿಂದ ನೋಡಿಕೊಂಡಲ್ಲಿ ರೋಗಿಯು ಸಮಾಜದಲ್ಲಿ ಇತರರ ಹಾಗೆ ನೆಮ್ಮದಿಯಿಂದ ಬದುಕಬಹುದು.
Advertisement
-ಪ್ರವೀಣ್ ಎ. ಜೈನ್ ಮನೋಸಾಮಾಜಿಕ ತಜ್ಞ
ಮನೋರೋಗ ಚಿಕಿತ್ಸಾ ವಿಭಾಗ ,
ಕೆಎಂಸಿ ಆಸ್ಪತ್ರೆ, ಉಡುಪಿ