ರಾಮನಗರ: ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಮಾನಸಿಕ ಆರೋಗ್ಯ ಬಹಳ ಮುಖ್ಯವಾಗಿದೆ. ಆದ್ದರಿಂದ ಆರೋಗ್ಯದತ್ತ ಎಲ್ಲರೂ ಹೆಚ್ಚಿನ ಗಮನಹರಿಸುವ ಮೂಲಕ ಮಹತ್ವ ನೀಡಬೇಕು. ವಿಶೇಷವಾಗಿ ಪೊಲೀಸ್, ನ್ಯಾಯಾಲಯ ಮತ್ತು ವೈದ್ಯಕೀಯ ಇಲಾಖೆಗಳು ದಿನದ 24 ಗಂಟೆಯೂ ಸೇವೆ ಸಲ್ಲಿಸುವ ಅನಿವಾರ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ಅನಿತಾ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾಮಾನ್ಯವಾಗಿ ಎಲ್ಲರೂ ಒತ್ತಡದ ಬದುಕು ನಡೆಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಒಂದಲ್ಲಾ ಒಂದು ಒತ್ತಡ ಸಾಮಾನ್ಯವಾಗಿದೆ. ಇದರಿಂದಾಗಿ ಹಲವಾರು ಖಾಯಿಲೆಗಳು ಬರಲಾರಂಭಿಸಿವೆ. ಬಿಪಿ, ಶುಗರ್ ಹೆಚ್ಚಾಗಿ ಮಧ್ಯಮ ವಯಸ್ಸಿನಲ್ಲಿಯೇ ಕಾಣಿಸುತ್ತಿದೆ. ಅದಕ್ಕೆ ಕಾರಣ ಮಾನಸಿಕ ಆರೋಗ್ಯ ಹದಗೆಟ್ಟಿರುವುದರ ಜೊತೆಗೆ ಅನವಶ್ಯಕವಾಗಿ ಒತ್ತಡದ ಬದುಕು ನಡೆಸುತ್ತಿರುವುದಾಗಿದೆ ಎಂದು ಹೇಳಿದರು.
ಒತ್ತಡ ಕಡಿಮೆ ಮಾಡಿಕೊಳ್ಳಿ: ಪೊಲೀಸರು, ನ್ಯಾಯಾಲಯ ಸಿಬ್ಬಂದಿ ಹಾಗೂ ವೈದ್ಯಕೀಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡ ಹೆಚ್ಚಾಗಿರುತ್ತದೆ. ಏಕೆಂದರೆ ಪ್ರಕರಣಗಳ ತನಿಖೆ ನಡೆಸುವುದು ಮತ್ತು ನ್ಯಾಯ ನೀಡುವುದು ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡುವ ಜವಾಬ್ದಾರಿಯಲ್ಲಿ ಮಾನಸಿಕವಾಗಿ ಒತ್ತಡ ಹೆಚ್ಚಾಗಿರುತ್ತದೆ. ಆದ್ದರಿಂದ ಒತ್ತಡವಿಲ್ಲದೆ ಕೆಲಸವಾಗಲು ಸಾಧ್ಯವಿಲ್ಲ. ಅತಿಯಾದ ಒತ್ತಡ ಮಾಡಿಕೊಳ್ಳದೆ, ಕೆಲಸ ಮಾಡಬೇಕು. ಜೊತೆಗೆ ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೆ ಕಾನೂನು ಸೇವಾ ಪ್ರಾಧಿಕಾರದ ಉಚಿತ ಸಲಹೆ ಪಡೆದು, ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಒಟ್ಟಾರೆ ಎಲ್ಲರೂ ಮಾನಸಿಕ ಆರೋಗ್ಯ ಮತ್ತು ಯೋಗ ಕ್ಷೇಮಕ್ಕೆ ಮಹತ್ವ ನೀಡಬೇಕು. ಈ ಮೂಲಕ ನೆಮ್ಮದಿಯ ಬದುಕು ಕಂಡುಕೊಳ್ಳಬಹುದು ಎಂದು ತಿಳಿಸಿದರು.
ಮಾನಸಿಕ ಆರೋಗ್ಯ ಶಿಬಿರ ಆಯೋಜನೆ: ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ವಿಭಾಗದಿಂದ ಜಿಲ್ಲೆ, ತಾಲೂಕು, ಸಮುದಾಯ ಆರೋಗ್ಯ ಕೇಂದ್ರ ಮತ್ತು ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲದೆ, ಮಾನಸಿಕ ತೊಂದರೆಗಳಿಂದ ಬಳಲುತ್ತಿರುವವರನ್ನು ಪತ್ತೆ ಮಾಡುವ ಮೂಲಕ ಅವರಿಗೆ ಉಚಿತವಾಗಿ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಮಾನಸಿಕ ಸಮಸ್ಯೆಗೆ ತುತ್ತು: ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಜಿ.ಎಲ್.ಪದ್ಮಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕುಟುಂಬ, ಮಕ್ಕಳು, ನಿರ್ವಹಣೆ ಮತ್ತು ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದು, ಹಲವಾರು ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಕೆಲವೊಮ್ಮೆ ಹಾರ್ಮೋನ್ ವ್ಯತ್ಯಾಸದಿಂದ ಆರೋಗ್ಯದಲ್ಲಿ ಮಾನಸಿಕ ಒತ್ತಡದ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಇಂತಹ ಮಹಿಳೆಯರು ಆಪ್ತ ಸಮಾಲೋಚನೆ ಮೂಲಕ ಮಾನಸಿಕ ಒತ್ತಡದಿಂದ ಹೊರಬರಲು ಸಾಧ್ಯವಿದೆ. ಆದ್ದರಿಂದ ಎಲ್ಲರೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ, ಉಚಿತವಾಗಿ ಆಪ್ತ ಸಮಾಲೋಚನೆ ನೀಡಲಾಗುತ್ತದೆ. ಅದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಒತ್ತಡ ನಿವಾರಣೆ ಮಾಡಿಕೊಂಡು ಉತ್ತಮ ಆರೋಗ್ಯವಂತರಾಗಿರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ವಿ.ಶೈಲೇಂದ್ರ, ಡಿವೈಎಸ್‌ಪಿ. ರಮೇಶ್, ಮನೋರೋಗ ತಜ್ಞರಾದ ಚಂದ್ರಶೇಖರ್, ಡಿಎಸ್‌ಒ ಡಾ.ಕಿರಣ್ ಶಂಕರ್, ಆರ್‌ಸಿಎಚ್ ಡಾ.ರಾಜು, ಡಿಟಿಒ ಡಾ.ಕುಮಾರ್, ಡಿಎಂಒ ಡಾ.ಶಶಿಧರ್, ಮನೋರೋಗ ತಜ್ಞ ಡಾ.ಆದರ್ಶ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್, ಮನೋರೋಗ ಸಾಮಾಜಿಕ ಕಾರ್ಯಕರ್ತೆ ಪದ್ಮರೇಖಾ ಮತ್ತು ಆರೋಗ್ಯ ಸಿಬ್ಬಂದಿ, ಪೊಲೀಸ್ ತರಬೇತಿ ಶಾಲೆಯ ಅಧಿಕಾರಿಗಳು, ಶಿಬಿರಾರ್ಥಿಗಳು ಹಾಜರಿದ್ದರು.
ಪ್ರತಿಯೊಬ್ಬರಲ್ಲೂ ಒತ್ತಡದ ಬದುಕು ಅನಿವಾರ್ಯವಾಗಿದೆ. ಆದ್ದರಿಂದ ಯಾವುದೇ ವ್ಯಕ್ತಿ ಮಾನಸಿಕ ಆರೋಗ್ಯವಾಗಿದ್ದರೆ, ಎಲ್ಲವನ್ನೂ ಜೈಯಿಸಬಹುದು. ಅದರಲ್ಲೂ ಪೊಲೀಸರು, ನ್ಯಾಯಾಲಯ ಸಿಬ್ಬಂದಿ ಮತ್ತು ವೈದ್ಯ ಸಿಬ್ಬಂದಿಗಳದ್ದು, ಒತ್ತಡದ ಕಾರ್ಯ ಪ್ರವೃತ್ತಿಯಾಗಿದ್ದು, ಆದರಿಂದ ಮೊದಲು ಹೊರಬಂದರಷ್ಟೇ ನೀವು ಸಮಾಜಕ್ಕೆ ಸೇವೆ ಮತ್ತು ಕೊಡುಗೆ ನೀಡಬಹುದು. ಆದ್ದರಿಂದ ಮಾನಸಿಕ ಆರೋಗ್ಯದತ್ತ ಆದ್ಯತೆ ನೀಡಿ.
– ನ್ಯಾ. ಅನಿತಾ, ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ