Advertisement

ಮಾನಸಿಕ ಆರೋಗ್ಯವೂ, ಆತ್ಮಹತ್ಯೆಯೂ…

11:57 PM Oct 09, 2019 | sudhir |

ಸಾಕು ಸಾಕಪ್ಪ ಬದುಕಿದ್ದು ಎನ್ನುವ ಇರಾದೆ ಜೀವನದಲ್ಲಿ ಎಲ್ಲರಿಗೂ ಒಮ್ಮೊಮ್ಮೆ ಇದ್ದಿದ್ದೆ. ಅದು ಬ್ರಾಂತಿಯೂ ಅಲ್ಲ, ದೋಷವೂ ಅಲ್ಲ. ಎರಗಿರುವ ಸಂಕಷ್ಟದಿಂದ ಹೊರಬರಲಾದೆಂಬ ತಕ್ಷಣದ ಮನಸ್ಥಿತಿಯಷ್ಟೆ. ಸಾವಧಾನ, ಹಿರಿಯರ ಮಾರ್ಗದರ್ಶನ ಅಂಥ ಗಳಿಗೆಯನ್ನು ದಾಟಲು ದಿವ್ಯ ಮದ್ದು.

Advertisement

ಪ್ರತೀ ವರ್ಷ ಅಕ್ಟೋಬರ್‌ 10- “ವಿಶ್ವ ಮಾನಸಿಕ ಆರೋಗ್ಯ’ ದಿನವಾಗಿ ಆಚರಿಸಲಾಗುತ್ತದೆ. ಈ ಬಾರಿ ಆ ದಿಸೆಯಲ್ಲಿ ಆತ್ಮಹತ್ಯೆ ತಡೆಗೆ ಹೆಚ್ಚಿನ ಒತ್ತು ನೀಡುವುದು ವಿಶಿಷ್ಟ. ವರ್ಷಕ್ಕೆ ಎಂಟು ಲಕ್ಷ ಮಂದಿ ಬದುಕಿಗೆ ಸ್ವಯಂ ವಿದಾಯ ಹೇಳುತ್ತಾರೆ. ಪ್ರತೀ ಆತ್ಮಹತ್ಯೆ ಹಿಂದೆ 20 ಪ್ರಯತ್ನಗಳಿರುತ್ತವೆ. ಆತ್ಮಹತ್ಯೆ ಮತ್ತು ಆತ್ಮಹತ್ಯೆಗೆ ಪ್ರಯತ್ನಗಳು ಕುಟುಂಬ, ಆಪೆ¤àಷ್ಟರು, ಸಹೋದ್ಯೋಗಿಗಳು ಹಾಗೂ ಸಮಾಜದ ಮೇಲೆ ನಕಾರಾತ್ಮಕ ಪ್ರಭಾವಗಳನ್ನು ಬೀರುತ್ತವೆ.

ಒಬ್ಬ ವ್ಯಕ್ತಿಯ ಮಾನಸಿಕ ಸ್ವಾಸ್ಥ್ಯ ಎಂದರೇನು? ಬದುಕಿನ ಸಾಮಾನ್ಯ ಒತ್ತಡಗಳನ್ನು ನಿಭಾಯಿಸಬಲ್ಲ, ಸನ್ಮಾರ್ಗದಿಂದ ದುಡಿದು ಸಮಾಜಕ್ಕೆ ಏನಾದ ರೊಂದು ಕೊಡುಗೆ ನೀಡಬಲ್ಲ ಸಾಮರ್ಥ್ಯ ತನ್ನಲ್ಲಿದೆಯೆಂಬ ಆತ್ಮವಿಶ್ವಾಸ‌ವುಳ್ಳವರೆಲ್ಲ ಮಾನಸಿಕ ವಾಗಿ ಆರೋಗ್ಯವಂತರೇ ಹೌದು.

“ತನ್ನ ತಾನರಿತರೆ ತನ್ನರಿವೇ ತನಗೆ ಗುರು’ ಎಂಬ ಶರಣರ ನುಡಿ ಈ ನಿಟ್ಟಿನಲ್ಲಿ ಉದಾಹರಣೀಯ. ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯದ ವ್ಯಾಖ್ಯೆಯನ್ನು ಇಡಿಯಾಗಿ ರೂಪಿಸಿದೆ: “ಒಬ್ಬ ವ್ಯಕ್ತಿಯ ಆರೋಗ್ಯವೆಂದರೆ ಆತನ(ಆಕೆಯ) ಪೂರ್ಣ ದೈಹಿಕ, ಮಾನಸಿಕ ಯೋಗಕ್ಷೇಮ. ಕೇವಲ ಆತ(ಆಕೆ) ರೋಗ ಅಥವಾ ದೌರ್ಬಲ್ಯ ಮುಕ್ತವಾಗಿರುವುದಲ್ಲ’. ಮಾನಸಿಕ ಆರೋಗ್ಯವಿಲ್ಲದೆ ದೈಹಿಕ ಆರೋಗ್ಯ ಅಸಂಭವ. ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷಿಸಿರುವಂತೆ ಶೇ. 14ರಷ್ಟು ವ್ಯಾಧಿಗಳು ನರಸಂಬಂಧಿ ಮನೋನ್ಯೂನತೆಗಳೇ. ರೋಗವನ್ನು ಪರಿಹರಿಸಿಕೊಳ್ಳುವ ಸಂಕಲ್ಪ, ಗ್ರಹಿಕೆ ಮತ್ತು ಲಭ್ಯ ವರದಿಗಳನ್ನು ಬಳಸಿ ಆರೋಗ್ಯ ಪ್ರಾಪ್ತಿಗೆ ಮುಂದಾಗುವ ಪ್ರವೃತ್ತಿಯೇ “ಆರೋಗ್ಯ ಸಾಕ್ಷರತೆ’.

ಆತ್ಮಹತ್ಯೆ-ಇದರ ಇಂಗ್ಲಿಷ್‌ ಸಮಾನ ಪದ “ಸೂಯಿಸೈಡ್‌’ನ ಮೂಲ ಲ್ಯಾಟಿನ್‌ನ “ಸೂಸಿಡಮ್‌’ ‰ಉದ್ದೇಶಪೂರ್ವಕವಾಗಿ ತನ್ನ ತಾನೇ ಕೊಲ್ಲುವುದು ಎಂದರ್ಥ.

Advertisement

ಒಬ್ಬರ ಆತ್ಮಹತ್ಯೆಗೆ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಚೋದಿಸುವುದು ಸಹ ಅಪರಾಧವೇ. ಎಂದ ಮೇಲೆ ಜೀವನಾಂತ್ಯಕ್ಕೆ ಮುಂದಾಗುವವರ ಹತಾಶೆಯನ್ನು ಹತ್ತಿಕ್ಕುವುದು ಎಲ್ಲರ ಹೊಣೆ. ಜಗತ್ತಿನಲ್ಲಿ ಪ್ರತೀ 40 ಸೆಕೆಂಡುಗಳಿಗೊಮ್ಮೆ ಒಬ್ಬರು ಬದುಕಿಗೆ ವಿದಾಯ ಹೇಳುತ್ತಾರೆಂಬ ಅಂಶ ಆತಂಕಕಾರಿ. ಬಹುತೇಕ ಮಾನಸಿಕ ಅಸ್ವಾಸ್ಥ್ಯವೇ ಆತ್ಮಹತ್ಯೆಗೆ ಕಾರಣವೆಂದು ಬೇರೆ ಹೇಳಬೇಕಿಲ್ಲ.

ಶೀಘ್ರ ಕೋಪ, ಅತಿ ಭಯ, ಏಕಾಂಗಿಯಾಗಿರುವ ಗೀಳು, ಅಸ್ವಾಭಾವಿಕ ಆಲೋಚನೆಗಳು, ಅತಿಯಾದ ಕೀಳರಿಮೆ ಅಥವಾ ಮೇಲರಿಮೆ, ನಿದ್ರಾಹೀನತೆ-ಈ ಲಕ್ಷಣಗಳು ಕಂಡು ಬಂದರೆ ಉದಾಸೀನ ಮಾಡದೆ ಮಾನಸಿಕ ವೈದ್ಯರ ಸಲಹೆ ಪಡೆಯುವುದು ಅವಶ್ಯ. ಯಾರೊಂದಿಗೂ ಜಗಳವಾಡಬೇಡಿ, ಏಕೆಂದರೆ ವಾಸ್ತವವಾಗಿ ನಿಮ್ಮೊಂದಿಗೆ ನೀವೇ ಜಗಳವಾಡುವ ಪರಿಸ್ಥಿತಿಯದು.

ವೇದನೆ, ಜಿಗುಪ್ಸೆ, ಜಂಜಡಗಳೇ ಮೇಲೆನ್ನಿಸಿ ಸಾಕು ಸಾಕಪ್ಪ ಬದುಕಿದ್ದು ಎನ್ನುವ ಇರಾದೆ ಜೀವನದಲ್ಲಿ ಎಲ್ಲರಿಗೂ ಒಮ್ಮೊಮ್ಮೆ ಇದ್ದಿದ್ದೆ. ಅದು ಬ್ರಾಂತಿಯೂ ಅಲ್ಲ, ದೋಷವೂ ಅಲ್ಲ. ಎರಗಿರುವ ಸಂಕಷ್ಟದಿಂದ ಹೊರಬರಲಾಗದೆಂಬ ತತ್‌ಕ್ಷಣದ ಮನಸ್ಥಿತಿಯಷ್ಟೆ. ಸಾವಧಾನ, ಹಿರಿಯರ ಮಾರ್ಗ ದರ್ಶನ ಅಂಥ ಗಳಿಗೆಯನ್ನು ದಾಟಲು ದಿವ್ಯ ಮದ್ದು. ನಾವು ಏಕಾಂಗಿಯಲ್ಲ ಎನ್ನುವ ಮನ ವರಿಕೆಯೇ ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆ ಸರಿಯಲು ಪ್ರೇರಕವಾಗುತ್ತದೆ. ಖನ್ನತೆಯಿಂದ ದೂರವಾಗಿ ಭರವಸೆಯತ್ತ ಒಂದು ಹೆಜ್ಜೆಯಿಡಲು ಸಹಾಯಕವಾಗುತ್ತದೆ. ನಾವಿಂದು ವಿದ್ಯುನ್ಮಾನ ದಿನಮಾನಗಳಲ್ಲಿದ್ದೇವೆ. ನಾವು ಹಿಂದೆಂದೂ ಕಲ್ಪಿಸದಷ್ಟು ಕ್ಷಿಪ್ರ ಗತಿಯಲ್ಲಿ ಆಗಿಂದಾಗ್ಗೆ ಶುಭಾಶುಭ ಸುದ್ದಿಗಳು ವಿನಿಮಯಗೊಳ್ಳುತ್ತವೆ. ದಿನಮಾನ ಗಳನ್ನು ಸುಧಾರಿಸಬೇಕಾದ ಮಾಹಿತಿ ತಂತ್ರಜ್ಞಾನ ಎಂತೆಂಥ ವಿಪರ್ಯಾಸಗಳನ್ನು ಸೃಜಿಸಿವೆ ಅವಲೋಕಿಸಿದರೆ ನಿಬ್ಬೆರಗಾಗುತ್ತದೆ.

ಇದೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಪ್ರಕಟಿಸುತ್ತಲೇ ಒಬ್ಬ ಪ್ರಿಯಕರ ತನ್ನ ಪ್ರೇಮಿಗೆ ವಿಡಿಯೋ ರವಾನಿಸುತ್ತಾನೆ! ತನ್ನ ತಾಯಿ ಮೊಬೈಲ್‌ ಕೊಡಲಿಲ್ಲವೆಂದು ಒಬ್ಬ ಹುಡುಗಿ ನೇಣು ಬಿಗಿದುಕೊಳ್ಳುತ್ತಾಳೆ. ತನ್ನ ಗೆಳೆಯ ತನ್ನೊಡನೆ ಸುತ್ತಾಡಲು ಬರಲಿಲ್ಲ ಎನ್ನುವುದು ಒಬ್ಟಾಕೆಗೆ ವಿಷ ಸೇವಿಸಲು ಕಾರಣವಾಗುತ್ತದೆ. ಇನ್ನು ಪರೀಕ್ಷೆಯಲ್ಲಿ ನಪಾಸಾಯಿತೆಂದು, ನಿವೇಶನ ವ್ಯಾಜ್ಯ ಇತ್ಯರ್ಥ ವಾಗಲಿಲ್ಲವೆಂದು, ಸಾಲ ತೀರಿಸಲಾಗದೆಂದು, ಮಗನಿಗೆ “ವಾಸಿಯಾಗದ’ ಖಾಯಿಲೆಯೆಂದು ಜೀವನ ಕೊನೆಗೊಳಿಸಿ ಕೊಳ್ಳುವ ವರು ಒಂದು ಕಡೆ. ತಾಯಿ ತನ್ನ ಮಕ್ಕಳನ್ನು ಬಾವಿಗೆ ಎಸೆದು ತಾನೂ ಜಿಗಿಯುತ್ತಾಳೆ.

ಎಂಥ ದಾರುಣ ಪ್ರಸಂಗ? ಬದುಕು ಎಲ್ಲಕ್ಕಿಂತಲೂ ಹಿರಿಯದು. ಪ್ರೀತಿ, ಪ್ರಣಯ, ಬಡತನ, ಕಲಹ, ಅವಮಾನ, ನಷ್ಟ, ಬಂಧುವರ್ಗದವರ ಅಗಲಿಕೆ, ರೋಗ ರುಜಿನ ಬದುಕಿನ ಯಾನದ ಭಾಗ ಮಾತ್ರ ಎನ್ನುವ ತಿಳಿವು ಮೂಡಿದರೆ ಇಂಥ ಘೋರ ಅತಿರೇಕಗಳು ಆಗುತ್ತವೆಯೇ? “ಆತುರಗಾರನಿಗೆ ಬುದ್ಧಿ ಮಟ್ಟ’, “ದುಡುಕಿದೋಳು ಮಡಕೆ ಒಡೆದು ಬಂದಳು, ನಿಧಾನಿ ಮಡಕೆ ತುಂಬ ನೀರು ತಂದುÉ’ ಮುಂತಾದ ಗಾದೆಗಳು ತರಾತುರಿ ತರುವ ಎಡವಟ್ಟುಗಳನ್ನು ಧ್ವನಿಸುತ್ತವೆ.

ಪ್ರಾಯಃ ಆತ್ಮಹತ್ಯೆ ಮಾಡಿಕೊಳ್ಳುವ ಏಕೈಕ ಪಾಣಿಯೆಂದರೆ ಅದು ಮನುಷ್ಯನೇ! ಸುಂದರ ನಗರಗಳನ್ನು ಕಟ್ಟಿಕೊಂಡವ, ಲೋಹಗಳನ್ನು ಕಂಡುಕೊಂಡವ, ರಾಕೆಟ್ಟುಗಳನ್ನು ಉಡಾಯಿಸಿದವ, ಚಂದ್ರನನ್ನು ಮೆಟ್ಟಿ ಬಂದವ, ಸೌರಶಕ್ತಿಯ ಬಾಗಿಲು ಬಡಿದವ, ಇತಿಹಾಸವನ್ನು ಅಧ್ಯಯಿಸಿ ವರ್ತಮಾನವನ್ನು ತಿದ್ದಿಕೊಂಡವ, ಭವಿತವ್ಯಕ್ಕೆ ಹಲವು ಯೋಜನೆಗಳನ್ನು ರೂಪಿಸಿಕೊಂಡವ, ಸವಾಲೊಡ್ಡುವ ವ್ಯಾಧಿಗಳನ್ನು ಜಯಿಸಿದವ…ಮುಂತಾದ ವಿಶೇಷಣಗಳನ್ನುಳ್ಳ ವಿಶಿಷ್ಟ ಜೀವಿ ತನ್ನ ತಾನೇ ಗೆಲ್ಲಲಾಗದ್ದು ಹೇಗೆ ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆ ತಾನೇ? ಅಂದಹಾಗೆ ಒಂದೊಂದು ಆತ್ಮಹತ್ಯೆಯೂ ಹೇಗೆ ಬದುಕಬೇಕೆನ್ನುವುದನ್ನು ಹಾಗೂ ಬದುಕಬಾರದೆ ನ್ನುವುದನ್ನು ಹೇಳಿಕೊಡುತ್ತದೆ. ಪ್ರಾಚೀನ ಗ್ರೀಕ್‌ ನಾಗರಿಕತೆಯಲ್ಲಿ (ಕ್ರಿ.ಪೂ.600) ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳಬಯಸಿದರೆ ಊರ ಪ್ರಮುಖರ ಸಭೆಯಿಂದ ಅನುಮತಿ ಪಡೆಯ ಬೇಕಿತ್ತು.

ಮನುಷ್ಯನ ಸಂವೇದನೆಗಳು ಸ್ಥಿರವಾಗಿರವು. ಇಂದಿನ ಭಾವುಕತೆ, ನೆನ್ನೆಯದಕ್ಕಿಂತ ಭಿನ್ನ. ಅಂತೆಯೇ ನಾಳೆಯದು ಬೇರೆ. ಸಂದು ಹೋದ ಪ್ರಸಂಗ ಒಂದೇ ಆದರೂ ಅದನ್ನು ನೋಡುವ, ಪರಿಭಾವಿಸುವ ದೃಷ್ಟಿ ಅನ್ಯ. ಭಾರತದಲ್ಲಿ ಆತ್ಮಹತ್ಯೆಗೆ ಶರಣಾಗುವವರ ಪೈಕಿ ಶೇಕಡಾ 71ರಷ್ಟು ಮಂದಿ 44ರೊಳಗಿನ ವಯಸ್ಸಿನವರು.

ಆತ್ಮಹತ್ಯೆ ಒಂದು ಗಂಭೀರತಮ ಸಾಮಾಜಿಕ ಸಮಸ್ಯೆ. ನಿಮ್ಮ ತೋಟದಲ್ಲಿ ಮಾವಿನ ಕಾಯಿ ಕಿತ್ತು ಸಿಕ್ಕಿಬಿದ್ದೆನಲ್ಲ ಎಂಬ ನೆನಪು ನಗೆಯುಕ್ಕಿಸದಿರಲು ಸಾಧ್ಯವೇ? ನಿಮ್ಮ ಮಿತ್ರರು ಅಂದು ಎರಡೇಟು ಬಿಗಿದಿದ್ದರೂ ಅದೂ ಇಂದಿನ ಖುಷಿಯ ಭಾಗವೇ. ಫ್ರಾನ್ಸಿನ ಪ್ರಸಿದ್ಧ ಕಾದಂಬರಿಕಾರ ಮತ್ತು ಆಲ್ಬರ್ಟ್‌ ಐನ್‌ಸ್ಟಿàನರ ಆಪ್ತ ಮಿತ್ರರಾಗಿದ್ದ ಹೆನ್ರಿ ಬರ್‌ಬಸ್ಸೆ ಎರಡು ಸೇನಾ ಪಡೆಗಳು ಸಮರ ಹೂಡುವುದೆಂದರೆ ಒಂದು ದೊಡ್ಡ ಸೇನಾ ಪಡೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಇದು ಆತ್ಮಹತ್ಯೆ ಎಂಥ ಮೂರ್ಖ ತನವೆನ್ನುವುದನ್ನು ಬಿಂಬಿಸುತ್ತದೆ. ಪುರಂದರ ದಾಸರು ಮಾನವ ಜನ್ಮ ದೊಡ್ಡದು, ಅದನ್ನು ಹಾನಿ ಮಾಡಿಕೊಳ್ಳಬೇಡಿರೊ ಹುಚ್ಚಪ್ಪಗಳಿರಾ ಎನ್ನುವುದಕ್ಕೆ ಸಂವಾದಿಯಾಗಿದೆ. “ಈಸಬೇಕು, ಇದ್ದು ಜಯಿಸ ಬೇಕು’-ಅದೇ ವಿವೇಕ. ಧ್ಯಾನ, ಯೋಗ ಮನಸ್ಸಿನ ಒತ್ತಡ ನಿವಾರಣೆಗೆ ಸಹಕಾರಿ. “ಸದೃಢ ಶರೀರದಲ್ಲಿ ಸದೃಢ ಮನಸ್ಸು’ ಹೊಂದಲು ಯೋಗವೇ ಔಷಧವೆನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಬದುಕೆನ್ನುವುದು ಬಾಳಲಿಕ್ಕೆ ಹೊರತು ಅದೊಂದು ಸಂಕೋಲೆ, ಶಿಕ್ಷೆ ಅಲ್ಲ ಎಂಬ ಭಾವ ಮುಖ್ಯವಾಗುತ್ತದೆ. ಹಿತಮಿತ ‌ ವಿನೋದಪ್ರವೃತ್ತಿ ನೋವನ್ನು ಮರೆಸುತ್ತದೆ, ಲವಲವಿಕೆಯತ್ತ ನಮ್ಮನ್ನು ಒಯ್ಯುತ್ತದೆ. ಮಹಾತ್ಮ ಗಾಂಧೀಜಿಯವರು ನನಗೆ ಹಾಸ್ಯ ಮನೋಭಾವ ವಿಲ್ಲದಿದ್ದಿದ್ದರೆ ಎಂದೋ ಆತ್ಮಹತ್ಯೆಗೆ ಶರಾಣಾಗಿ ಬಿಡುತ್ತಿದ್ದೆ ಎನ್ನುತ್ತಿದ್ದರು.

ಸ್ಟಾಲಿನ್‌ ತಮ್ಮ ಅಂತಿಮ ದಿನಗಳಲ್ಲಿ ಮರಣ ಶಯೆÂಯಲ್ಲಿದ್ದರು. ಗಂಭೀರ ಖಾಯಿಲೆಗಳು ಅವರನ್ನು ಕಾಡಿದ್ದವು. ವೈದ್ಯರ ತಂಡ ಕೈಚೆಲ್ಲಿಯೂ ಆಗಿತ್ತು. ಸಾರ್‌, ಹೇಗೆನ್ನಿಸುತ್ತಿದೆ ಈಗ ನಿಮ್ಮ ಬದುಕು? ಎಂದು ಅವರ ಆಪ್ತರೊಬ್ಬರು ವಿಚಾರಿಸಿದಾಗ ಸ್ಟಾಲಿನ್‌ ನೀಡಿದ ಉತ್ತರ: ಬಾಳಲು ಯೋಗ್ಯವಾಗಿವೆಯಲ್ಲ, ನೀವೇಕೆ ಹೀಗೆ ಅನುಮಾನಿಸುವಿರಿ? ಎಂದರಂತೆ. ಆಶಾವಾದ ವೆಂದರೆ ಇದಲ್ಲವೆ?

ಡಾ.ಡಿ.ವಿ.ಜಿ.ಅವರ ವಚನವೊಂದು ಈ ನಿಟ್ಟಿನಲ್ಲಿ ನಮ್ಮನ್ನು ಜಾಗೃತಗೊಳಿಸುತ್ತದೆಛ
“ಶುಭವಾವುದಶುಭವಾವುದು ಲೋಕದಲಿ
ವಿಭಜಿಸಲ್ಕಾಗದನ್ಯೋನ್ಯ ಸಂಬಂಧ
ಉಭಯವನು ಮೀರ್ದ
ಸಾಮ್ಯದ ನೀತಿಯೊಂದಿಹುದು
ಅಭಯಪಥವದು ಮಂಕುತಿಮ್ಮ’

– ಬಿಂಡಿಗನವಿಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next