Advertisement

ಋತು ವಿರಾಮದ ತಲ್ಲಣ

07:30 AM Apr 25, 2018 | |

ಹೆಣ್ಣುಮಕ್ಕಳನ್ನು ಒಂದು ಭಯವಾಗಿ, ಸಂಕಟವಾಗಿ, ಕಿರಿಕಿರಿಯಾಗಿ, ಶಾಪವಾಗಿ ಕಾಡುವ ನೈಸರ್ಗಿಕ ಕ್ರಿಯೆಯೇ ಮೆನೋಪಾಸ್‌. ಹರೆಯಕ್ಕೆ ಕಾಲಿಟ್ಟ ಹೆಣ್ಣುಮಕ್ಕಳಿಗೆ ದಿಢೀರ್‌ ಜೊತೆಯಾಗಿ ಅವರನ್ನು ವಾರಗಟ್ಟಲೆ ಡಿಸ್ಟರ್ಬ್ ಮಾಡುವ ಮೆನೋಪಾಸ್‌, 42 ದಾಟಿದ ಹೆಂಗಸರಿಗೆ ಇದ್ದಕ್ಕಿದ್ದಂತೆ ಋತುಚಕ್ರಕ್ಕೆ ಗುಡ್‌ಬೈ ಹೇಳಿ ಅವರನ್ನು ಹೆದರಿಸುತ್ತದೆ. ಈ ಅದೃಶ್ಯ ರಾಕ್ಷಸನ ಹಾವಳಿಗೆ ಒಳಗೊಳಗೇ ತತ್ತರಿಸಿದರೂ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳದೆ ಅಪ್ಸರೆಯಂತೆ ಮೆರೆಯುವ, ವೀರವನಿತೆಯಾಗಿ ಸಿಡಿಯುವ, ಮಹಾಮಾತೆಯಾಗಿ ಎಲ್ಲರನ್ನೂ ಸಲಹುವ ಕೆಲಸವನ್ನು ಹೆಣ್ಣೆಂಬ ಕರುಣಾಮಯಿ ಮಾಡುತ್ತಲೇ ಇರುತ್ತಾಳೆ. 
ಮೆನೋಪಾಸ್‌ (ಅಥವಾ ಮುಟ್ಟಾಗುವ) ಆದಾಗ ಅಥವಾ ನಿಂತು ಹೋದಾಗ ಹೆಣ್ಣು ಜೀವಗಳ ಚಡಪಡಿಸುತ್ತವಲ್ಲ: ಆ ಕ್ಷಣದ ಆದ್ರì ಚಿತ್ರಣ ಇಲ್ಲಿದೆ…

Advertisement

ಕೆಲವು ತಿಂಗಳ ಹಿಂದಿನ ಮಾತು. ಮಗಳು ಕಾಲೇಜಿನಿಂದ ಎಂದಿಗಿಂತ ಬೇಗ ಬಂದಳು. “ಇಷ್ಟ್ ಬೇಗ ಬಂದಿದೀಯಲ್ಲ ಹೇಗೆ? ಲಾಸ್ಟ್‌ ಪೀರಿಯೆಡ್‌ಗೆ ಬಂಕ್‌ ಮಾಡಿದ್ಯಾ?’ ಎಂದು ಕೇಳಿದ್ದಕ್ಕೆ, “ಇಲ್ಲಮ್ಮ ಗೆಳೆಯ ಕುಶಾಲ್ ಜೊತೆ ಬಂದೆ. ನಿಮ್ಮನೆ ಕಡೇನೇ ಹೋಗ್ತಿದೀನಿ. ಹೊಟ್ಟೆನೋವು ಅಂತಿದೀಯಾ… ಬಾ ಬಿಟ್ಟು ಹೋಗ್ತಿನಿ ಅಂದ. ನಂಗೂ ಬಸ್‌ಗೆ ಕಾಯೋ ತಾಳ್ಮೆ ಇರ್ಲಿಲ್ಲ, ಬಂದೆ’ ಅಂದಳು. “ಸರಿ’ ಅಂದೆ. ಆಮೇಲೆ ಕಸಿವಿಸಿಯಾಯ್ತು. “ಫ್ರೆಂಡ್ಸ್ ಹತ್ರ ಇಂಥ ವಿಷಯ ಎಲ್ಲ ಹೇಳ್ತೀಯಾ?! ಅಯ್ಯಯ್ಯ’ ಅಂದೆ. “ಹೂಂ. ಅಮ್ಮ… ಅದ್ರಲ್ಲೇನಿದೆ. ಇವೆಲ್ಲ ಸಹಜ ಅಲ್ವಾ? ಹಾಗೆ ನೋಡಿದ್ರೆ…ಗೊತ್ತಾಗ್ಬೇಕು ಎಲ್ರಿಗೂ. ಆಗಲೇ, ಹೆಣ್ಣು ಮಕ್ಳು ಎಷ್ಟೆಲ್ಲಾ ಕಷ್ಟ ಅನುಭವಿಸಿಯೂ ಅಷ್ಟೆಲ್ಲಾ ಸಾಧನೆ ಮಾಡ್ತಾರೆ ಅನ್ನೋದು ಮನವರಿಕೆಯಾಗುತ್ತೆ. ನಾವೇನ್‌ ಬಳೆ ತೊಟ್‌ಕೊಂಡಿದೀವಾ ಅಂತೆಲ್ಲ ಉಡಾಫೆ ಮಾಡೋದು ತಪ್ಪುತ್ತೆ. Infact ಇದೆಲ್ಲ ಗೊತ್ತಾದ್ಮೇಲೆ ಕುಶಾಲ್‌ ಹೇಳ್ತಿದ್ದ: “ಪಾಪ ಕಣೆ ಹೆಣ್‌ಮಕ್ಳು… ನನ್‌ ಅಮ್ಮ, ಅಕ್ಕನ್‌ ಬಗ್ಗೆ ತುಂಬಾ ಕಾಳಜಿಯಿಂದ ನಡ್ಕೊತೀನಿ ಈಗ… ತುಂಬಾ ಗೌರವಿಸ್ತೀನಿ ಹೆಣ್‌ಮಕ್ಳನ್ನ’ ಅಂತ. ನಾನು ಹೇಳಿದ್‌ ಮೇಲೆ ಈಗ ಎಲ್ಲ ಹೆಣ್‌ಮಕ್ಳು ಹೇಳ್ಕೊತಾರೆ. ಅಂಥ ಸಂದರ್ಭ ಬಂದ್ರೆ. ಮುಚ್ಚುಮರೆ ಮಾಡೋಲ್ಲ’ ಅಂದಳು.

  ಇತ್ತೀಚೆಗೆ ಒಂದು ದಿನ ಬೆಳಗ್ಗೆ ಅಪ್ಪ, ಮಗಳು ಕಾಲೇಜಿಗೆ ಹೋಗಿದ್ದರು. ಖಾಲಿ ಹೊಟ್ಟೆಯಲ್ಲಿ ಥೈರಾಯಿಡ್‌ಗೆ ಮಾತ್ರೆ ತಗೊಂಡು, ಪೇಪರ್‌ ಓದುತ್ತ ಕುಳಿತಿದ್ದೆ. ಬೆನ್ನಿಗೆ ಏನೋ ಕಚ್ಚಿದಂತಾಯ್ತು. ಸೊಳ್ಳೆಯಾ ಅಂತ ಅನುಮಾನವಾಯ್ತು. ನಾನು ಅಷ್ಟೆಲ್ಲ ಸುಲಭಕ್ಕೆ ಸೊಳ್ಳೆಯನ್ನು ಮನೆಯೊಳಕ್ಕೆ ಬಿಟ್ಟುಕೊಳ್ಳುವವಳಲ್ಲ. ಅಪ್ಪಿತಪ್ಪಿ ಒಂದು ಬಂದರೂ ಅದಕ್ಕೊಂದು ಗತಿ ಕಾಣಿಸದೆ ನಿದ್ದೆ ಮಾಡೋಲ್ಲ. ಹುಡುಕಿದೆ. ಕಾಣಲಿಲ್ಲ. ಇದ್ದಕ್ಕಿದ್ದ ಹಾಗೆ ಸೆಖೆಯಾಗೋಕೆ ಶುರು ಆಯ್ತು. ಬೆಳ್‌ ಬೆಳಗ್ಗೆ 7 ಗಂಟೆಗೇ ಇದೇನಿದು ಅಂದುಕೊಳ್ಳುತ್ತಲೇ ಫ್ಯಾನ್‌ ಆನ್‌ ಮಾಡಿದೆ. ಇದ್ದಕ್ಕಿದ್ದಂತೆ… ಅನಸ್ತೇಶಿಯ ತೆಗೆದುಕೊಂಡವಳಂತೆ ಮಂಪರು ಬಂದಂತಾಯ್ತು. ದೇಹದ ಶಕ್ತಿಯೆಲ್ಲ ಸೋರಿಹೋಗುತ್ತಿರುವಂತೆ ಭಾಸವಾಯ್ತು. ಅರೆ! ಹಿಂಗ್ಯಾಕಾಗ್ತಿದೆ? ಕೊನೆಗಾಲವಾ ಇದು? ಛೇ! ಯಾರೂ ಇಲ್ಲದಾಗಲೇ ಹೋಗಿಬಿಡ್ತೀನಾ… ಹೀಗೆಲ್ಲ ಅಂದುಕೊಂಡು, ಸಾವರಿಸಿಕೊಂಡು… ಮುಂಬಾಗಿಲು ತೆಗೆದಿಟ್ಟೆ. (ಹೇಗೂ ಹೋಗ್ತಿನಿ. ಸುಮ್ನೆ ರಾಯಿಗೆ ಬಾಗಿಲು ಒಡೆಯೋ ಖರ್ಚಾದ್ರೂ ಉಳೀಲಿ ಅಂತ!)

  ಕಷ್ಟಪಟ್ಟು, ಹಿಂಗಾಗ್ತಿದೆ ಕಣಪ್ಪ ಅಂತ ಯಜಮಾನ್ರಿಗೆ ಒಂದು ಫೋನ್‌ ಮಾಡಿದೆ. ಅವ್ರು ಗಾಬರಿಯಾದ್ರು. ಸುಡುಗಾಡು ಬೆಂಗಳೂರು ಟ್ರಾಫಿಕ್‌ ನೆನೆಸ್ಕೊಂಡು… ನಿಧಾನಕ್ಕೆ ಬನ್ನಿ ಅಂತ ಷರಾ ಸೇರಿಸಿದೆ. ತಿಂಡಿ ತಿನ್ನದೇ ಇದ್ದಿದ್ದಕ್ಕೆ ಈ ಪಾಟಿ ಸುಸ್ತೇನೋ ಅಂದುಕೊಂಡು ದೋಸೆ ಮಾಡಲು ಹೋದೆ. ಯಾಕೋ ಆಗಲಿಲ್ಲ. ಕಾವಲಿ ಮೇಲೆಯೇ ಬಿದ್ದುಬಿಟ್ರೆ… ಹಣೆ ಸುಟ್ಟು ಗಿಟ್ಟು ಹೋದ್ರೆ… ಅಕ್ಕನ ಮಗಳ ಮದ್ವೆ ಬೇರೆ ಹತ್ರದಲ್ಲಿದೆ ಅಂತ ಬುದ್ಧಿ ಎಚ್ಚರಿಸಿತು. (ಸತ್ತೇ ಹೋಗೋಳಿಗೆ ಅಕ್ಕನ್‌ ಮಗಳ ಮದ್ವೆಗೆ ಹೋಗೋ ಆಸೆ ಬೇರೆ!) ಇಷ್ಟಕ್ಕೆಲ್ಲ ಸಾಯ್ತಾರಾ ಅನ್ಬೇಡಿ… ಶ್ರೀದೇವಿ ಕೂಡಾ ಪಾಪ ಅನ್ಯಾಯವಾಗಿ ಯಃಕಶ್ಚಿತ್‌ ಬಾತ್‌ಟಬ್‌ನಲ್ಲಿ ಹೋಗಿಯೇ ಬಿಡಲಿಲ್ವಾ? ಪಾಪ ನಮ್ಮನೆಯವ್ರು… ಮುಂದೆ ಹೆಂಗೆ ಅಡುಗೆ ಮಾಡ್ಕೊತಾರೋ… ಎಷ್ಟೆಲ್ಲ ಹೇಳಬೇಕಿತ್ತು ಅವ್ರಿಗೆ… (ಸಿನಿಮಾದಲ್ಲೆಲ್ಲ ನೋಡಿ ಬೇಕಿದ್ರೆ… ಎಲ್ಲ ಹೇಳಿಯೇ ಸಾಯ್ತಾರೆ!) ಅವ್ರು ಬರೋದೊಳಗೆ ಹೋಗಿಬಿಟ್ರೆ… ಎಷ್ಟೆಲ್ಲಾ ಪೆಂಡಿಂಗ್‌ ಆಗಿºಡುತ್ತೆ ಅನಿಸ್ತು. ಒಂದು ಸೇಬು ಹಣ್ಣು ತಿಂದು. ಅಲರ್ಜಿ ಮಾತ್ರೆಯೊಂದನ್ನು ನುಂಗಿ ರಾಯರನ್ನೇ ಕಾಯುತ್ತ ಕುಳಿತೆ. 

  ಏನಾಶ್ಚರ್ಯ! ಅವರು ಬರೋ ಹೊತ್ತಿಗೆ ನಾರ್ಮಲ್‌ ಆಗಿದ್ದೆ! ಆದರೂ ಗೈನಕಾಲಜಿಸ್ಟ್ ಹತ್ತಿರ ಹೋದೆವು. ವಿಟಮಿನ್‌ ಟ್ಯಾಬ್ಲೆಟ್‌ ಬರೆದು ಕೊಟ್ಟು, ನಗುತ್ತಾ… “ಯಾವ ಸೊಳ್ಳೆಯೂ ಅಲ್ಲ. ಇದು ಮೆನೋಪಾಸ್‌ ಅಂದರೆ ಹೆಣ್ಣುಮಕ್ಳಿಗೆ ಸಹಜವಾಗಿ 42ರಿಂದ ಆಗುವ ಮುಟ್ಟು ನಿಲ್ಲುವ ಹಂತದ ಲಕ್ಷಣಗಳಿವು. ಕೆಲವರಿಗೆ ಏನೂ ತೊಂದರೆಯಾಗದೆ ನಿಲ್ಲಬಹುದು. ಬೆವರೋದು… ಎದೆಯಲ್ಲಿ, ಬೆನ್ನಲ್ಲಿ ಏನೋ ಕಚ್ಚಿದಂತೆ ಭಾಸ ಆಗೋದು… ತೂಕ ಹೆಚ್ಚು ಕಡಿಮೆ ಆಗೋದು… ಸೆಖೆಯಾಗೋದು, ಇವೆಲ್ಲ ಮಾಮೂಲಿ. Irregular
periods common ಆಗುತ್ತೆ. Over bleeding ಆಗುತ್ತೆ. ಹೇಗೆಂದರೆ… ನಲ್ಲಿಯಲ್ಲಿ ನೀರು ಬಿಟ್ಟಂತೆ ಆಗಿಬಿಡುತ್ತೆ ಕೆಲವೊಮ್ಮೆ…’ ಅಂದುಬಿಟ್ಟರು. ಆಕೆ ಹೇಳುತ್ತಿದ್ದರೆ ಗಾಬರಿಯಾದೆ. ಹೆದ್ರಿಸ್ತಿದ್ದೀರಲ್ಲ ಅಂದೆ. ಇಲ್ಲ ನಿಮ್ಮನ್ನ ತಯಾರು ಮಾಡ್ತಿದ್ದೇನೆ ಅಂದರು.

Advertisement

  ಇಂಥ ಸಮಯದಲ್ಲಿ ಮನೆಯವರ ಸಹಕಾರ ಬೇಕು. ಬೇಗನೆ ಸಿಟ್ಟು ಬರುತ್ತೆ. ಉದ್ರೇಕದಿಂದ ಕೂಗುವಂತಾಗುತ್ತೆ. ಎಲ್ಲದರಲ್ಲೂ ಆಸಕ್ತಿ ಕಡಿಮೆಯಾಗುತ್ತೆ. ಹೆಚ್ಚಿನ ಹೆಣ್ಮಕ್ಳು ಸೈಕಾಲಾಜಿಕಲಿ ಡಿಪ್ರಸ್‌ ಆಗ್ತಾರೆ. ತಮ್ಮ ಯೌವನ ಹೋಯ್ತು, ಗಂಡನಿಗೆ ತನ್ನ ಮೇಲೆ ಆಸಕ್ತಿ ಕಡಿಮೆ ಆಗಬಹುದು… ಅಂತೆಲ್ಲ ಯೋಚಿಸಿಬಿಡ್ತಾರೆ. ಅದೇ ಕಾರಣಕ್ಕೆ ಡಿಪ್ರಷನ್‌ಗೆ ತುತ್ತಾಗ್ತಾರೆ. ಆದರೆ, ಹಾಗೆ ಆಗೋದಿಲ್ಲ. ಅದೆಲ್ಲ ಕೊರತೆಯಾಗೋಲ್ಲ. ನಿಜ ಹೇಳಬೇಕಂದ್ರೆ, ಗಂಡಂದಿರಿಗೆ ಕಷ್ಟ ಜಾಸ್ತಿ. ತುಂಬಾ ತಾಳ್ಮೆ ಬೇಕು. ಅವರು ಏನ್ಮಾಡಬೇಕು ಅಂದ್ರೆ… ಯೋಗ, ಪ್ರಾಣಾಯಾಮ ಅಂದರು ನಗುತ್ತ. ಪರದೇಶದಲ್ಲಿರುವ ಗೆಳೆಯನೊಬ್ಬ ಮಾತಿನ ಮಧ್ಯೆ, ಮನೆಯಲ್ಲಿ ಯಾಕೋ ಎಲ್ಲ ಸರಿ ಇಲ್ಲ ಅಂದ. ಅವನ ಹೆಂಡತಿ ನನ್ನ ವಯಸ್ಸಿನವಳೇ. ಡಾಕ್ಟರ್‌ ಹೇಳಿದ್ದನ್ನು ಅವನಿಗೆ ಹೇಳಿದೆ. ತಕ್ಷಣವೇ ವೈದ್ಯರ ಸಲಹೆ ತೆಗೆದುಕೊಳ್ಳಲು ಹೇಳಿದೆ. 

  ಮರುದಿನವೇ ಫೋನ್‌ ಮಾಡಿದ… “ನಿಜ ಕಣೆ ನೀ ಹೇಳಿದ್ದು. ನಂಗಿವೆಲ್ಲ ಗೊತ್ತೇ ಇರ್ಲಿಲ್ಲ. ಆದ್ರೂ ಹಿಂಗ್ಯಾಕಾಗಬೇಕೋ ಅಲ್ವಾ? ಪಾಪ ಹೆಣ್‌ಮಕ್ಳು’ ಅಂದ. “ಹೂಂ , ತಾಯ್ತನದ ಪಟ್ಟ ಕೊಟ್ಟು, ಮಾತೃ ದೇವೋಭವ ಅಂತ ಹಿರಿಮೆ ತಂದಿಟ್ಟಿದೆ ನೋಡು ಪ್ರಕೃತಿ ಅದಕ್ಕೆ ಕಟ್ಟಬೇಕಾದ ಸುಂಕ ಕಣೋ ಇದು’ ಅಂದೆ. ನಿನ್ನ ಮಾತು ನಿಜ ಅಂದ. 

  ಮೆನೋಪಾಸ್‌ನಿಂದ ಆಗುವ ಬವಣೆಗಳನ್ನು ವಿವರಿಸಲು ಕಷ್ಟ. ಆದರೆ, ಇದು ಹೆಣ್ಣುಮಕ್ಕಳಿಗೆ ಅನಿವಾರ್ಯ. ಎಂತೆಂಥ ಸಂದರ್ಭಗಳಲ್ಲಿ, ಪ್ರದೇಶಗಳಲ್ಲಿ, ಪ್ರತಿಕೂಲ ಹವಾಮಾನದಲ್ಲಿ… ಇಂಥ ಬವಣೆಗಳನ್ನು ಸಹಿಸುತ್ತಲೇ ಕಚೇರಿಗಳಲ್ಲಿ, ಹೊಲಗ¨ªೆಗಳಲ್ಲಿ, ದುರ್ಗಮ ಕಾಡುಗಳಲ್ಲಿ, ಗಡಿ ಪ್ರದೇಶಗಳಲ್ಲಿ, ಆಟೋಟಗಳಲ್ಲಿ, ಸಾಹಸ, ನೃತ್ಯ ಪ್ರಕಾರಗಳಲ್ಲಿ… ಇತ್ಯಾದಿ ಎಲ್ಲೆಲ್ಲಿಯೂ ತನ್ನ ಛಾಪು ಮೂಡಿಸುತ್ತಾಳಲ್ಲ ಹೆಣ್ಣುಮಗಳು… ಅವಳ ಧೀ ಶಕ್ತಿಗೆ ನಮೋನಮಃ..!

  ಡಾಕ್ಟರ್‌ ಹೇಳಿದ್ದು ನನ್ನ ಅನುಭವಕ್ಕೂ ಬಂತು. ಹೈರಾಣಾದೆ. ಕಂಗಾಲಾದೆ. ಫೇಸ್‌ಬುಕ್‌ ಅಣ್ಣನೊಬ್ಬ “ತಂಗೀ, ನನ್ನ ಲೇಖನ ಓದಿಲ್ವಾ? ಕಮೆಂಟ್‌ ಬಂದಿಲ್ಲ ನಿಂದು’ ಅಂದ. ಅಣ್ಣ ತಾನೇ… ನಾಟ್‌ ವೆಲ್‌. ಮೆನೋಪಾಸ್‌ ಅಂದೆ. “ಅಯ್ಯೋ ತಂಗೀ, ರೆಸ್ಟ್ ಮಾಡು. ನಿನ್ನ ಅತ್ತಿಗೇದೂ ಇದೇ ಪಾಡು. ಮಾರಾಯ್ತಿ ಆಟೋದಲ್ಲಿ ಹೋಗ್ಬೇಕಾದ್ರೆ ಹಾರಿಬಿಡ್ಬೇಕು ಅಂತೆಲ್ಲ ಅನ್ಸುತ್ತಂತೆ ಅವ್ಳಿಗೆ’ ಅಂದ. “ನಂಗೆ ಹಾರಬೇಕು ಅನಿಸೋಲ್ಲ. ಪಕ್ಕದಲ್ಲಿರೋರನ್ನ ತಳ್ಳಿಬಿಡ್ಬೇಕು ಅನ್ಸುತ್ತೇನೋ. ಗೊತ್ತಿಲ್ಲ’ ಅಂತ ತಮಾಷೆ ಮಾಡಿದೆ. ಅದೇ ಫೇಸ್‌ಬುಕ್‌ ತಮ್ಮನೊಬ್ಬ, “ಅಕ್ಕಾ ಫೋನೇ ಇಲ್ಲ ನಿಂದು’ ಅಂತ ದೂರಿದ. ನನ್‌ ಕತೆ ನಂದಾಗಿದೆ. ಇವನೊಬ್ಬ ಅಂತ ಸಿಟ್ಟು ಬಂತಲ್ಲ… ಡಾಕ್ಟರ್‌ ಹೇಳಿದ್ದು ವದರಿದೆ. ಹೌದಾ ಅಕ್ಕಾ… ಛೇ, ಗೊತ್ತೇ ಇರ್ಲಿಲ್ಲ. ರೆಸ್ಟ್ ಮಾಡು. ಪಾಪ ಹೆಣ್‌ಮಕ್ಳಿಗೆ ಎಷ್ಟು ಕಷ್ಟ ಇರುತ್ತೆ. ನೀವು ಗ್ರೇಟ್‌ ಅಂದ. ಕೊನೆಗೆ ನೆನಪಾಯಿತು ಆಯ್ತು. ಇವನ್‌ ಹತ್ರ ಯಾಕೆ ಹೇಳ್ಳೋಕೆ ಹೋದೆ… ಛೇ… ಇನ್ನೂ ಮದ್ವೆ ಆಗದ ಹುಡುಗ… ಇಲ್ಲ, ಇಲ್ಲ ಹೇಳಿದ್ದು ಸರಿಯೇ… ಹೆೆಂಡತಿಯಾಗುವವಳ ಬಗ್ಗೆ ಕಾಳಜಿ ಇರಲಿ ಅಂದುಕೊಂಡೆ. 

  ಎಲ್ಲವನ್ನೂ ಮತ್ತೂಮ್ಮೆ ನೆನಪು ಮಾಡಿಕೊಂಡು ಹಗುರಾಗುತ್ತಿದ್ದೆ. ಆಗಲೇ ನನ್ನ ಆಫೀಸರ್‌ ಫೋನ್‌ ಮಾಡಿದ್ರು…”ಯಾಕೆ ಮೇಡಂ ಆಫೀಸ್‌ ಕಡೆ ಬರದೆ ಬಹಳ ದಿನ ಆಯ್ತಲ್ಲ’ ಅಂತ. ಹಿಂದೆಲ್ಲ ಮುಜುಗರದಿಂದ ಏನೇನೋ ನೆಪ ಹೇಳಿದ್ದೆ. ಈಗ ಮಾತ್ರ ಸ್ವಲ್ಪವೂ ಸಂಕೋಚ ಮಾಡಿಕೊಳ್ಳದೆ… “ಇಲ್ಲ ಸರ್‌… ಮೆನೋಪಾಸ್‌ ತೊಂದ್ರೆಯಿಂದಾಗಿ ಬಂದಿಲ್ಲ’ ಅಂದೆ. “ಓಹ್‌.. ಹೌದಾ ಮೇಡಂ? ಹಾಗಿದ್ರೆ ರೆಸ್ಟ್ ಮಾಡಿ. ಆರಾಮಾದ್ಮೇಲೆ ಬನ್ನಿ. ಈಗ ಒಂದು ವರ್ಷದಿಂದ ನಮ್ಮನೇವರೂ ಒದ್ದಾಡ್ತಿದ್ದಾರೆ ಪಾಪ. ನಿಮ್ಮ ಕಷ್ಟ ಅರ್ಥ ಆಗುತ್ತೆ. ಆದ್ರೂ ಮೇಡಂ… ಇಷ್ಟೆಲ್ಲ ತೊಂದ್ರೆಗಳಿದ್ರೂ ಎಷ್ಟೆಲ್ಲಾ ಕ್ಷೇತ್ರಗಳಲ್ಲಿ ದುಡೀತಾರೆ ಹೆಣ್‌ ಮಕ್ಳು… ಕೈಯೆತ್ತಿ ಮುಗೀಬೇಕು ಅನ್ಸುತ್ತೆ’ ಅಂದರು. ಅವರ ಕಾಳಜಿ… ಕಳಕಳಿ… ಗೌರವ ಕಂಡು ಆದ್ರವಾಯ್ತು ಮನಸ್ಸು…

  ದೈಹಿಕ ಕಾರಣಗಳಿಗಾಗಿ ಮಾತ್ರ ಮಹಿಳೆಯರಿಗೆ ಕೆಲವು ರಿಯಾಯಿತಿಗಳು ಬೇಕು. ಬುದ್ಧಿಶಕ್ತಿಯಲ್ಲಿ ಅಲ್ಲ. ನಾವು ಮುಚ್ಚಿಡದೆ  ಹೇಳಿದ್ರೆ ಅವ್ರಿಗೂ ಅರ್ಥ ಆಗುತ್ತೆ… ಗೌರವ ಕೂಡ ಹುಟ್ಟುತ್ತೆ. ಈ ಮುಜುಗರ, ಸಂಕೋಚದಿಂದಾಗಿಯೇ ಎಷ್ಟೋ ಹೆಣ್‌ಮಕ್ಳು ಸಂಕಷ್ಟಕ್ಕೆ ಸಿಕ್ಕಿಕೊಳ್ತಾರೆ ಗೊತ್ತಾ..? ಅಂತ ಮಗಳು ತನ್ನ ವಾದ ಮಂಡಿಸುತ್ತಿದ್ದಳು ಯಾವಾಗಲೂ. May be she is right

– ಸುಮನಾ ಮಂಜುನಾಥ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next