ಗಂಗಾವತಿ: ಕೋವಿಡ್ ರೋಗ ಗಂಗಾವತಿ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಸಾವುಗಳ ಸಂಖ್ಯೆ ಹೆಚ್ಚಳವಾಗುವ ಸಂದರ್ಭದಲ್ಲಿ ಗಂಗಾವತಿಯ ಪ್ರಮುಖ ಸ್ಥಳಗಳಲ್ಲಿ ಭಿಕ್ಷಾಟನೆ ಮಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಪ್ರತಿ ದಿನ ಬೆಳ್ಳಿಗ್ಗೆ ಸಿದ್ದಾಪುರ, ಸಿಂಧನೂರು, ಕನಕಗಿರಿ ಕಂಪ್ಲಿ ಪಟ್ಟಣದಿಂದ ವಾಹನಗಳಲ್ಲಿ ಚಿಕ್ಕಮಕ್ಕಳು ಸೇರಿ ಭಿಕ್ಷಾಟನೆ ಮಾಡಲು ಶಿಶುಗಳನ್ನು ಎತ್ತಿಕೊಂಡು ಸುಮಾರು ನೂರಕ್ಕೂ ಹೆಚ್ಚು ಮಹಿಳೆಯರು ಗಂಗಾವತಿ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಆಗಮಿಸಿ ಗುಂಪು ಗುಂಪಾಗಿ ನಗರದ ವಿವಿಧ ವಾಣಿಜ್ಯ ಪ್ರದೇಶದಲ್ಲಿ ಭಿಕ್ಷಾಟನೆ ಮಾಡಲು ತೆರಳುತ್ತಾರೆ.
ಹೊಟೇಲ್,ಪಾರ್ಕ್, ದೇಗುಲ, ನ್ಯಾಯಾಲಯ, ಆಸ್ಪತ್ರೆ ಸೇರಿ ಪ್ರಮುಖ ಸ್ಥಳಗಳಲ್ಲಿ ಆಗಮಿಸುವ ಜನರ ಹತ್ತಿರ ಭಿಕ್ಷೆ ಬೇಡುತ್ತಾರೆ. ಕೋವಿಡ್ ಭಯ ಈ ಭಿಕ್ಷೆ ಬೇಡುವ ಮಕ್ಕಳು ಮಹಿಳೆಯರಿಗೆ ಇಲ್ಲವಾಗಿದೆ.
ಭಿಕ್ಷಾಟನೆ ತಡೆಗಟ್ಟುವಲ್ಲಿ ಪೊಲೀಸ್, ಕಂದಾಯ, ಮಹಿಳಾ ಮಕ್ಕಳ ಕಲ್ಯಾಣಾಭಿವೃದ್ದಿ ಇಲಾಖೆ ಮತ್ತು ಜಿಲ್ಲಾ ಪುನರ್ವಸತಿ ಇಲಾಖೆ ನಿರ್ಲಕ್ಷ್ಯ ವಹಿಸಿವೆ. ನಿರ್ಗತಿಕರು ಭಿಕ್ಷಾಟನೆ ಮಾಡುವವರಿಗಾಗಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಸರಕಾರ ಆರಂಭಿಸಿದ್ದರೂ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಬಾಲಕರು ಇಂದು ಶವವಾಗಿ ಪತ್ತೆ
ಭಿಕ್ಷಾಟನೆ ಸಂಪೂರ್ಣವಾಗಿ ನಿಷೇಧ ಮಾಡಲು ಈಗಾಗಲೇ ಕಾನೂನುಗಳಿದ್ದರೂ ನಿಯಮ ಗಾಳಿಗೆ ತೂರಿ ನಿತ್ಯವೂ ಗಂಗಾವತಿಯಲ್ಲಿ ತಾಲ್ಲೂಕಿನ ಗ್ರಾಮೀಣ ಭಾಗದಿಂದ ಬೆಳ್ಳಗೆ ಆಗಮಿಸಿ ಇಡೀ ದಿನ ಭಿಕ್ಷಾಟನೆ ಮಾಡಿ ಸಂಜೆ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ನಾಗರೀಕ ಸಮಾಜದಲ್ಲಿ ಭಿಕ್ಷಾಟನೆಯನ್ನು ತಡೆಗಟ್ಟಲು ಸರ್ಕಾರ ಕ್ರಮ ವಹಿಸಬೇಕಿದೆ.