ದುಬಾೖ: ವಿಶ್ವ ಕ್ರೀಡಾರಂಗದಲ್ಲಿ ಮಹಿಳಾ ಕ್ರೀಡಾಪಟುಗಳ ಸ್ತ್ರೀತ್ವದ ಪರೀಕ್ಷೆ ಮಾಡುವುದು ಇತ್ತೀಚೆಗೆ ಮಾಮೂಲಿ. ಅದೀಗ ಕ್ರಿಕೆಟ್‌ಗೂ ಕಾಲಿಟ್ಟಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕೂಡ ಈ ವಿಚಾರದಲ್ಲಿ ಬಲವಾದ ನಿಲುವನ್ನು ತೆಗೆದುಕೊಂಡಿದೆ.
ಐಸಿಸಿಯೊಳಗೆ ನಡೆದ ಆಂತರಿಕ ವಿಚಾರ ವಿನಿಮಯ, ಪರಿಶೀಲನೆಯ ಅನಂತರ, ಯಾವುದೇ ವಿಧದಲ್ಲಿ ಪುರುಷ ಲಕ್ಷಣ ಹೊಂದಿರುವ ವ್ಯಕ್ತಿಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ತಿಳಿಸಿದೆ. ಒಂದು ವೇಳೆ ಸಂಬಂಧಪಟ್ಟ ವ್ಯಕ್ತಿಗಳು ಲಿಂಗ ಪರಿವರ್ತನೆ, ಲಿಂಗ ಮರುಜೋಡಣೆ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿರಲಿ, ಮಾಡಿಸಿಕೊಳ್ಳದೇ ಇರಲಿ, ಅವು ಯಾವುವನ್ನೂ ಪರಿಗಣಿಸದೇ ಅಂತಹ ಕ್ರಿಕೆಟಿಗರನ್ನು ಮಹಿಳಾ ಕ್ರಿಕೆಟ್‌ನಿಂದ ನಿಷೇಧಿಸಲಾಗುತ್ತದೆ ಎಂದು ಐಸಿಸಿ ಹೇಳಿದೆ.
ಮಹಿಳಾ ಕ್ರಿಕೆಟಿಗರ ಸಮಗ್ರತೆಯನ್ನು ಕಾಪಾಡಲು, ಆಟಗಾರರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ದೇಶಿ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಆಯಾ ಮಂಡಳಿಗಳಿಗೆ ಬಿಡಲಾಗಿದೆ. ಅವು ತಮ್ಮ ನೆಲದಲ್ಲಿರುವ ಕಾನೂನಿಗೆ ತಕ್ಕಂತೆ ತೀರ್ಮಾನ ಮಾಡಬಹುದು ಎಂದು ಐಸಿಸಿ ಹೇಳಿದೆ.
ಮುಂದಿನ ದಿನಗಳಲ್ಲಿ ಈ ಕಾನೂನು ಮಹಿಳಾ ಕ್ರಿಕೆಟ್‌ನಲ್ಲಿ ದೊಡ್ಡ ಸಂಚಲನ ಸೃಷ್ಟಿಸುವ ಸಾಧ್ಯತೆಯಿದೆ.