ಬೆಂಗಳೂರು: ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಹೊಸ ಅವತಾರದ ಏಳು ಮೆಮು (ಮೇನ್‌ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್) ರೈಲುಗಳನ್ನು ರೈಲ್ವೆ ಇಲಾಖೆಯು ಪರಿಚಯಿಸುತ್ತಿದ್ದು, ಈ ಪೈಕಿ ಒಂದು ರೈಲು ಬೆಂಗಳೂರಿಗೂ ಬಂದಿದೆ. ತಿಂಗಳಲ್ಲಿ ಇದು ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ.
ಇದರಲ್ಲಿ ಥೇಟ್ ಮೆಟ್ರೋ ಪ್ರಯಾಣದಲ್ಲಿ ಸಿಗುವ ಹೈಟೆಕ್ ಅನುಭವ ಪ್ರಯಾಣಿಕರಿಗೆ ಸಿಗಲಿದೆ. ಅಂದರೆ, ಈ ಹೊಸ ರೂಪದ ಮೆಮು ರೈಲು ಪ್ರಸ್ತುತ ಇರುವ ಸಾಮಾನ್ಯ “ಮೆಮು’ಗಿಂತ ವೇಗವಾಗಿ ಚಲಿಸುತ್ತದೆ. ಪ್ರಯಾಣಿಕರಿಗೆ ಮುಂದಿನ ನಿಲ್ದಾಣದ ಬಗ್ಗೆ ಧ್ವನಿ ವರ್ಧಕದ ಮೂಲಕ ಮಾಹಿತಿ ನೀಡುತ್ತದೆ. ಬಂದು-ಹೋಗುವವರ ಮೇಲೆ ಸಿಸಿಟಿವಿ ಕಣ್ಗಾವಲಿಡುತ್ತದೆ. ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ನೇರವಾಗಿ ಚಾಲಕರೊಂದಿಗೆ ಕೂಡ ಮಾತನಾಡಬಹುದು!
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಿರ್ಮಿಸಿರುವ ಈ ಮೆಮು ರೈಲು ಈಗಾಗಲೇ ನಗರದ ಬಂಗಾರಪೇಟೆ-ಬೆಂಗಳೂರು ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಆರಂಭಿಸಿದ್ದು, ವೇಗದ ಪರೀಕ್ಷೆಯಲ್ಲಿ ಪಾಸಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿಗಾಗಿ ಕಾಯುತ್ತಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ತಿಂಗಳಲ್ಲಿ ವಾಣಿಜ್ಯ ಸೇವೆ ಶುರುವಾಗಲಿದೆ. ಮೂಲಗಳ ಪ್ರಕಾರ ಬೆಂಗಳೂರು- ಬಂಗಾರಪೇಟೆ- ಮಾರಿಕುಪ್ಪಂ- ಕುಪ್ಪಂ ಮಾರ್ಗದಲ್ಲಿ ಇದನ್ನು ಪರಿಚಯಿಸುವ ಚಿಂತನೆ ಇದೆ ಎಂದು ಬೆಂಗಳೂರು ರೈಲ್ವೆ ವಿಭಾಗೀಯ ಮೂಲಗಳು
“ಉದಯವಾಣಿ’ಗೆ ತಿಳಿಸಿವೆ.
ವಿಶೇಷತೆ ಏನು?: ಪ್ರಸ್ತುತ ಇರುವ ಸಾಮಾನ್ಯ ಮೆಮು ರೈಲು ಡಿಸಿ ಟ್ರ್ಯಾಕ್ಷನ್ ಮೋಟಾರು ಹೊಂದಿದ್ದು, ಗಂಟೆಗೆ ಗರಿಷ್ಠ 105 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಇದರ ಉದ್ದ 21.3 ಮೀ. ಇದ್ದು, 2,402 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಆದರೆ, ಹೊಸ ವಿನ್ಯಾಸದಲ್ಲಿ ನಿರ್ಮಿಸಲಾದ ಮೆಮು ರೈಲು ಸ್ಟೇನ್‌ಲೆಸ್ ಸ್ಟೀಲ್ ಕವಚ ಒಳಗೊಂಡಿದೆ. ಎರಡು ಡ್ರೈವರ್ ಮೋಟರ್ ಕೋಚ್‌ಗಳು ಸೇರಿ ಎಂಟು ಬೋಗಿಗಳನ್ನು ಹೊಂದಿದ್ದು, ಎಸಿ ಟ್ರ್ಯಾಕ್ಷನ್ ಮೋಟಾರು ವ್ಯವಸ್ಥೆ ಒಳಗೊಂಡಿದೆ.
ಗಂಟೆಗೆ 110ರಿಂದ 130 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ಇದು 23.1 ಮೀ. ಉದ್ದ ಇರುವುದರಿಂದ 2,618 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಕಂಪ್ಯೂಟರ್ ಆಧಾರಿತ ಮೈಕ್ರೋ ಪ್ರೊಸೆಸರ್ ಕಂಟ್ರೋಲ್ಡ್ ಟೆಕ್ನಾಲಜಿ ನಿರ್ವಹಣಾ ವ್ಯವಸ್ಥೆ ಒಳಗೊಂಡಿದೆ (ಉದಾಹರಣೆಗೆ ನಮ್ಮ ಮೆಟ್ರೋ). ಆದರೆ, ಹವಾನಿಯಂತ್ರಿತ ವ್ಯವಸ್ಥೆ ಮಾತ್ರ ಇದರಲ್ಲಿ ಇರುವುದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮತ್ತೂಂದು ವಿಶೇಷವೆಂದರೆ ಪ್ರಯಾಣಿಕರ ಸಾಂದ್ರತೆ ಆಧಾರಿತ ಬ್ರೇಕ್ ವ್ಯವಸ್ಥೆ ಒಳಗೊಂಡಿದೆ. ಅಂದರೆ ರೈಲಿನಲ್ಲಿ ನೂರು ಜನರಿದ್ದರೆ, ಅದಕ್ಕೆ ಅನುಗುಣವಾದ ಒತ್ತಡದಲ್ಲಿ ಬ್ರೇಕ್ ಹಾಕುತ್ತದೆ. ಅದೇ ರೀತಿ, ಜನರಿಂದ ತುಂಬಿತುಳುಕುತ್ತಿದ್ದರೆ ಅದಕ್ಕೆ ತಕ್ಕ ಒತ್ತಡದಲ್ಲಿ ಬ್ರೇಕ್ ಬೀಳುತ್ತದೆ. ಅಂದಹಾಗೆ, ಬ್ರೇಕಿಂಗ್ ವ್ಯವಸ್ಥೆಯಿಂದ ಶೇ. 35ರಷ್ಟು ವಿದ್ಯುತ್ ಉಳಿತಾಯ ಆಗಲಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ತಿಳಿಸಿದರು.
ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಬಾಕಿ: ಹೊಸ ವಿನ್ಯಾಸದ ಮೊದಲ ಮೆಮು ರೈಲನ್ನು 2018ರ ಜೂನ್‌ನಲ್ಲಿ ಪರಿಚಯಿಸಲಾಗಿತ್ತು. ಇದುವರೆಗೆ ಈ ಮಾದರಿಯ ಒಟ್ಟಾರೆ ಏಳು ಮೆಮು ರೈಲುಗಳನ್ನು ನಿರ್ಮಿಸಲಾಗಿದ್ದು, ಈ ಪೈಕಿ ಒಂದು ರೈಲು ನೈರುತ್ಯ ರೈಲ್ವೆಗೆ ನೀಡಲಾಗಿದೆ. ಮೂರು ದಕ್ಷಿಣ ರೈಲ್ವೆಗೆ ಹಾಗೂ ಉಳಿದವುಗಳನ್ನು ಉತ್ತರ ಭಾಗದಲ್ಲಿ ನಿಯೋಜಿಸಲಾಗಿದೆ. ಬೆಂಗಳೂರು ವಿಭಾಗದಲ್ಲಿ ಇದರ ಪರೀಕ್ಷಾರ್ಥ ಸಂಚಾರ ಕೆಲವು ದಿನಗಳಿಂದ ನಡೆದಿದ್ದು, “ವೇಗ ಪ್ರಮಾಣಪತ್ರ’ ದೊರಕಿದೆ. ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಬಾಕಿ ಇದ್ದು, ಒಂದು ಅಥವಾ ಎರಡು ತಿಂಗಳಲ್ಲಿ ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಲಿದೆ ಎಂದು ಬೆಂಗಳೂರು ರೈಲ್ವೆ ವಿಭಾಗೀಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
* ವಿಜಯಕುಮಾರ್ ಚಂದರಗಿ