ತುಮಕೂರು: ನಗರದ ರೈಲು ನಿಲ್ದಾಣದಿಂದ ಪ್ರತಿನಿತ್ಯ ತುಮಕೂರು-ಬೆಂಗಳೂರು ನಡುವೆ ಸಂಚರಿಸುವ ಮೆಮು ವಿಶೇಷ ರೈಲು ಓಡಾಟಕ್ಕೆ ಸಂಸದ ಜಿ.ಎಸ್.ಬಸವ ರಾಜು ಹಸಿರು ತೋರಿಸುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆ ಈ ದಿನ ಈಡೇರಿದಂತಾಗಿದೆ. ತುಮಕೂರು ಮತ್ತು ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದ ನಡುವೆ ಸಂಚರಿಸುವ ಈ ವಿದ್ಯುತ್‌ಚಾಲಿತ ರೈಲು ಸೇವೆ(ಮೆಮು)ಯಿಂದ ಮುಖ್ಯವಾಗಿ ಕಾರ್ಮಿಕರು, ರೈತಾಪಿ ವರ್ಗದವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇಲಾಖೆಯೊಂದಿಗೆ ಸಹಕರಿಸಿ: ಬೆಂಗಳೂರು-ತುಮ ಕೂರು 8 ಭೋಗಿಗಳುಳ್ಳ ಡೆಮು ರೈಲನ್ನು ಪ್ರಯಾಣಿಕರ ಅನುಕೂಲಕ್ಕಾಗಿ 16 ಭೋಗಿಗಳುಳ್ಳ ಮೆಮು ರೈಲನ್ನಾಗಿ ಪರಿವರ್ತಿಸಲಾಗಿದೆ. 20 ವರ್ಷಗಳಿಂದ ಹೋರಾಟದ ಶ್ರಮದಿಂದ ಎರಡು ಪ್ರಮುಖ ನಗರಗಳ ನಡುವೆ ಸಂಚರಿಸುವ ಈ ಮೆಮು ರೈಲು ಸೇವೆ ಸಾಕಾರವಾಗಿದೆ ಎಂದರಲ್ಲದೆ, 2024ರೊಳಗಾಗಿ ರಾಷ್ಟ್ರದ ಎಲ್ಲಾ ರೈಲು ಮಾರ್ಗಗಳು ಡೀಸೆಲ್ ಮುಕ್ತ ವಿದ್ಯುತ್ ಚಾಲಿತ ರೈಲು ಮಾರ್ಗಗಳಾಗಬೇಕೆಂದು ಪ್ರಧಾನಿ ಮೋದಿ ಅವರ ದೊಡ್ಡ ಕನಸಾಗಿದೆ. ಇದನ್ನು ನನಸಾಗಿಸಲು ಪ್ರಯಾಣಿ ಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದರು.
ಶೀಘ್ರದಲ್ಲಿ ಕಾರ್ಯಗತ: ತುಮಕೂರು ರೈಲು ನಿಲ್ದಾಣದ ಮೂಲಕ ಪ್ರತಿದಿನ 30 ರೈಲುಗಳು ಸಂಚರಿ ಸುತ್ತಿದ್ದರೂ, ಪ್ರಯಾಣಿಕರಿಂದ ಹೆಚ್ಚುವರಿ ರೈಲು ಸಂಚಾರ ಸೌಲಭ್ಯಕ್ಕಾಗಿ ಮನವಿಗಳು ಬರುತ್ತಲೇ ಇರುವುದರಿಂದ ತುಮಕೂರು-ಬೆಂಗಳೂರು ನಡುವೆ ಪ್ರತಿ 1 ಗಂಟೆಗೊಮ್ಮೆ ಪ್ರತ್ಯೇಕ ರೈಲು ಸಂಚಾರಕ್ಕೆ ಕೇಂದ್ರದ ರೈಲ್ವೆ ಸಚಿವರಲ್ಲಿ ಮನವಿ ಮಾಡಿದಾಗ ಅವರು ಶಾಶ್ವತ ರೈಲು ಸಂಚಾರಕ್ಕೆ ಸಮ್ಮತಿ ಸೂಚಿಸಿದ್ದು, ಶೀಘ್ರದಲ್ಲಿ ಕಾರ್ಯಗತವಾಗಲಿದೆ ಎಂದು ತಿಳಿಸಿದರು.
ಒಂದೇ ಕಡೆ ಗೇಟ್ ವ್ಯವಸ್ಥೆ: ನಗರದ ರೈಲು ನಿಲ್ದಾಣದ ದಕ್ಷಿಣ ಭಾಗದಲ್ಲಿ ಗೇಟ್ ತೆರೆಯಬೇಕೆಂದು ಸಾರ್ವಜನಿಕರಿಂದ ಮನವಿಗಳು ಬರುತ್ತಿದೆ. ಒಂದಕ್ಕಿಂತ ಹೆಚ್ಚು ಗೇಟ್‌ಗಳನ್ನು ತೆರೆದಲ್ಲಿ ಪ್ರಯಾಣಿಕರು ಟಿಕೇಟ್ ರಹಿತ ಪ್ರಯಾಣ ಮಾಡುವ ಸಾಧ್ಯತೆ ಇರುವುದರಿಂದ ರೈಲ್ವೆ ನಿಯಮಾವಳಿ ಪ್ರಕಾರ ಪ್ರಯಾಣಿಕರು ಹೋಗಿ ಬರಲು ಒಂದೇ ಕಡೆ ಗೇಟ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಮೇಲ್ದರ್ಜೆಗೇರಿಸಲು ಚಿಂತನೆ: ನಗರದ ಹೊರವಲಯ ವಸಂತ ನರಸಾಪುರದ 13,000 ಎಕರೆ ಕೈಗಾರಿಕಾ ಪ್ರದೇಶದ ಉದ್ಯಮಿಗಳು ಹಾಗೂ ಕಾರ್ಮಿಕರ ಅನುಕೂಲಕ್ಕಾಗಿ ಮೆಟ್ರೋ ರೈಲು ಸಂಚಾರಕ್ಕೆ ಸರ್ಕಾರ ಮುಂದಾಗಿದೆ ಎಂದರಲ್ಲದೆ, ತುಮಕೂರು ನಗರ ರೈಲು ನಿಲ್ದಾಣವನ್ನು ಮೈಸೂರು, ಬೆಂಗಳೂರು ಮಾದರಿ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ನಗರ ರೈಲು ನಿಲ್ದಾಣದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕ ರ್ಯ ಗಳ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ತುಮಕೂರು – ದಾವಣಗೆರೆ, ತುಮಕೂರು – ರಾಯದುರ್ಗ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿದ್ದು, ತುಮಕೂರು- ಮಳವಳ್ಳಿ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ರೈಲ್ವೆ ಯೋಜನೆಗಳು ಪೂರ್ಣಗೊಂಡ ನಂತರ ತುಮಕೂರು ರೈಲು ನಿಲ್ದಾಣ ಜಂಕ್ಷನ್ ಆಗಿ ಪರಿವರ್ತನೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಬಾ.ಹ.ರಮಾಕುಮಾರಿ ಹಾಗೂ ಕಾರ್ಯದರ್ಶಿ ಕರ್ಣಂ ರಮೇಶ್, ರೈಲ್ವೆ ಅಧಿಕಾರಿಗಳು, ಮತ್ತಿತರರು ಹಾಜರಿದ್ದರು.