ಬಾಗಲಕೋಟೆ: ಇಲ್ಲಿನ ಉದಯೋನ್ಮುಖ ಕವಿ, ನಾಟಕಕಾರ ಎಚ್.ಎನ್. ಶೇಬಣ್ಣವರ ಅವರು ತಮ್ಮ ಹೆತ್ತವರಿಗಾಗಿ ದೇವಾಲಯ ನಿರ್ಮಿಸುವ ಮೂಲಕ ಗಮನ ಸೆಳೆದಿದ್ದು, ಹೆತ್ತವರ ಸ್ಮರಣೆಗಾಗಿ ನ. 22ರಂದು ಇಡೀ ದಿನ ಜಾನಪದ ಜಾತ್ರೆ ವಿಶೇಷ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದಾರೆ.
ತಾಲೂಕಿನ ಶಿಗಿಕೇರಿಯ ಶೇಬಣ್ಣನವರ ಹೊಲದಲ್ಲಿ ದಿ.ನಿಂಗನಗೌಡ ಪರಸಪ್ಪ ಶೇಬಣ್ಣವರ ಮತ್ತು ದಿ.ಮರಿಲಿಂಗವ್ವಶೇಬಣ್ಣವರ ಅವರ ಪುಣ್ಯಸ್ಮರಣೆ ನಡೆಯಲಿದೆ. ನಿಂಗನಗೌಡಅವರು 2001ರಲ್ಲಿ ನಿಧನರಾದರೆ, ಮರಿಲಿಂಗವ್ವ 2002ರಲ್ಲಿ ನಿಧನರಾಗಿದ್ದಾರೆ. ಅವರ ಪುತ್ರ ಖ್ಯಾತ ನಾಟಕಕಾರ ಎಚ್.ಎನ್. ಶೇಬಣ್ಣವರ, ತಮ್ಮ ಹೊಲದಲ್ಲಿಯೇ ಹೆತ್ತವರಿಗಾಗಿ ಸುಂದರ ಗುಡಿ ನಿರ್ಮಿಸಿದ್ದಾರೆ. ಅದಕ್ಕೊಂದು ದ್ವಾರ ಬಾಗಿಲುನಿರ್ಮಿಸಿ, ತಂದೆ-ತಾಯಿಯೇ ದೇವರು ಎಂದು ಸ್ಮರಣೆಯ ಫಲಕ ಹಾಕಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಇಡೀ ದಿನ ಜಾನಪದ ಜಾತ್ರೆ: ಈಗಾಗಲೇ ಹಲವಾರು ನಾಟಕ, ಕವಿತೆ ರಚಿಸಿ ಮನೆ ಮಾತಾಗಿರುವ ಕವಿ ಶೇಬಣ್ಣವರ, ತಮ್ಮ ಸಾಮಾಹಿಕ ನಾಟಕಕಗಳ ಮೂಲಕ ಗಮನಸೆಳೆದಿದ್ದಾರೆ. ಜತೆಗೆ ಗ್ರಾಮೀಣ ಕಲೆ, ಸಂಸ್ಕೃತಿ, ಪರಂಪರೆಕಲೆಗೆ ಹೆಚ್ಚು ಪ್ರೇರಣೆ, ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ.
ಇನ್ನು ರಾತ್ರಿ ಶಂಕರಲಿಂಗೇಶ್ವರ ಭಜನಾ ಸಂಘದ ಕಲಾವಿದರಾದ ಪ್ರಭಾವತಿ ಕಿರಣಗಿ ಹಾಗೂ ವಿಠ‍್ಠಲ ತೋಗುಣಸಿ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿವೆ. ಹೆತ್ತವರಿಗಾಗಿ ಹೊಸದಾಗಿ ನಿರ್ಮಿಸಿದ ಈ ದೇವಸ್ಥಾನದ ಉದ್ಘಾಟನೆ ನಿಮಿತ್ಯ ಗ್ರಾಮೀಣ ಕಲಾವಿದರಿಗೆ ಪ್ರೋತ್ಸಾಹ ನೀಡುವ ಜತೆಗೆ ಹೆತ್ತವರ ಸ್ಮರಣೆ ಕೂಡ ವಿಶಿಷ್ಟವಾಗಿ ನಡೆಯುತ್ತಿರುವುದು ವಿಶೇಷ.
-ವಿಶೇಷ ವರದಿ