ಗದಗ: ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಪಂ| ಪುಟ್ಟರಾಜ ಗವಾಯಿಗಳ 106ನೇ ಜಯಂತ್ಯುತ್ಸವ ಆಚರಿಸಲಾಯಿತು. ಪಂ| ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ ಅಂಗವಾಗಿ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಾನಗಲ್ ಕುಮಾರೇಶ್ವರ ಗದ್ದುಗೆ, ಪಂ| ಪಂಚಾಕ್ಷರಿ ಗವಾಯಿಗಳು ಹಾಗೂ ಪಂ| ಪುಟ್ಟರಾಜ ಗವಾಯಿಗಳ ಕತೃì ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜೆ ನೆರವೇರಿಸಲಾಯಿತು.
ಗುರು ಪುಟ್ಟರಾಜರ ಜಯಂತಿ ಅಂಗವಾಗಿ ಮೂವರು ಶ್ರೀಗಳ ಗದ್ದುಗೆಗಳನ್ನು ತರಹೇವಾರಿ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೇ ನೂರಾರು ಭಕ್ತರು ಪುಣ್ಯಾಶ್ರಮಕ್ಕೆ ಆಗಮಿಸಿ ಗುರುಗಳ ಗದ್ದುಗೆಗಳ ದರ್ಶನಾ ಶೀರ್ವಾದ ಪಡೆದರು.
ನಾನಾ ಭಾಗದಿಂದ ಆಗಮಿಸಿದ್ದ ಕಲಾವಿದರಿಂದ ಆಶ್ರಮದಲ್ಲಿ ಸಂಗೀತ ಸುಧೆ ಹರಿಸಿ, ಭಕ್ತಿ ಅರ್ಪಿಸಿದರು. ಇದೇ ವೇಳೆ ನಗರದ ವಿವಿಧೆಡೆ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳ ಮುಂದೆ ಶ್ರೀಗುರು ಪುಟ್ಟರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಹಣ್ಣು, ಶರಬತ್ ವಿತರಿಸಿ ಧನ್ಯತೆ ಮೆರೆದರು.
ಬೃಹತ್ ಪೂರ್ಣ ಕುಂಭ ಮೆರವಣಿಗೆ: ಪಂ| ಪುಟ್ಟರಾಜ ಗವಾಯಿಗಳ ಜಯಂತ್ಯುತ್ಸವ ಅಂಗವಾಗಿ ಮಂಗಳವಾರ ಸಂಜೆ ನಗರದಲ್ಲಿ ಒಂದು ಸಾವಿರ ಕುಂಭದೊಂದಿಗೆ ಪುಷ್ಪಗಳಿಂದ ಅಲಂಕೃತ ವಾಹನದಲ್ಲಿ ಪಂ|ಪುಟ್ಟರಾಜಕವಿ ಗವಾಯಿಗಳ ಭಾವಚಿತ್ರದ ಭವ್ಯಮೆರವಣಿಗೆ ನಡೆಯಿತು. ವೀರೇಶ್ವರ ಪುಣ್ಯಾಶ್ರಮದಿಂದ ಆರಂಭಗೊಂಡ ಬೃಹತ್ ಕುಂಭ ಮೇಳ ಮೆರವಣಿಗೆ ಭೂಮರೆಡ್ಡಿ ಸರ್ಕಲ್, ಕೆ.ಎಚ್. ಪಾಟೀಲ್ ಸರ್ಕಲ್, ಹತ್ತಿಕಾಳ ಕೂಟ, ಟಾಂಗಾಕೂಟ್, ಗಾಂಧಿ ಸರ್ಕಲ್, ಕೆ.ಸಿ. ರಾಣಿ ರಸ್ತೆ ಮಾರ್ಗವಾಗಿ ಪುನಃ ಪುಣ್ಯಾಶ್ರಮ ತಲುಪಿತು.
ಮೆರವಣಿಗೆಯುದ್ದಕ್ಕೂ ವೀರಗಾಸೆ, ವೀರಭದ್ರ ಕುಣಿತ, ಡೊಣ್ಣು ಕುಣಿತ, ರಗ್ಗಲಿಗಿ, ವಿವಿಧ ಭಜನಾ ತಂಡಗಳು ಭಕ್ತಿ ಸುಧೆ ಹರಿಸಿ, ಮೆರವಣಿಗೆಗೆ ಮೆರುಗು ನೀಡಿವು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು ಹಾಗೂ ಚಿಣ್ಣರು, ಕುಣಿದು ಕುಪ್ಪಳಿಸಿದರು.