ಜೀವನ ಅನ್ನೋದು ಅತ್ಯಂತ ಅಮೂಲ್ಯವಾದುದು. ಹುಟ್ಟಿನಿಂದ ಸಾಯುವವರೆಗೂ ಅನುಭವಿಸುವ ಒಂದೊಂದು ಕ್ಷಣಗಳೂ ಆಗಾಗ ನೆನಪಿಗೆ ಬರುವಂಥವುಗಳು. ಅವು ನಮ್ಮ ನೆರಳಿನಂತೆ ಹಿಂಬಾಲಿಸುತ್ತಿರುತ್ತವೆ. ಎಷ್ಟೋ ನೆನಪುಗಳು ಸುಖ ತರಬಹುದು; ಇನ್ನು ಕೆಲವು ದುಃಖ ತರಬಲ್ಲವುಗಳು. ಆದರೆ ಎಲ್ಲವೂ ನೆನಪುಗಳೇ ತಾನೇ…!
ಸೂರ್ಯ ತನ್ನ ಕೆಲಸಕ್ಕೆ ವಿರಾಮ ಹೇಳುತ್ತಿದ್ದಾನೆ. ಮೋಡಗಳು ಕೆಂಪಾಗಿ ಕಂಗೊಳಿಸುತ್ತಿವೆ. ತಂಪಾದ ಗಾಳಿ ಸೋಕಿ ಮೈ ಜುಮ್ ಎನ್ನುತ್ತಿದೆ. ಹಕ್ಕಿಗಳ ಕಲರವ ಕಿವಿಗೊಡುತ್ತಿದೆ. ಇನ್ನೇನು ಮಳೆ ಜೋರಾಗಿ ಬರುತ್ತದೆ ಎನ್ನುವಷ್ಟರಲ್ಲಿ ನೆನಪುಗಳ ಬುತ್ತಿ ಒಂದೊಂದೇ ಬಿಚ್ಚಲಾರಂಭಿಸಿದವು.
ಅಂದು ಚಿಕ್ಕವನಿದ್ದಾಗ ಮಳೆ ಬರುವಾಗ ಮಳೆಯಲ್ಲಿ ನೆನೆದು ಅಮ್ಮನ ಹತ್ತಿರ ಪೆಟ್ಟು ತಿಂದದ್ದು, ಕೊಳಚೆ ನೀರಲ್ಲಿ ಆಡಿ ಮೈಯೆಲ್ಲಾ ಗಲೀಜು ಮಾಡಿಕೊಂಡಿದ್ದು, ಹಳ್ಳ-ಕೊಳ್ಳಗಳಲ್ಲಿ ಈಜಾಡಿದ್ದು, ಬೆಟ್ಟ-ಗುಡ್ಡಗಳ ಏರಿ ಹಣ್ಣುಗಳ ತಿಂದದ್ದು, ದಟ್ಟಡವಿಯ ಸುತ್ತಿ ಮನೆಗೆ ಬಂದು ಅಪ್ಪನ ಹತ್ತಿರ ಕೋಲಿನಿಂದ ಬಾಸುಂಡೆ ಬರುವ ಹಾಗೆ ಪೆಟ್ಟು ತಿಂದದ್ದು, ಶಾಲೆಗೆ ಚಕ್ಕರ್ ಹೊಡೆದು ಸಂತೆಯೆಲ್ಲ ಸುತ್ತಿದ್ದು, ಬಾಳೆಹಣ್ಣನ್ನು ಕದ್ದು ತಿಂದು ಜತೆಗೆ ಮಾಲಕನ ಹತ್ತಿರ ಪೆಟ್ಟು ತಿಂದದ್ದು, ಹೀಗೆ ಹತ್ತು ಹಲವು ನೆನಪುಗಳನ್ನು ಒಮ್ಮೆ ನೆನಪಿಸಿಕೊಂಡು ಒಬ್ಬನೆ ಕಿಸಕ್ಕನೆ ನಕ್ಕುಬಿಟ್ಟೆ.
ಆ ಬಾಲ್ಯದ ನೆನಪುಗಳು ಶಾಶ್ವತವಾಗಿ ಮನಸ್ಸಿನಲ್ಲಿ ಅಚ್ಚಳಿದಿವೆ. ಅಂತಹ ಸುಂದರ ಬಾಲ್ಯವನ್ನು ನಾವು ದಾಟಬಾರದಿತ್ತು ಎಂದು ಈಗ ಎನಿಸುವುದು ಸಹಜ. ಮಳೆ ಬಂದಾಗ ನಾವು ಮಳೆಯಲ್ಲಿ ಕಳೆದ ನೂರಾರು ನೆನಪುಗಳು ಬರುತ್ತವೆ. ಆಗ ಹರೆಯದ ವಯಸ್ಸು ಮೀಸೆ ಚಿಗುರುವ, ತುಂಟತನ ಮಾಡುವ 18ರ ವಯಸ್ಸು ಅವಳ ಹಿಂದೆ ಬಿದ್ದು ಪ್ರೀತಿ ಪ್ರೀತಿ ಎಂದು ಸುತ್ತಾಡಿದರೂ ಆಕೆ ಸಿಗಲಿಲ್ಲ ಎಂಬ ನೆನಪು. ಮಳೆಯಲ್ಲಿ ಅಂದು ಇಬ್ಬರೂ ಒಂದೇ ಕೊಡೆಯ ಕೆಳಗೆ ನಡುಗುತ್ತಾ ನಡೆದ ನೆನಪು. ನೆನಪುಗಳು ಒಮ್ಮೆ ನೆನಪಾಗಿ ಬಿಟ್ಟರೆ ಮನಸ್ಸಿನ ನೋವು, ಚಿಂತೆಗಳನ್ನೆಲ್ಲ ದೂರ ಮಾಡಿಬಿಡುತ್ತವೆ.
ಸದಾಶಿವ ಬಿ.ಎನ್.
ಎಂಜಿಎಂ ಕಾಲೇಜು ಉಡುಪಿ