Advertisement
ಅಪ್ಪ ಅಮ್ಮನ ಜತೆ ಜಗಳವಾಡಿ ಹತ್ತು ರೂಪಾಯಿಯ ನೋಟನ್ನು ತೆಗೆದುಕೊಂಡು ಅದರಲ್ಲಿ ದೊರೆತ ಚಾಕಲೇಟ್ ಅನ್ನು ತನ್ನ ಜತೆ ಇದ್ದ ಗೆಳೆಯರೊಡನೆ ಕೂಡಿ ತಿಂದು ಆನಂದ ಪಟ್ಟ ಆ ಕ್ಷಣಗಳು ಎಂದಿಗೂ ಮಾಸದು. ಮೊದಲ ಬಾರಿಗೆ ಅಪ್ಪ ಅಮ್ಮನನ್ನು ಬಿಟ್ಟು ಶಾಲೆಗೆ ಹೋಗಬೇಕೆಂದರೆ ಮನದಲ್ಲಿ ಅದೇನೋ ಕಸಿವಿಸಿ. ನೀಲಿ ಬಿಳಿ ಸಮವಸ್ತ್ರವನ್ನು ಧರಿಸಿ, ಬ್ಯಾಗಿಗೆ ಪುಸ್ತಕ, ಪೆನ್ಸಿಲ್ ಮುಂತಾದವುಗಳನ್ನು ತುಂಬಿಸಿಕೊಂಡು ಶಾಲೆಗೆ ಹೊರಟಾಗ ಅಮ್ಮನ ಕಣ್ಣೀರ ವಿದಾಯ ಆದರೂ ಮುಖದಲ್ಲೇನೋ ಒಂದು ಮಂದಹಾಸ.
Related Articles
Advertisement
ಮಳೆಗಾಲದಂದು ರೈನ್ ಕೋಟನ್ನು ಧರಿಸಿ ಶಾಲೆಗೆ ಹೋಗಿ ಸಾಯಂಕಾಲ ಮನೆಗೆ ಬರುವ ರಭಸದಲ್ಲಿ ಬಿದ್ದು ರೈನ್ ಕೋಟು ಹರಿದಾಗ ಅಪ್ಪನ ಕೈಯಿಂದ ಸಿಗುತ್ತಿದ್ದ ಕೋಲಿನ ಏಟು, ಕೆಸರಿನಲ್ಲಿ ಆಟವಾಡಿ ಬಟ್ಟೆಯನ್ನು ಕೊಳೆಮಾಡಿಕೊಂಡು ಬಂದಾಗ ಅಮ್ಮ ಬೈಯುತ್ತಿದ್ದ ಸಂದರ್ಭಗಳು, ಪರೀಕ್ಷೆಯ ದಿನದಂದು ಓದಲು ತಡವರಿಸಿದಾಗ ಅಕ್ಕ ತಲೆಗೆ ಎರಡೇಟು ಹೊಡೆದ ದಿನಗಳನ್ನು ಇಂದಿಗೂ ಮೆಲುಕು ಹಾಕುತ್ತೇವೆ. ಏಪ್ರಿಲ್ ಹತ್ತು ಎಂದಾಗ ಅದು ಪಾಸ್ ಫೈಲ್ ದಿನ ಅಂದು ಖುಷಿಯಿಂದ ಅಂಗಡಿಗೆ ಹೋಗಿ ಐವತ್ತು ಪೈಸೆಯ ಚಾಕಲೇಟ್ ಅನ್ನು ತೆಗೆದುಕೊಂಡು ಶಾಲೆಗೆ ಹೋಗಿ ಪಾಸ್ ಎಂದು ಗೊತ್ತಾದಾಗ ಬರುವ ದಾರಿಯಲ್ಲಿ ಸಿಕ್ಕವರಿಗೆಲ್ಲ ನಾನು ಪಾಸ್ ಎಂದು ಹೇಳಿ ಕೈಯಲ್ಲಿದ್ದ ಚಾಕಲೇಟ್ ಅನ್ನು ಕೊಡುತ್ತಿದ್ದ ಆ ದಿನಗಳು ಇಂದು ನೆನಪಾಗಿ ಉಳಿದಿದೆ.ರಜೆ ಎಂದ ಕೂಡಲೇ ಅಜ್ಜಿ ಮನೆಗೆ ಓಡಿ ಹೋಗುತ್ತಿದ್ದೆವು. ಅಲ್ಲಿ ಒಂದಿಷ್ಟು ದಿನ ಕಳೆದು ಮರಳಿ ಮನೆಗೆ ಹಿಂತಿರುವಾಗ ಅಜ್ಜಿ ನಮ್ಮ ಬಳಿ ಬಂದು ಯಾರಿಗೂ ಕಾಣದಂತೆ ನೂರು ರೂಪಾಯಿಯ ನೋಟನ್ನು ಕೈಯಲ್ಲಿ ಇಟ್ಟು ಯಾರಿಗೂ ಹೇಳ ಬೇಡ ಎಂದು ಹೇಳುತ್ತಿದ್ದಳು.
ಜೋಕಾಲಿ, ಲಗೋರಿ, ಕುಂಟೆ ಬಿಲ್ಲೆ, ಮರಕೋತಿ, ಕಳ್ಳ ಪೊಲೀಸ್ ಮುಂತಾದ ಆಟಗಳನ್ನು ಆಡಿ ಉಳಿದ ರಜಾ ದಿನವನ್ನು ಕಳೆಯುತ್ತಿದ್ದೆವು. ಮೊಬೈಲ್ ಬಂದ ಮೇಲೆ ಈಗಿನ ಮಕ್ಕಳು ಹೊರಗೆ ಹೋಗಿ ಆಟವಾಡುವುದನ್ನು ಮರೆತು ಬಿಟ್ಟಿಾರೆ.ಓದಲೆಂದು ದೂರದ ಊರಿಗೆ ಹೋದ ಬಾಲ್ಯದ ಗೆಳೆಯರು ದಾರಿ ಮಧ್ಯೆ ಸಿಕ್ಕಾಗ ನಮ್ಮೊಡನೆ ಇದ್ದ ಸ್ನೇಹಿತರೊಡನೆ ಅವಳು ಅವನು ನನ್ನ ಚಡ್ಡಿ ದೋಸ್ತ್ ಲಂಗ ದೋಸ್ತ್ ಎಂದು ಪರಿಚಯಿಸಿಕೊಳ್ಳುತ್ತೇವೆ ಅಲ್ಲವೇ. ಪರಿಚಯ ಹಳೆಯದಾದರೂ ಅವರು ಸಿಕ್ಕಿ ನಮ್ಮೊಡನೆ ಮಾತನಾಡಿದಾಗ ಮನಸ್ಸಿಗೆ ಅದೇನೋ ತೃಪ್ತಿ.ಬಾಲ್ಯದ ದಿನಗಳು ಎಷ್ಟು ವಿಶೇಷವೋ ಬಾಲ್ಯದ ಗೆಳೆಯರು ಕೂಡ ಅಷ್ಟೇ ವಿಶೇಷ . ನೆನಪು ಎಂಬುವುದು ಎಂದಿಗೂ ಶಾಶ್ವತ.
- ಲಾವಣ್ಯ
ವಿವೇಕಾನಂದ ಮಹಾವಿದ್ಯಾಲಯ,ಪುತ್ತೂರು