Advertisement

ಮೂಕಜ್ಜಿಯ ನೆನಪುಗಳು

10:14 AM Dec 16, 2019 | mahesh |

ಶಿವರಾಮ ಕಾರಂತರ ಜ್ಞಾನಪೀಠ ಪುರಸ್ಕೃತ ಕೃತಿ ಮೂಕಜ್ಜಿಯ ಕನಸುಗಳು ಕಾದಂಬರಿ ಪ್ರಕಟವಾಗಿ ಅರ್ಧಶತಮಾನವಾಯಿತು. “ಮೂಕಜ್ಜಿ’ಯನ್ನು ಶಿವರಾಮ ಕಾರಂತರ ಮಗಳು ಇಲ್ಲಿ ಸ್ಮರಿಸಿಕೊಂಡಿದ್ದಾರೆ.

Advertisement

ಮೂಕಜ್ಜಿಯ ಕನಸುಗಳು ಚಲನಚಿತ್ರವನ್ನು ಮೊನ್ನೆ ನೋಡಿದೆ. ತುಂಬ ಇಷ್ಟಪಟ್ಟೆ. ಪಿ. ಶೇಷಾದ್ರಿ ಅವರ ನಿರ್ದೇಶನ, ಬಿ. ಜಯಶ್ರೀ ಅವರ ನಟನೆ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದಿತ್ತು. ನನ್ನ ತಂದೆಯವರನ್ನೂ ಅವರ ಕೃತಿಯನ್ನೂ ಮತ್ತೆ ನೆನಪಿಸುವಂತೆ ಮಾಡಿದ್ದಕ್ಕಾಗಿ ತುಂಬ ಸಂತೋಷವಾಗಿದೆ.

ಸಿನೆಮಾ ನೋಡಿದ ಬಳಿಕ ಮೂಕಜ್ಜಿಯ ಕನಸುಗಳುಯನ್ನು ತಂದೆಯವರು ಬರೆಯುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ.

ನಾವಾಗ ಪುತ್ತೂರಿನ ಬಾಲವನದಲ್ಲಿದ್ದೆವು. ಮನೆಯ ಮೇಲೊಂದು ಮಾಳಿಗೆ ಇತ್ತು. ತಂದೆಯವರು ಮಾಳಿಗೆಯನ್ನು ಹತ್ತಿ ಕುಳಿತರೆಂದರೆ ಏನನ್ನೋ ಬರೆಯುವ ತಪಸ್ಸಿಗೆ ತೊಡಗಿದ್ದಾರೆ ಎಂದರ್ಥ. ಮತ್ತೆ ಯಾರೂ ಅವರ ಬಳಿ ಸುಳಿಯುತ್ತಿರಲಿಲ್ಲ. ಬರವಣಿಗೆಗೆ ದೀರ್ಘ‌ ಸಮಯವನ್ನೇನೂ ತೆಗೆದುಕೊಳ್ಳುತ್ತಿರಲಿಲ್ಲ. ಕಥೆಯಾಗಲಿ, ಕಾದಂಬರಿಯಾಗಲಿ ಹತ್ತಿಪ್ಪತ್ತು ದಿನಗಳೊಳಗೆ ಬರೆದು ಮುಗಿಸಿ ಬಿಡುತ್ತಿದ್ದರು. ಬರವಣಿಗೆಯ ನಡುವೆ ಯಾರಾದರೂ ಅವರನ್ನು ಮಾತನಾಡಿಸಲು ಭಯಪಡುತ್ತಿದ್ದರು. ಅವರೂ ಮಾತನಾಡಿಸುತ್ತಿರಲಿಲ್ಲ. ಮೊದಮೊದಲು ಅವರೇ ಬರೆಯುತ್ತಿದ್ದರೆ, ಆಮೇಲೆ “ಡಿಕ್ಟೇಟ್‌’ ಮಾಡುತ್ತಿದ್ದರು. ಬರೆಯುವುದಕ್ಕೆಂದೇ ಜನ ಇಟ್ಟುಕೊಂಡಿದ್ದರು.

1968ರ ಸುಮಾರಿಗೆ ಮೂಕಜ್ಜಿಯ ಕನಸುಗಳು ಪ್ರಕಟವಾಗಿತ್ತು. ಆಗೊಮ್ಮೆ ಅದನ್ನು ಓದಿ ನೋಡಿದ್ದೆ. ಸಣ್ಣವಳಾದ ನನಗೆ ಹೆಚ್ಚೇನೂ ಅರ್ಥವಾಗಿರಲಿಲ್ಲ. ಮತ್ತೂಮ್ಮೆ ಓದಿದ್ದು ಅದಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದ ಬಳಿಕ, 1977ರಲ್ಲಿ. ಮೂಕಜ್ಜಿ ನನ್ನನ್ನು ಗಾಢವಾಗಿ ಆವರಿಸಿಬಿಟ್ಟಿದ್ದಳು.

Advertisement

ಬಾಲ್ಯದಲ್ಲಿ ತಂದೆಯವರನ್ನು ಆವರಿಸಿದ ವ್ಯಕ್ತಿತ್ವ ಯಾವುದು ಎಂದು ನಾನು ಯೋಚಿಸುತ್ತೇನೆ. ಪಕ್ಕನೆ ನೆನಪಾಗುವುದು ಪದ್ದಕ್ಕ. ಪದ್ದಕ್ಕ ಶಿವರಾಮ ಕಾರಂತರ ದೊಡ್ಡಮ್ಮನ ಮಗಳು. ವಿಧವೆಯಾಗಿದ್ದ ಆಕೆಯ ಮನೆ ನಮ್ಮ ಮನೆಯಿಂದ ಒಂದಷ್ಟು ದೂರದಲ್ಲಿತ್ತು. ತಂದೆಯವರು ಆಕೆಯನ್ನು ಮಾತನಾಡಿಸಲು ಹೋಗುತ್ತಿದ್ದರು. ಆಕೆಯ ಬಗ್ಗೆ ತುಂಬ ಸಹಾನುಭೂತಿ, ಕಾಳಜಿ. ನಮ್ಮನ್ನೂ ಅಲ್ಲಿಗೆ ಕರೆದೊಯ್ದ ನೆನಪು. ನನ್ನ ಮದುವೆಗೂ ಆಮಂತ್ರಣ ಕೊಡಲು ಹೋಗಿದ್ದೆವು. ಅಂಥ ಅನೇಕ ಶೋಷಿತ ಮಹಿಳೆಯರನ್ನು ಅವರು ಹತ್ತಿರದಿಂದ ಕಂಡಿದ್ದರು. ಅನೇಕ ಮಂದಿ ವಿಧವೆಯವರಿಗೆ ವಿವಾಹವನ್ನೂ ನಿಂತು ಮಾಡಿಸಿದ್ದರು. ಅಂಥ ಅನುಭವಗಳ ಪ್ರಭಾವ ಮೂಕಜ್ಜಿ ಕಾದಂಬರಿಯ ಹಿನ್ನೆಲೆಯಲ್ಲಿರಬೇಕು.

ವಿಧವಾ ವಿವಾಹ, ದೇವದಾಸಿ ವಿವಾಹಕ್ಕೆ ಸಂಬಂಧಿಸಿ ಗಾಂಧೀಜಿಯವರ ಹೇಳಿಕೆಯೂ ಈ ಕಾದಂಬರಿಗೆ ಪ್ರೇರಣೆಯಾಗಿರಬಹುದು. ವಿಧವೆಯರನ್ನು ಮರುವಿವಾಹ ಮಾಡಿಸಬೇಕು, ದೇವದಾಸಿಯರಿಗೆ ಹಸೆಮಣೆ ಏರುವ ಅವಕಾಶ ನೀಡಬೇಕು ಎಂಬ ಸಿದ್ಧಾಂತಕ್ಕೆ ಬದ್ಧರಾಗಿದ್ದ ತಂದೆಯವರು ಈ ಬಗ್ಗೆ ಗಾಂಧೀಜಿಯವರೊಂದಿಗೆ ಚರ್ಚಿಸಲು ಗುಜರಾತ್‌ನ ಸಬರ್ಮತಿ ಆಶ್ರಮಕ್ಕೆ ಹೋಗಿದ್ದರು. ಅಲ್ಲಿ ಗಾಂಧೀಜಿಯವರ ಅಭಿಪ್ರಾಯ ಬೇರೆಯೇ ಆಗಿತ್ತು. ವಿಧವೆಯರು, ದೇವದಾಸಿಯರು ಶೇಷ ಜೀವಿತವನ್ನು ಬ್ರಹ್ಮಚರ್ಯದಲ್ಲಿ ಕಳೆಯಬೇಕು ಎಂಬಂತೆ ಹೇಳಿದ್ದರು. ಈ ಮಾತು ತಂದೆಯವರಿಗೆ ಸರಿ ಬಂದಿರಲಿಲ್ಲ. “ಎಗೈನ್‌ಸ್ಟ್‌ ದ ನೇಚರ್‌’ ಆದ ನತದೃಷ್ಟ ಬದುಕನ್ನು ಯಾಕೆ ಅವರು ನಡೆಸಬೇಕು? ತಂದೆಯವರಿಗೆ, ಮಹಾತ್ಮ ಗಾಂಧೀಜಿಯವರ ಬಗ್ಗೆ ಅಪಾರ ಗೌರವ ಇದ್ದರೂ ಅವರ ಅಭಿಪ್ರಾಯದ ಕುರಿತು ಸಹಮತವಿರಲಿಲ್ಲ. ಇದರ ಪ್ರತಿಕ್ರಿಯೆ ಎಂಬಂತೆ ಅವರು ಮೂಕಜ್ಜಿ ಕಾದಂಬರಿಯ ರಚನೆಗೆ ತೊಡಗಿರಬೇಕು.

ಬಹುಶಃ ಮೂರು ವಾರಗಳ ಅವಧಿಯಲ್ಲಿ ಮೂಕಜ್ಜಿಯ ಕನಸುಗಳು ಕಾದಂಬರಿಯನ್ನು ಬರೆದು ಮುಗಿಸಿದ್ದರೆಂದು ತೋರುತ್ತದೆ. ಅವರ ಇತರ ಪುಸ್ತಕಗಳಂತೆ ಇದಕ್ಕೂ ಅವರೇ ವರ್ಣಚಿತ್ರ ಬರೆದು ಮುಖಪುಟವನ್ನೂ ರಚಿಸಿದ್ದರು.

ಮೂಕಜ್ಜಿ “ಅತೀಂದ್ರಿಯ ಶಕ್ತಿ’ಯಿಂದ ಮಾತನಾಡುವುದು ಈ ಕಾದಂಬರಿಯ ವಿಶೇಷತೆ.
ಆಗ ಪುತ್ತೂರಿಗೆ ತಂದೆಯವರು ವಿ.ಸೀ., ಜಿ.ಪಿ. ರಾಜರತ್ನಂ ಅವರಂಥ ಹಿರಿಯರನ್ನು ಕರೆಸಿ ಉಪನ್ಯಾಸ ಏರ್ಪಡಿಸುತ್ತಿದ್ದರು. ಹಾಗೊಮ್ಮೆ ಬಂದ ಜಿ.ಪಿ. ರಾಜರತ್ನಂ, “ಅತೀಂದ್ರಿಯ ಶಕ್ತಿಯ ಕುರಿತ ವಿಚಾರ ಈ ಕಾದಂಬರಿಗೆ ಒಂದು ಬಗೆಯ ಒಗ್ಗರಣೆಯ ಹಾಗಿದೆ’ ಎಂದು ಅಭಿಮಾನದಿಂದ ಅವರದೇ ಶೈಲಿಯಲ್ಲಿ ಹೇಳಿದ್ದು ನನಗಿನ್ನೂ ನೆನಪಿದೆ.

ತಂದೆಯವರು ನಮ್ಮ ಬಾಲ್ಯದಲ್ಲಿ ಕತೆ ಹೇಳುತ್ತ ಆಫ್ರಿಕಾದಲ್ಲಿ ದ ಪ್ಲೇಸ್‌ ಕಾಲ್ಡ್‌ ಕಮಡೆಬು ಎಂಬ ಕೃತಿಯ ಕುರಿತು ಹೇಳಿದ್ದರು. ಅದರಲ್ಲಿ ಅತೀಂದ್ರಿಯ ಶಕ್ತಿ ಉಳ್ಳ, ಭೂತ-ಭವಿಷ್ಯತ್ತನ್ನು ಕಾಣಬಲ್ಲ ವಿಚಾರಗಳಿದ್ದವು. ಅಂಥ ಕಥನಗಳೂ ಅವರ ಕಾದಂಬರಿಗೆ ಸ್ಫೂರ್ತಿಯಾಗಿತ್ತೆಂದು ನನ್ನ ಊಹೆ.

ತಂದೆಯವರು ಮೂಲತಃ ವಿಚಾರವಾದಿಗಳು. ಅವರ ಒಬ್ಬ ಸಹೋದರ ವೈಜ್ಞಾನಿಕ ಚಿಂತಕರಾಗಿದ್ದರು. ಮತ್ತೂಬ್ಬ ಸಹೋದರ ಸಂಪ್ರದಾಯವಾದಿಯಾಗಿದ್ದರು. ಅವರು ಹೇಗೆ ಸಂಪ್ರದಾಯವನ್ನು ಅನುಸರಿಸುತ್ತಿದ್ದರೆಂದರೆ ನಮ್ಮ ಮನೆಯಲ್ಲಿ ಊಟವನ್ನೂ ಮಾಡುತ್ತಿರಲಿಲ್ಲ. “ಅವನ ಸಿದ್ಧಾಂತ ಅವನಿಗಿರಲಿ’ ಎಂದು ತಂದೆಯವರು ಅಣ್ಣನನ್ನು ಗೌರವದಿಂದ‌ಲೇ ಕಾಣುತ್ತಿದ್ದರು. ತಂದೆಯವರದು ಒಂದು ಬಗೆಯ ಅನುಸಂಧಾನದ ಮಾರ್ಗ. ಸಂಪ್ರದಾಯವನ್ನು ಒಪ್ಪದಿದ್ದರೂ ಗೌರವಿಸುತ್ತಿದ್ದರು. ಹಾಗಾಗಿಯೇ “ಅತೀಂದ್ರಿಯ’ವಾದ ಕಲ್ಪನೆಯನ್ನು ಮೂಕಜ್ಜಿಯ ಕನಸುಗಳು ಕಾದಂಬರಿಯಲ್ಲಿ ಅಳವಡಿಸಲು ಸಾಧ್ಯವಾಗಿರಬೇಕು. ಇದೊಂದು ಬಗೆಯಲ್ಲಿ ವಿಸ್ಮಯವೇ.

ಕಾದಂಬರಿಯೇನು, ತಂದೆಯವರೇ ನನಗೆ ವಿಸ್ಮಯ!

ಕ್ಷಮಾ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next