Advertisement

ಕಹಿ ಘಟನೆಗಳ ಒಡಲಲ್ಲಿದೆ ಭವಿಷ್ಯದ ಪಾಠ

04:32 AM Dec 28, 2018 | |

2019ರ ಹೊಸ್ತಿಲಲ್ಲಿ ಇರುವಾಗ ಕಹಿ ಘಟನೆಗಳನ್ನೇಕೆ ನೆನಪಿಸಿಕೊಳ್ಳಬೇಕು ಎಂಬ ಪ್ರಶ್ನೆ ಏಳುತ್ತದೆ. ಆದರೆ ಪ್ರತಿಯೊಂದು ಕಹಿ ಘಟನೆಯೂ ಹಲವು ಪಾಠಗಳನ್ನು ನಮಗೆ ಕಲಿಸುತ್ತದೆ. ಈ ಪಾಠಗಳು ಹೊಸ ವರ್ಷದ ಪಯಣದಲ್ಲಿ ನಮಗೆ-ದೇಶಕ್ಕೆ ಮಾರ್ಗದರ್ಶಿಯಾಗಲಿ…

Advertisement

ಪದ್ಮಾವತಿ ಗದ್ದಲದಲ್ಲಿ ವರ್ಷಾರಂಭ
ಬಹುಶಃ ಭಾರತೀಯ ಸಿನೆಮಾ ಇತಿಹಾಸದಲ್ಲೇ ಯಾವ ಸಿನೆಮಾವೂ ಪದ್ಮಾವತ್‌ ಸಿನಿಮಾದಷ್ಟು ವಿವಾದ- ವಿರೋಧ ಎದುರಿಸಿರಲಿಕ್ಕಿಲ್ಲ. ರಾಣಿ ಪದ್ಮಾವತಿಯನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆಂದು ಆರೋಪಿಸಿ ರಜಪೂತ ಕರ್ಣಿ ಸೇನೆ ನೇತೃತ್ವದಲ್ಲಿ ಅನೇಕ ಜಾತಿ ಗುಂಪುಗಳು ಸಿನೆಮಾದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದವು. ಸಿನೆಮಾ ಸೆಟ್‌ನಲ್ಲಿ ನಿರ್ದೇಶಕ ಭನ್ಸಾಲಿಯ ಮೇಲೂ ದಾಳಿ ಮಾಡಿದರು ರಜಪೂತ್‌ ಕರ್ಣಿ ಸೇನೆ ಕಾರ್ಯಕರ್ತರು. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸೆಟ್‌ಗೆ ನುಗ್ಗಿದ ಕೆಲವರು ಚಿತ್ರತಂಡದ ಮೇಲೆ ದಾಳಿ ಮಾಡಿದ್ದಷ್ಟೇ ಅಲ್ಲದೆ, ಸೆಟ್‌ಗೆ ಬೆಂಕಿ ಹಚ್ಚಿ ಹಾನಿ ಮಾಡಿದರು. ಅನೇಕ ಜನರು ಮತ್ತು ಪ್ರಾಣಿಗಳು ಗಾಯಗೊಂಡವು. 


ಸಿನೆಮಾ ಬಿಡು­ಗಡೆ ಆಗುವವರೆಗೆ ಈ ರಜಪೂತ ಗುಂಪುಗಳು ಅಬ್ಬರಿಸಿದರೆ, ಬಿಡುಗಡೆ ನಂತರ ಕೆಲವು ಮುಸ್ಲಿಂ ಗುಂಪುಗಳು “ಖೀಲ್ಜಿಯನ್ನು’ ತಪ್ಪಾಗಿ ತೋರಿಸಲಾಗಿದೆ ಎಂದು ದೂರುತ್ತಾ ಬ್ಯಾನ್‌ಗೆ ಆಗ್ರಹಿಸಿದವು. ಬಿಜೆಪಿ ಮತ್ತು ಕಾಂಗ್ರೆಸ್‌ ಈ ವಿವಾದದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸಿದವು. ಅವು ಕರ್ಣಿ ಸೇನಾದ ಗದ್ದಲಕ್ಕೆ ಕುರುಡಾದವು. ಪಕ್ಷಗಳು ವೋಟ್‌ ಬ್ಯಾಂಕ್‌ ರಾಜಕಾರಣದ ಹಿಂದೆ ಬಿದ್ದರೆ ಇಂಥ ಗುಂಪುಗಳು ಯಾವ ಮಟ್ಟದ ದರ್ಪ ತೋರಬಹುದು ಎನ್ನುವುದಕ್ಕೆ ಪದ್ಮಾವತ್‌ ಪ್ರಕರಣ ಸಾಕ್ಷಿಯಾಯಿತು.  ಕೊನೆಗೆ ಸಿನೆಮಾದ ಹೆಸರನ್ನೇ ಪದ್ಮಾವತಿ­ಯಿಂದ ಪದ್ಮಾವತ್‌ಗೆ ಬದಲಿಸಬೇಕಾಯಿತು.

ಗಂಗೆಗಾಗಿ ಪ್ರಾಣಬಿಟ್ಟ ಸ್ವಾಮಿ ಸಾನಂದ್‌
ಜಲ ಸಂರಕ್ಷಣೆಗಾಗಿ ಜೀವನ ಸವೆಸಿದ ಸ್ವಾಮಿ ಸಾನಂದ್‌ (ಪ್ರೊ.ಜಿ.ಡಿ.ಅಗರ್ವಾಲ್‌), ಅದೇ ಜಲಕ್ಕಾಗಿ ಜೀವ ಕಳೆದುಕೊಳ್ಳಬೇಕಾಯಿತು. ಸ್ವತ್ಛ ಗಂಗಾ ನದಿಗಾಗಿ ಹೊಸ ಕಾನೂನು ತರಬೇಕೆಂದು ಆಗ್ರಹಿಸಿ ಆಮರಣಾಂತ ಉಪವಾಸ ಆರಂಭಿಸಿದ್ದ ಅವರು 114 ದಿನಗಳ ನಂತರ ಸಾವನ್ನಪ್ಪಿದರು. ಸಾನಂದ್‌ ಅವರು ಉಪವಾಸದ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ ಎನ್ನುವ ಟೀಕೆಗಳು ಕೇಳಿಬಂದವು.  ಸಂತ ಸ್ವಾಮಿ ಸಾನಂದರು ಹೃಷಿಕೇಶದಲ್ಲಿ ದೇಹ ತ್ಯಜಿಸಿದರು. 

ಮಗುಚಿದ ಬಸ್‌ ಮರುಟಿದ ಬದುಕು


ನ.24ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಕನಮರಡಿ ಗ್ರಾಮದಲ್ಲಿ ವಿ.ಸಿ.ನಾಲೆಗೆ ಬಸ್‌ ಉರುಳಿ 30 ಮಂದಿ ಅಸುನೀಗಿದ ಹೃದಯ ವಿದ್ರಾವಕ ಘಟನೆ ನಡೆಯಿತು. ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳೇ ಆಗಿದ್ದರು. ಖಾಸಗಿ ಬಸ್‌ ಕಂಪನಿಗಳ ಮೇಲೆ ಸೂಕ್ತ ನಿಗಾ ವ್ಯವಸ್ಥೆ ಇಲ್ಲದಿರುವುದೂ ಈ ಘಟನೆಗೆ ಒಂದು ಕಾರಣ. ಬಸ್‌ಗಳು ಎಷ್ಟು ಹಳೆಯವು, ಚಾಲಕರು ಸಮಸ್ಥಿತಿಯಲ್ಲಿದ್ದಾರೆಯೇ,  ಪ್ರಯಾಣಕ್ಕೂ ಮುನ್ನ ಬ್ರೇಕ್‌, ಸೇರಿದಂತೆ ಬಸ್‌ನ ಸ್ಥಿತಿಯನ್ನು ಪರೀಕ್ಷಿಸಿದ್ದಾರೆಯೇ ಎನ್ನುವುದು ಮುಖ್ಯವಾಗುತ್ತದೆ. ಖಾಸಗಿ ಬಸ್‌ಗಳನ್ನು ಹೆಚ್ಚು ಉತ್ತರದಾಯಿಯನ್ನಾಗಿಸಲು ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಲೇಬೇಕು ಎನ್ನುವ ಅಗತ್ಯವನ್ನು ಈ ದುರಂತ ಸಾರುತ್ತಿದೆ. 

ಕೊಡಗನ್ನು ಕಾಡಿದ ಪ್ರವಾಹ
2018ರ ಜೂನ್‌ನಿಂದ ಆಗಸ್ಟ್‌ವರೆಗೆ  ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮತ್ತು ಪ್ರವಾಹ, ಭೂಕುಸಿತ ಸಂಭವಿಸಿ 20 ಮಂದಿ ಅಸುನೀಗಿದರು. ಇದೇ ವೇಳೆಯಲ್ಲೇ ನೆರೆಯ ರಾಜ್ಯ ಕೇರಳವೂ ಭೀಕರ ಪ್ರವಾಹಕ್ಕೆ ತುತ್ತಾಗಿ ಅಲ್ಲಿ 483 ಮಂದಿ ಅಸುನೀಗಿದರು. ಆಗಸ್ಟ್‌ ತಿಂಗಳಿಡೀ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ 87 ವರ್ಷದ ದಾಖಲೆಯನ್ನು ಅಳಿಸಿ ಹಾಕಿತು. ಆದರೆ, ದುರಂತದ ಸಮಯದಲ್ಲಿ ಕೊಡಗಿಗೆ ಬೆನ್ನುಲುಬಾಗಿ ಇಡೀ ಕರ್ನಾಟಕವೇ ಎದ್ದು ನಿಂತಿತು. ಕೊಡಗಿಗೆ ಅಪಾರ ಪ್ರಮಾಣದಲ್ಲಿ ನೆರವು ದೊರಕುವಂತಾಗಿ, ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಎನ್ನುವ ಒಗ್ಗಟ್ಟಿನ ಧ್ವನಿ ಜಲದ ಅಬ್ಬರದ ಸದ್ದಡಗಿಸಿತು. ಈ ಭಾಗದಲ್ಲಿ ಪ್ರಕೃತಿಯ ಮೇಲೆ ನಡೆಯುತ್ತಿರುವ ದಾಳಿ ನಿಲ್ಲಲೇಬೇಕಿದೆ ಎನ್ನುವ ಪರೋಕ್ಷ ಪಾಠವನ್ನೂ ಈ ದುರಂತ ತನ್ನೊಡಲಲ್ಲಿ ಹೊತ್ತಿದೆ. 

Advertisement

ಗೋ ಗದ್ದಲದಲ್ಲಿ ಪೊಲೀಸ್‌ ಹತ್ಯೆ
ಗೋವುಗಳ ಸಾಮೂಹಿಕ ಹತ್ಯೆಯ ಸುದ್ದಿಯಿಂದ ಉದ್ರಿಕ್ತಗೊಂಡ ಗುಂಪೊಂದು ಉತ್ತರಪ್ರದೇಶದ ಬುಲಂದ ಹಶಹರ್‌ನಲ್ಲಿ ನಡೆಸಿದ ಪ್ರತಿಭಟನೆ ಹಿಂಸಾಚಾರ ರೂಪ ಪಡೆದುಬಿಟ್ಟಿತು. ಉದ್ರಿಕ್ತ ಗುಂಪಿನ ದಾಳಿಗೆ ಹಿರಿಯ ಪೊಲೀಸ್‌ ಅಧಿಕಾರಿ ಸುಭೋದ್‌ ಕುಮಾರ್‌ ಸಿಂಗ್‌ ಹತ್ಯೆ­ಯಾದರು. ಗೋಲಿಬಾರ್‌ಗೆ ಯುವಕನೊಬ್ಬ ಬಲಿಯಾದ. ಗೋ ರಕ್ಷಣೆಯ ಹೆಸರಿನ ಹಿಂಸೆ ಹತ್ತಿಕ್ಕುವ ಜತೆ­ಯಲ್ಲೇ, ಅಕ್ರಮ ಗೋ ಸಾಗಣೆಯನ್ನೂ ತಡೆಯಬೇಕಾದ ಅವಶ್ಯಕತೆ ಇದೆ.

ಹಬ್ಬದ ಸಂಭ್ರಮ ಅಂತ್ಯಗೊಳಿಸಿದ ರೈಲು
ಪಂಜಾಬ್‌ನ ಅಮೃತಸರದಲ್ಲಿ ರಾವಣನ ಪ್ರತಿಕೃತಿ ದಹಿಸಿ, ದಸರಾ ಸಂಭ್ರಮಿಸುತ್ತಿದ್ದ ಜನರ ಮೇಲೆ ಯಮರಾಯನಂತೆ ಎರಗಿದ ರೈಲು ನೋಡ­ನೋಡು­ತ್ತಿದ್ದಂತೆಯೇ ದಸರಾ ಸಂಭ್ರಮವನ್ನು ಕೊನೆಗೊಳಿಸಿ ಸೂತಕದ ವಾತಾವರಣವನ್ನು ನಿರ್ಮಿಸಿಬಿಟ್ಟಿತು. 61 ಜನರನ್ನು ಬಲಿ ತೆಗೆದುಕೊಂಡು, 50 ಜನರು ಗಂಭೀರವಾಗಿ ಗಾಯಗೊಂಡ ಈ ಅವಘಡ‌ದಲ್ಲಿ ಕಾರ್ಯಕ್ರಮ ಸಂಯೋಜಕರು, ಪೊಲೀಸರು, ರೈಲ್ವೆ ಇಲಾಖೆಯಷ್ಟೇ ತಪ್ಪು  ಹಳಿಯ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದವರದ್ದು ಆಗಿತ್ತು. ಎಷ್ಟೇ ಸುರಕ್ಷತಾ ಕ್ರಮ ಕೈಗೊಂಡರೂ ಇಂಥ ಅವಘಡಗಳು ಸಂಭವಿಸುವ ಸಾಧ್ಯತೆ ಇದ್ದೇ ಇರುತ್ತದೆ. ಜನರು ತಮ್ಮ ಪ್ರಾಣಕ್ಕೆ ಎರವಾಗಬಹುದಾದಂಥ ಇಂಥ ನಿಷ್ಕಾಳಜಿಯುತ ರಿಸ್ಕ್ ತೆಗೆದುಕೊಳ್ಳಬಾರದು.  

ಮತ ಪ್ರಚಾರಕನ ಹತ್ಯೆ
ಅಂಡಮಾನ್‌- ನಿಕೋಬಾರ್‌ನ ಸೆಂಟಿನೆಲ್‌ ದ್ವೀಪದ ಸಂರಕ್ಷಿತ ಸೆಂಟಿನಲೀಸ್‌ ಆದಿವಾಸಿಗಳು ಅಮೆರಿಕದ ಕ್ರೈಸ್ತ ಮತ ಪ್ರಚಾರಕನೊಬ್ಬನನ್ನು ಬಾಣಗಳಿಂದ ಕೊಂದ ಘಟನೆ  ಜಗತ್ತಿನಾದ್ಯಂತ ಸದ್ದು ಮಾಡಿತು. ಜಾನ್‌ ಆಲೆನ್‌ ಚೌ ಎಂಬ ಪ್ರವಾಸಿಗ-ಮತ ಪ್ರಚಾರಕನನ್ನು ಏಳು ಮೀನುಗಾರರು ಉತ್ತರ ಸೆಂಟಿನೆಲ್‌ ದ್ವೀಪಕ್ಕೆ ಕರೆದೊಯ್ದಿದ್ದರು. ಬಾಹ್ಯ ಜಗತ್ತಿನ ಸಂಪರ್ಕ­ದಿಂದ ದೂರವೇ ಉಳಿದು ನಿಗೂಢವಾಗಿ ಜೀವನ ದೂಡು­ತ್ತಿರುವ ಸೆಂಟಿನಲೀಸ್‌ ಜನರು ಮೊದಲಿ­ನಿಂದಲೂ ನಾಗರಿಕ ಸಮಾಜ­­ದೊಂದಿಗೆ ತಮಗೆ ಸಂಪರ್ಕವೇ ಬೇಡ ಎಂದು ತಮ್ಮ ವರ್ತನೆಯಿಂದ ಸ್ಪಷ್ಟಪಡಿಸಿದ್ದಾರೆ. ಆದರೂ ಆತ ಅವರ ಬಳಿ ಹೋಗಿ ಹೆಣವಾದ. ಸೆಂಟಿನಲೀಸ್‌ ದ್ವೀಪದ 5 ಕಿ.ಮೀ. ಒಳಕ್ಕೆ ಯಾರೂ ಹೋಗಬಾರದೆಂಬ ನಿರ್ಬಂಧ ಇದ್ದರೂ ಜಾನ್‌ ಪ್ರವೇಶಿಸಿದ್ದೇ ತಪ್ಪು. ಇನ್ನು ಮುಂದಾದರೂ ಆದಿವಾಸಿಗಳ ತಂಟೆಗೆ ಹೋಗಬಾರದು ಎಂಬ ಪಾಠ ಇಲ್ಲಿದೆ.

ಪ್ರಸಾದಕ್ಕೆ ವಿಷ ಬೆರೆಸಿದ ನೀಚರು


ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ನಡೆದ ಭೀಕರ ಘಟನೆಯಿದು. ಚಾಮರಾಜನಗರ ಜಿಲ್ಲೆಯ ಸುಳವಾಡಿಯಲ್ಲಿರುವ ಕಿಚಗುತ್ತಿ ಮಾರಮ್ಮ ದೇಗುಲದಲ್ಲಿ ದುರುಳರು ಪ್ರಸಾದಕ್ಕೆ ಕೀಟನಾಶಕ ಬೆರೆಸಿ 17 ಮಂದಿಯ ಸಾವಿಗೆ ಕಾರಣರಾದರು. 100ಕ್ಕೂ ಅಧಿಕ ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿಕಾರದ ಅತ್ಯಾಸೆ ಮನುಷ್ಯನನ್ನು ಯಾವ ಹೀನ ಮಟ್ಟಕ್ಕೆ ತಳ್ಳುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಪವಿತ್ರ ಕ್ಷೇತ್ರವೊಂದರಲ್ಲಿರುವವರಿಗೆ ಪಾಪ-ಪುಣ್ಯದ ಕಿಂಚಿತ್‌ ಪರಿಜ್ಞಾನವಿಲ್ಲದಿರುವುದು,  ತೃಣಮಾತ್ರ ಮಾನವೀಯತೆಯೂ ಇಲ್ಲದಿರುವುದನ್ನು ನೋಡಿದಾಗ ನಿಜಕ್ಕೂ ಗಾಬರಿಯಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next