Advertisement

ಪೋಸ್ಟರ್‌ಗಳಿಂದ ಸ್ಮಾರಕಗಳು ವಿರೂಪ

10:24 AM Jun 04, 2018 | Team Udayavani |

ಬೀದರ: ಸ್ಮಾರಕಗಳ ಖಣಿ ಎಂದೇ ಖ್ಯಾತಿ ಪಡೆದಿರುವ ಬೀದರನ ಐತಿಹಾಸಿಕ ಕಟ್ಟಡಗಳು ಅಂದ ಕಳೆದುಕೊಳ್ಳುತ್ತಿವೆ. ಫ್ಲೆಕ್ಸ್‌, ಪೋಸ್ಟರ್‌, ಬ್ಯಾನರ್‌ ಗಳಿಂದ ಮಹತ್ವದ ಸ್ಮಾರಕಗಳು ವಿರೂಪಗೊಂಡಿದ್ದು, ಇವುಗಳ ಸಂರಕ್ಷಣೆ ಮಾಡಬೇಕಾದ ಪುರಾತತ್ವ ಇಲಾಖೆ ಮತ್ತು ಜಿಲ್ಲಾಡಳಿತ ಮಾತ್ರ ಮೌನ ವಹಿಸಿದೆ.

Advertisement

ನಗರದ ಕೋಟೆ ಕೊತ್ತಲಗಳು ಸೇರಿದಂತೆ ಐತಿಹಾಸಿಕ ಕಮಾನುಗಳ ಇಕ್ಕೆಲಗಳಲ್ಲಿ ಫ್ಲೆಕ್ಸ್‌, ಪೋಸ್ಟರ್‌ಗಳನ್ನು ಮನಸೋ ಇಚ್ಛೆ ಹಾಕಲಾಗಿದೆ. ಪ್ರಚಾರದ ವಿವಿಧ ಫೆಕ್ಸ್‌ಗಳು, ಜಾಹೀರಾತು, ಧಾರ್ಮಿಕ ಕಾರ್ಯಕ್ರಮ, ಹುಟ್ಟುಹಬ್ಬ, ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕಟಣೆಗಳನ್ನು ಹಾಕಲಾಗುತ್ತಿದ್ದು, ಈ ಮೂಲಕ ಅಪರೂಪದ ಸ್ಮಾರಕಗಳ ಅಂದಗೆಡಿಸಲಾಗಿದೆ. ಐತಿಹಾಸಿಕ ತಜ್ಞರು, ಪರಿಸರವಾದಿಗಳು ಕೆಂಗಣ್ಣು ಬೀರುವಂತೆ ಮಾಡಿದೆ.

ಕ್ಯಾರೇ ಎನ್ನದ ಜನ: ಬೀದರ ಪಾರಂಪರಿಕ ಪಟ್ಟಣ ಎಂದು ಘೋಷಿಸಲಾಗಿದ್ದು, ಸ್ಮಾರಕಗಳನ್ನು ವಿರೂಪಗೊಳಿಸುವುದು ಶಿಕ್ಷಾರ್ಹ ಅಪರಾಧ. ಸ್ಮಾರಕಗಳಿಗೆ ಧಕ್ಕೆ ಆದರೆ ಕ್ರಮ ಜರುಗಿಸಲಾಗುವುದು ಎಂಬ ಪುರಾತತ್ವ ಇಲಾಖೆಯ ಎಚ್ಚರಿಕೆ ಫಲಕಗಳು ಅಲ್ಲಲ್ಲಿ ಹಾಕಲಾಗಿದೆ. ಆದರೆ, ಸಾರ್ವಜನಿಕರು ಮಾತ್ರ ನಿರ್ಭಯವಾಗಿ ಪೋಸ್ಟರ್‌ಗಳನ್ನು ಅಂಟಿಸಿ ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಕೋಟೆ, ಫತ್ತೆದರ್ವಾಜಾ, ಮಂಗಲಪೇಟ್‌ ದರ್ವಾಜಾ, ಶಾಹಗಂಜ್‌ ಕಮಾನ್‌ ಸೇರಿದಂತೆ ಅನೇಕ ಕಡೆಗಳಲ್ಲಿ ಖಾಸಗಿ ಕಾರ್ಯಕ್ರಮಗಳ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಇವುಗಳನ್ನು ಕಟ್ಟಲು ಕಟ್ಟಡಗಳ ಮೇಲೆ ಕಬ್ಬಿಣದ ಮೊಳೆಗಳನ್ನು ಹೊಡೆದು ವಿರೂಪಗೊಳಿಸಲಾಗುತ್ತಿದೆ. ಆಕರ್ಷಿಸುವ ಜಾಹೀರಾತುಗಳ ಮೇಲೆ ವಾಹನ ಸವಾರರ ಕಣ್ಣು ಬಿದ್ದು ಅಪಘಾತಗಳು ಸಂಭವಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಸ್ಮಾರಕಗಳ ಅತಿಕ್ರಮಣ, ಸುತ್ತಲೂ ಗಬ್ಬು: ನಗರದ ಹಿರಿಮೆ, ಗರಿಮೆ ಹೆಚ್ಚಿಸಿರುವ ಸ್ಮಾರಕಗಳ ಜಾಗವನ್ನು ಆಕ್ರಮಿಸುವ ಕಾರ್ಯ ಅಲ್ಲಲ್ಲಿ ನಡೆಯುತ್ತಿದೆ. ಸುತ್ತಮುತ್ತಲಿನ ಹೊಲಸಿನಿಂದ ಗಬ್ಬು ನಾರುವಂತೆ ಮಾಡಿದೆ. ಮತ್ತೂಂದೆಡೆ ಕಟ್ಟಡಗಳ ಮೇಲೆ ಗಿಡ-ಗಂಟಿಗಳು ಬೆಳೆದು ನಿಂತಿದ್ದು, ಅದರ ಬೇರುಗಳು ಒಳಹೊಕ್ಕು ಶಿಥಿಲಗೊಳ್ಳುವ ಸ್ಥಿತಿಗೆ ತಲುಪಿವೆ. ಆದರೆ, ಅದನ್ನು ತೆರವುಗೊಳಿಸಿ ಸಂರಕ್ಷಣೆ ಮಾಡುವ ಕೆಲಸ ಮಾತ್ರ ನಡೆಯುತ್ತಿಲ್ಲ. 

Advertisement

ಬೀದರ ನಗರ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುವ ನಿಟ್ಟಿನಲ್ಲಿ ಈಗಾಗಲೇ ನೂಯಾರ್ಕ್‌ನ “ವರ್ಲ್ಡ್ ಮಾನ್ಯೂಮೆಂಟ್‌ ಫಂಡ್‌ -2014′ ತಾಣಗಳ ವೀಕ್ಷಣಾ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ದೇಶ-ವಿದೇಶಗಳ
ಪ್ರವಾಸಿಗರನ್ನು ತನ್ನತ್ತ ಸೆಳೆಯುವಂತಾಗಿದೆ. ಆದರೆ, ಅಂದ ಕಳೆದುಕೊಳ್ಳುತ್ತಿರುವ ಸ್ಮಾರಕಗಳನ್ನು ಪ್ರವಾಸಿಗರು ಕಂಡು ಬೇಸರ ಪಡುವಂಥ ಸ್ಥಿತಿ ಬಂದಿದೆ.

ಸ್ಮಾರಕಗಳು, ಕಟ್ಟಡಗಳು ವಿರೂಪಗೊಳ್ಳುವ ಮುನ್ನ ಪುರಾತತ್ವ ಇಲಾಖೆ ಇತ್ತ ಗಮನ ಹರಿಸಬೇಕಾಗಿದೆ. ಮುಂದಿನ ಪೀಳಿಗೆಗೆ ಅಮೂಲ್ಯ ಸಂಪತ್ತನ್ನು ಸಂರಕ್ಷಣೆ ಮಾಡಬೇಕಾಗಿದೆ. 

ಕಚೇರಿಗಳ ಮೇಲೂ ಪೋಸ್ಟರ್‌ಗಳು; ನಗರದ ವಿವಿಧ ಸರ್ಕಾರಿ ಕಚೇರಿಗಳ ಸುತ್ತುಗೋಡೆಗಳ ಮೇಲೆ ಭಿತ್ತಿಪತ್ರ ಅಂಟಿಸಲಾಗುತ್ತಿದೆ. ಇದು ಕಾನೂನು ರೀತ್ಯ ಅಪರಾಧವೆಂದು ಅರಿತೂ ಈ ಕೃತ್ಯ ಎಸಗಲಾಗುತ್ತಿದೆ. ಇದನ್ನು ಪ್ರತಿದಿನ ನೋಡಿಯೂ ನೋಡದಂತೆ ಅಧಿಕಾರಿಗಳ ವರ್ಗ ವರ್ತಿಸುತ್ತಿದೆ.

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next