Advertisement

Karnataka: ನನಸಾಗದ ಸ್ಮಾರಕದ ಕನಸು…ಮಾಜಿ ಸಿಎಂ ನಿಜಲಿಂಗಪ್ಪ ನಿವಾಸ ಮಾರಾಟಕ್ಕೆ ಸಿದ್ಧತೆ!

03:52 PM Nov 11, 2024 | Team Udayavani |

ಕರ್ನಾಟಕ ಮೊದಲ ಮಾಜಿ ಮುಖ್ಯಮಂತ್ರಿ ಸಿದ್ದವನಹಳ್ಳಿ ನಿಜಲಿಂಗಪ್ಪ(S.Nijalingappa) ಅವರ ಚಿತ್ರದುರ್ಗದ ನಿವಾಸ ಸ್ಮಾರಕವಾಗಬೇಕೆಂಬ ಕನಸು ನನಸಾಗದೇ ವಿಳಂಬವಾಗುತ್ತಿರುವ ಪರಿಣಾಮ ಇದೀಗ ಕುಟುಂಬ ಸದಸ್ಯರು ಎಸ್.ನಿಜಲಿಂಗಪ್ಪ ಅವರು ಬಾಳಿ-ಬದುಕಿದ್ದ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

Advertisement

ರಾಜ್ಯ ಮತ್ತು ರಾಷ್ಟ್ರರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಎಸ್.ನಿಜಲಿಂಗಪ್ಪ ಅವರು 1956ರಿಂದ 1958ರವರೆಗೆ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿದ್ದರು. ನಂತರ 1962ರಿಂದ 1968ರವರೆಗೆ 2ನೇ ಬಾರಿ ಸಿಎಂ ಆಗಿದ್ದರು. ನಿಜಲಿಂಗಪ್ಪ ಅವರು 2000 ಇಸವಿ ಆಗಸ್ಟ್‌ ನಲ್ಲಿ ವಿಧಿವಶರಾಗಿದ್ದರು.

ಟ್ರಸ್ಟ್‌ ಹೇಳೋದೇನು?

ಎಸ್.‌ ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್‌ ಮೂಲಗಳ ಪ್ರಕಾರ, ಸುಮಾರು ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರ 5 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ತಿಳಿಸಿ, ನಿಜಲಿಂಗಪ್ಪ ಅವರ ಮನೆಯನ್ನು 4.18 ಕೋಟಿ ರೂಪಾಯಿಗೆ ಖರೀದಿಸಿ, ಅದನ್ನು 82 ಲಕ್ಷ ರೂಪಾಯಿ ವೆಚ್ಚದಲ್ಲಿ ಮ್ಯೂಸಿಯಂ ಆಗಿ ಅಭಿವೃದ್ಧಿ ಪಡಿಸುವಂತೆ ಸರ್ಕಾರ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತ್ತು. ಅಲ್ಲದೇ ಮೊದಲು ಕಂತು 2 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು.

Advertisement

ಕುಟುಂಬ ಸದಸ್ಯರ ಮೂಲಗಳ ಪ್ರಕಾರ, ನಿಜಲಿಂಗಪ್ಪ ಅವರಿಗೆ ಆರು ಹೆಣ್ಣುಮಕ್ಕಳು, ಮೂರು ಗಂಡು ಮಕ್ಕಳು. ಇವರಲ್ಲಿ ಇಬ್ಬರು ಗಂಡು ಮಕ್ಕಳು ಅವಿವಾಹಿತರು. ಮತ್ತೊಬ್ಬ ಮಗ ಕಿರಣ್‌ ಶಂಕರ್‌ ಅವರಿಗೆ ಇಬ್ಬರು ಮಕ್ಕಳಿದ್ದು, ಅಮೆರಿಕದಲ್ಲಿ ನೆಲೆಸಿದ್ದರು. ಈಗ ಬೆಂಗಳೂರಿನಲ್ಲಿ ವಾಸವಾಗಿರುವ ಕಿರಣ್‌ ಶಂಕರ್‌ ಅವರಿಗೆ ಚಿತ್ರದುರ್ಗದಲ್ಲಿರುವ ತಂದೆಯ ಖಾಲಿ ಇರುವ ನಿವಾಸದ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ ಎಂದು ವರದಿ ವಿವರಿಸಿದೆ.

ಸ್ಪಷ್ಟ ಮಾರ್ಗದರ್ಶನ ಬಂದಿಲ್ಲ: ಜಿಲ್ಲಾಧಿಕಾರಿ
ನಿಜಲಿಂಗಪ್ಪ ಅವರು 15,000 ಚದರ ಅಡಿಯ ನಿವಾಸ “ವಿನಯ್‌ ನಿವಾಸ” ಅನ್ನು ಕಿರಣ್‌ ಶಂಕರ್‌ ಪುತ್ರ ವಿಜಯ್‌ ಹೆಸರಿಗೆ ವಿಲ್‌ ಮಾಡಿದ್ದರು. 1939ರಲ್ಲಿ ನಿರ್ಮಿಸಲಾದ ಈ ಬಂಗಲೆ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲೇ ಇದೆ.

ಟೈಮ್ಸ್‌ ಆಫ್‌ ಇಂಡಿಯಾ ಜತೆ ಮಾತನಾಡಿದ ಕಿರಣ್‌ ಶಂಕರ್‌, ನಾವು ಕಳೆದ 5 ವರ್ಷಗಳಿಂದ ನಮ್ಮ ತಂದೆ ಮನೆ ಸ್ಮಾರಕವಾಗುತ್ತದೆ ಎಂದು ಕಾಯುತ್ತಿದ್ದೇವು. ಆದರೆ ಸರ್ಕಾರ ತಾಂತ್ರಿಕ ಕಾರಣದಿಂದ ವಿಳಂಬ ಮಾಡುತ್ತಿದೆ. ಏತನ್ಮಧ್ಯೆ ಆಸ್ತಿಯನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಕುರಿತ ಚಿತ್ರದುರ್ಗ ಜಿಲಾಧಿಕಾರಿ ನೇತೃತ್ವದಲ್ಲಿ ನಡೆದ ಹಲವು ಸಭೆಗಳಿಗೆ ಹಾಜರಾಗಿದ್ದೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ನಾವು ಮನೆಯನ್ನು ಮಾರಾಟ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿರುವುದಾಗಿ ಕಿರಣ್‌ ಶಂಕರ್‌ ತಿಳಿಸಿದ್ದಾರೆ. ಒಂದು ಮಹಡಿಯ 117X130 ಚದರ ಅಡಿಯ ನಿವಾಸದ ಮಾರುಕಟ್ಟೆ ಬೆಲೆ 10 ಕೋಟಿ ರೂಪಾಯಿ ಎಂದು ನಿಗದಿಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರ ಮಾಹಿತಿ ಪ್ರಕಾರ, ನೋಂದಾಯಿತವಲ್ಲದ ಉಯಿಲು ( Will) ಸ್ಮಾರಕವನ್ನಾಗಿ ಮಾಡಲು ಪ್ರಮುಖ ತೊಡಕಾಗಿ ಪರಿಣಮಿಸಿದೆ. ಇದಕ್ಕೆ ಸಿವಿಲ್‌ ನ್ಯಾಯಾಲಯದ ವಿಚಾರಣೆಯ ಅಗತ್ಯವಿರುತ್ತದೆ. ಅಂದರೆ ನ್ಯಾಯಾಲಯವು ಉಯಿಲಿನ ಸಿಂಧುತ್ವವನ್ನು ದೃಢೀಕರಿಸುವ ಮತ್ತು ಅದಕ್ಕೆ ಕೈಗೊಂಡ ದಾಖಲೆಯನ್ನು ನೀಡಬೇಕಾಗಿದೆ. ಅಲ್ಲದೇ ವಿನಯ್‌ ಗೆ ಸಹೋದರಿ ಇದ್ದು, ಈ ಕಾರಣಕ್ಕಾಗಿ ಜಿಲ್ಲಾಡಳಿತ ಸರ್ಕಾರದ ಕಾನೂನು ಅಭಿಪ್ರಾಯವನ್ನು ಕೇಳಿದೆ. ಆದರೆ ಈವರೆಗೆ ನಮಗೆ ಯಾವುದೇ ಸ್ಪಷ್ಟ ಮಾರ್ಗದರ್ಶನ ಸಿಕ್ಕಿಲ್ಲ. ನಾವೀಗ ಹೆಚ್ಚುವರಿಯಾಗಿ ಕಾನೂನು ಸಲಹೆ ಕೇಳಿದ್ದೇವೆ. ನಂತರ ನಾವು ಪ್ರಕ್ರಿಯೆ ಮುಂದುವರಿಸುತ್ತೇವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ಸರ್ಕಾರ ಯಾವುದೇ ಆಸಕ್ತಿ ವಹಿಸುತ್ತಿಲ್ಲ ಎಂದು ಮಾಜಿ ಎಂಎಲ್‌ ಸಿ ಮೋಹನ್‌ ಕೊಂಡಜ್ಜಿ ಈ ಸಂದರ್ಭದಲ್ಲಿ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next