Advertisement
ಕಿರೀಟ ಇದ್ದರೆ, ಅದರಲ್ಲಿ ಸಣ್ಣ ಕುಸುರಿ ಕೆಲಸ ಮಾಡಿದ್ದರೆ ಅದು ಮೈಸೂರು ಶೈಲಿ. ಇಲ್ಲವೆಂದರೆ ತಂಜಾವೂರು ಶೈಲಿ. ಇದಿಷ್ಟನ್ನು ಬಹಳ ಸುಲಭವಾಗಿ ಗುರುತಿಸಬಹುದು- ಮೊನ್ನೆ, ಚಿತ್ರಕಲಾ ಪರಿಷತ್‌ನಲ್ಲಿ ತಮ್ಮ ಫೋಟೋಗಳ ಬಗ್ಗೆ ಕಲಾವಿದ ದುಂಡರಾಜರು ಹೀಗೆ ವಿವರಿಸಿದರು. ಅವರ ಮುಂದೆ ವೀಣೆಯನ್ನು ಹಿಡಿದು ಕೂತಿರುವ ಸರಸ್ವತಿ ದೇವಿಯ ಚಿತ್ರವಿತ್ತು. ದೇವಿಯ ಕೈ, ಕಾಲೆಲ್ಲವೂ ಅಪ್ಪಟ ಬಿಳಿ.
ಪೇಂಟಿಂಗ್‌ನಲ್ಲಿ ಅಬ್‌ಸ್ಟ್ರಾಕ್ಟ್, ಸಾಂಪ್ರದಾಯಿಕ ಕಲೆ, ನವೀನ ಶೈಲಿ, ಗ್ರಾಫಿಕ್… ಹೀಗೆ ನಾನಾ ರೀತಿಯ ಶೈಲಿಗಳಿವೆ. ಇದರಲ್ಲಿ ಎಲ್ಲವೂ, ಎಲ್ಲರನ್ನೂ ಮನಸೂರೆಗೊಳಿಸುತ್ತದೆಯಾದರೂ ಮೈಸೂರಿನ ಸಾಂಪ್ರದಾಯಿಕ ಶೈಲಿಯ ಕಲೆ ಎಲ್ಲರನ್ನು ಆಕರ್ಷಿಸುತ್ತದೆ. ಒಬ್ಬ ಕಲಾವಿದ ಈ ಶೈಲಿಗಳನ್ನು ಹೇಗೆ ಅರಗಿಸಿಕೊಳ್ಳುತ್ತಾನೆ ಅನ್ನೋದು ಕುತೂಹಲದ ವಿಷಯವೇ ಆಗಿದೆ. ಮೈಸೂರು ಶೈಲಿ, ತಂಜಾವೂರು ಶೈಲಿಗಳಲ್ಲಿ ದೇವರ ಪಟಗಳನ್ನು ಚಿತ್ರಿಸಬೇಕು ಅಂದರೆ ಸುಮ್ಮನೆ ಅಲ್ಲ.
Related Articles
Advertisement
ಆ ಸಾಮ್ರಾಜ್ಯ ಅವನತಿಯಾದ ನಂತರ ಅಲ್ಲಿದ್ದ ಕಲಾವಿದರು ತಂಜಾವೂರು, ಮೈಸೂರಿಗೆ ಬಂದು ನೆಲೆಸಿದರು. ಈ ಸಂಗತಿಯನ್ನು ನೆನಪಲ್ಲಿ ಇಟ್ಟುಕೊಂಡೇ ಪ್ರಾಚೀನ ಚಿತ್ರಕಲೆಯ ಅಧ್ಯಯನ ಮಾಡಿದರೆ ಮೈಸೂರು ಶೈಲಿಯಲ್ಲಿ ಕೃಷ್ಣದೇವರಾಯನ ಛಾಪೂ ಕೂಡ ಕಾಣಿಸುತ್ತದೆ. ಮೈಸೂರು ಶೈಲಿಯ ಚಿತ್ರಗಳಲ್ಲಿ ಕುಸುರಿ ಕೆಲಸ ಜಾಸ್ತಿ ಇರುತ್ತದೆ. ಅದು ಬಹಳ ಸೂಕ್ಷ್ಮವಾದದ್ದು.
ಕುಸುರಿ ಅಂದರೆ ಹಾರ, ಗೆಜ್ಜೆ, ವಾಲೆ, ಡಾಬು, ಸರ ಹೀಗೆ ಎಲ್ಲವನ್ನೂ ಸೂಕ್ಷ್ಮವಾಗಿ ಬಿಡಿಸುವುದು. ಇದು ತಂಜಾವೂರಿನ ಕೆಲಸಗಳಲ್ಲಿ ಇಲ್ಲ. ಹಾಗೆಯೇ, ಆ ಕಾಲದಲ್ಲಿ (ಈಗಲೂ ಇದೆ) ಚಿನ್ನದ ಲೇಪನ ಮಾಡುವುದು ಕೂಡ ಇತ್ತು. ಈಗಲೂ ಶ್ರೀಮಂತರು ಚಿನ್ನದ ಲೇಪನ ಮಾಡಿದ ಚಿತ್ರಗಳಿಗೆ ಬೇಡಿಕೆ ಇಡುತ್ತಾರೆ. ಇದಕ್ಕೆ 22 ಗ್ರಾಂ. ಚಿನ್ನವನ್ನು ಲೇಪಿಸುತ್ತಾರೆ.
***ದುಂಡರಾಜರು ಕಳೆದ 27 ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದಾರೆ. ಅವರ ಹುಟ್ಟೂರು ತಲಕಾಡು. ಕಲೆಯ ಬಲೆ ತಲೆಯಲ್ಲಿ ಹೆಣೆದುಕೊಂಡಿದ್ದರಿಂದ ವಿದ್ಯೆತಲೆಗೆ ಹತ್ತಲಿಲ್ಲ. ಹಾಗಾಗಿ ಎಸ್‌ಎಸ್‌ಎಲ್‌ಸಿ 8 ಸಲ ನಪಾಸು. ಆಮೇಲೆ ಪಾಸು. ಅವರೀಗ ಮನೆ ಮನೆಗೆ ಹೋಗಿ ಸಾಂಪ್ರದಾಯಿಕ ಕಲೆಯ ಬಗ್ಗೆ ಪಾಠ ಮಾಡುತ್ತಾರೆ. ಇದರಿಂದಲೇ ಜೀವನ ನಡೆಯಬೇಕು. ಕಲೆ ನಂಬಿಕೊಂಡು ಬದುಕಬಹುದಾ ಎಂದು ಹಲವರು ಕೇಳುತ್ತಾರೆ. ಖಂಡಿತ ಬದುಕಬಹುದು ಎಂಬುದಕ್ಕೆ ನಾನೇ ಉದಾಹರಣೆ. ಆರಂಭದಲ್ಲಿ ಇದನ್ನು ನಂಬಿದರೆ ಹೊಟ್ಟೆ ತಣ್ಣೀರ್ ಬಟ್ಟೆ ಅಂದೋರೂ ಇದ್ದಾರೆ. ಆದರೆ ಹಾಗಾಗಲಿಲ್ಲ ಅಂತಾರೆ ದುಂಡರಾಜ. ***
ದಿನಗಳೆದಂತೆ, ಕಾಲ ಉರುಳಿದಂತೆ ದೇವರ ರೂಪ ಏಕೆ ಬದಲಾಗೋಲ್ಲ? ಇದು ಕುತೂಹಲದ ವಿಚಾರ. ಇದು ಹಿಂದಿನ ಕಲಾವಿದನ ಕಲ್ಪನೆಯೇ ಇರಬಹುದು. ಆದರೆ ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ಮುಖಚಹರೆಗಳಾದರೂ ಬದಲಾಗಬೇಕಲ್ಲವೇ ? ಇದಕ್ಕೆ ದುಂಡರಾಜರು ಕೊಡುವ ಉತ್ತರ ನೋಡಿ ಹೀಗಿದೆ- ನಾವು ಕೃಷ್ಣ, ರಾಮ, ಸೀತೆ ಇಂಥವರ ಚಿತ್ರಗಳನ್ನು ರಚಿಸಬೇಕಾದರೆ ಅವರ ಮುಖಭಾವವನ್ನು ಹಾಗೇ ಉಳಿಸಿಕೊಳ್ಳುತ್ತೇವೆ. ಬದಲಾಯಿಸೋಲ್ಲ. ಆದರೆ ದೇಹ ರಚನೆಯಲ್ಲಿ ಬದಲಾವಣೆ ಮಾಡುತ್ತೇವೆ. ಹಳೆ ಚಿತ್ರಗಳಲ್ಲಿ ಶೇ.80ರಷ್ಟು ಸರಿ ಇರುತ್ತದೆ. ಉಳಿಕೆ 20ರಷ್ಟು ಸ್ವಲ್ಪ ತಪ್ಪುಗಳಾಗಿರುತ್ತವೆ. ಇದನ್ನು ನಾವು ಅಧ್ಯಯನ ಮಾಡಿ ಬದಲಾಯಿಸಿಕೊಳ್ಳುತ್ತೇವೆ. ಉದಾಹರಣೆಗೆ ಹೇಳಬೇಕೆಂದರೆ, ದೇವಿಯ ಕಾಲಿಗೆ ಐದು ಬೆರಳಿಗೆ ಆರು ಬೆರಳು, ಎಡಗಾಲು, ಬಲಗಾಲು ಒಂದೇ ಥರ ಮಾಡುವುದು ಹೀಗೆ ಅನೇಕ ಎಡವಟ್ಟುಗಳಾಗಿರುತ್ತವೆ. ಇವನ್ನೆಲ್ಲಾ ನಾವು ಸರಿಪಡಿಸಿಕೊಳ್ಳುತ್ತೇವೆ ಅಂತಾರೆ ದುಂಡರಾಜ. ಮೂಡ್ ಇರಬೇಕು…: ಪೋಟ್ರೇಟ್ ರಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಬ್ಯಾಕ್‌ಗ್ರೌಂಡ್, ಉಡುಪು, ಚಿತ್ರದ ಹೊರಾಂಗಣದ ರಚನೆಯ ಸಂದರ್ಭದಲ್ಲಿ ಹಲವಾರು ಬದಲಾವಣೆಗಳು ಆಗುತ್ತವಂತೆ. ಮೈಸೂರು, ತಂಜಾವೂರು ಶೈಲಿಗಳಿಗೆ ತನ್ನದೇ ಶಾಸ್ತ್ರ ನಿಬಂಧನೆಗಳೂ ಇವೆಯಂತೆ. ಹೀಗಾಗಿ ಮನಸ್ಸಿಗೆ ಬಂದಂತೆ ರಚನೆಗೆ ಇಲ್ಲಿ ಅವಕಾಶವಿಲ್ಲ. ಎಲ್ಲದಕ್ಕೂ ಧ್ಯಾನಸ್ಥಿತಿ ಇರಬೇಕು ಅನ್ನೋ ನಿಯಮ ಇದೆ. ಮನೆಯಲ್ಲಿಟ್ಟು ಪೂಜೆ ಮಾಡ್ತೀವಿ. ಅದಕ್ಕೆ ಒಳ್ಳೇ ದೇವಿಚಿತ್ರ ಬರೆದು ಕೊಡಿ ಅನ್ನುತ್ತಾರೆ ಬಹಳ ಜನ. ಅಂಥ ಸಂದರ್ಭಗಳಲ್ಲಿ ನಾವು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಏಕೆಂದರೆ, ಕೊಂಡು ಹೋಗುವವರ ಪಾಲಿಗೆ ಅದೊಂದು ಚಿತ್ರವಷ್ಟೇ ಅಲ್ಲ. ಒಂದು ಶಕ್ತಿ ಆಗಿರುತ್ತದೆ. ಹಾಗಾಗಿ, ಅದನ್ನು ಶ್ರದ್ಧಾ ಭಕ್ತಿಯಿಂದಲೇ ಚಿತ್ರಿಸಬೇಕು. ಶನಿವಾರ, ಮಂಗಳವಾರ, ಅಮಾವಾಸ್ಯೆ, ಪೌರ್ಣಾಮಿಗಳಂದು ಚಿತ್ರಕ್ಕೆ ಕಣ್ಣನ್ನು ಬರೆಯುವುದಿಲ್ಲ. ಅದಕ್ಕೆ ಒಳ್ಳೆಯ ಮುಹೂರ್ತ ನೋಡುತ್ತೇವೆ ಎನ್ನುತ್ತಾರೆ ದುಂಡರಾಜರು. ಹೀಗೂ ಉಂಟು, ಸಮಕಾಲೀನ ಚಿತ್ರಗಳು..: ಮೈಸೂರು ಶೈಲಿಯಲ್ಲಿ ಮೂಡಿ ಬರುವ ಕೃಷ್ಣ, ರಾಮ, ಸೀತೆ ಎಲ್ಲವನ್ನೂ ನೋಡಿ ಸ್ಪೂರ್ತಿಗೊಂಡು ರಚಿಸುವುದು ಸಮಕಾಲೀನ ಚಿತ್ರ. ಇಂಗ್ಲೀಷಿನಲ್ಲಿ ಕಾಂಟಂಪ್ರರಿ ಅಂತಾರೆ. ಬಿಎಸ್‌ಎನ್‌ಎಲ್‌ನಲ್ಲಿ ಎಂಜಿನಿಯರ್ ಆಗಿರುವ ಆರ್. ರಮೇಶ್‌ಬಾಬು ಅವರಿಗೆ ಇದು ಹವ್ಯಾಸ. ಭಾವಚಿತ್ರಗಳಲ್ಲಿ ಇವರು ಸಿದ್ಧ ಹಸ್ತರು. ಅಕ್ರಾಲಿಕ್, ಆಯಿಲ್ ಪೇಂಟ್‌ಗಳನ್ನು ಬಳಸಿ ಕ್ಯಾನ್‌ವಾಸ್ ಮೇಲೆ ಇವರು ಚಿತ್ರಗಳನ್ನು ರಚಿಸುತ್ತಾರೆ. ” ಇದು ಟ್ರೆಂಡ್ ನಂತೆ, ಕಾಲಕ್ಕೆ ತಕ್ಕಂತೆ ಕೃಷ್ಣ, ರಾಮರ ಮುಖ ಚಹರೆಗಳ ಬದಲಾಗಬಹುದು. ಇಲ್ಲಿ ನಾವು ಬಂಗಾರವನ್ನು ಬಳಸೋದಿಲ್ಲ. ಮೈಸೂರು, ತಂಜಾವೂರು ಶೈಲಿಯಲ್ಲಿರುವ ಗುಣಗಳನ್ನು ಹಿಡಿದಡಬೇಕು ಅಂತಿಲ್ಲ. ನಮ್ಮ ಮನೋಧರ್ಮಕ್ಕೆ ಹೇಗೆ ಬೇಕು ಅದನ್ನು ಮಾಡುವುದರಿಂದ ಚಿತ್ರದ ಎಕ್ಸ್‌ಪ್ರೆಷನ್‌ಗಳು ವಿಭಿನ್ನವಾಗಿರುತ್ತವೆ ಎನ್ನುತಾರೆ ರಮೇಶ್. * ಕಟ್ಟೆ ಗುರುರಾಜ್