Advertisement

ನೆನಪಿನ ಬುತ್ತಿ ತೆರೆದ ಶಿಂಗಣ್ಣಾ ಕಾರ್ಟೂನ್‌ ಪ್ರದರ್ಶನ

06:00 AM Oct 12, 2018 | |

ಸುದೀರ್ಘ‌ 30 ವರ್ಷಗಳ ಕಾಲ ಸಾವಿರಾರು ಓದುಗರು ಮುಂಜಾನೆ ಚಹಾದೊಂದಿಗೆ ವೃತ್ತಪತ್ರಿಕೆಯ ಎಡಮೂಲೆಯಲ್ಲಿ ಬರುತ್ತಿದ್ದ ವ್ಯಂಗ್ಯಚಿತ್ರಗಳನ್ನು ಸವಿಯುತ್ತಿದ್ದ ದಿನಗಳನ್ನು ತಾಜಾಗೊಳಿಸಿದ ನಮ್ಮೂರಿನ ಶಿಂಗಣ್ಣಾ ವ್ಯಂಗ್ಯಚಿತ್ರ ಪ್ರದರ್ಶನ ಇತ್ತೀಚೆಗೆ ಮಂಗಳೂರಿನ ಪ್ರಸಾದ್‌ ಆರ್ಟ್‌ ಗ್ಯಾಲರಿಯಲ್ಲಿ ಆಯೊಜಿಸಲಾಗಿತ್ತು. 

Advertisement

60ರದಶಕದ ಆರಂಭದಲ್ಲಿ ವಕೀಲ ವೃತ್ತಿಯ ಕನ್ನೇಪ್ಪಾಡಿ ರಾಮಕೃಷ್ಣ ಅವರು ರಘು ಹೆಸರಿನಲ್ಲಿ ಶಿಂಗಣ್ಣಾ ಕಾಟೂìನ್‌ಗಳನ್ನು ನವಭಾರತ ದಿನಪತ್ರಿಕೆಗೆ ಬರೆಯುತ್ತಿದ್ದರು ಎಂಬುದು ಯುವ ಪೀಳಿಗೆಗೆ ಗೊತ್ತಿರಲಿಕ್ಕಿಲ್ಲ. ಇಂದು ಆ ಪತ್ರಿಕೆ ಮತ್ತು ವ್ಯಂಗ್ಯಚಿತ್ರಕಾರ ರಘು ಕಣ್ಮರೆಯಾದರೂ ಶಿಂಗಣ್ಣಾ ಕರಾವಳಿಯ ಓದುಗರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾನೆ. ಅಂದಿನ ದಿನಗಳಲ್ಲಿ ಉಲ್ಟಾ ಪ್ರಶ್ನಾರ್ಥಕ ಚಿಹ್ನೆ ಆಕಾರದ ಮೂಗಿನಿಂದ ಗುರುತಿಸಲ್ಪಡುತ್ತಿದ್ದ ಶ್ರೀಸಾಮಾನ್ಯ ಶಿಂಗಣ್ಣಾ ಪಾಕೆಟ್‌ ಕಾರ್ಟೂನ್‌ಗಳು ಉದಯವಾಣಿಯಲ್ಲೂ ಮುಖ್ಯ ಆಕರ್ಷಣೆಯಾಗಿದ್ದದ್ದು ಹೌದು. ರಾಮಕೃಷ್ಣ ಅವರ ಪಂಚ್‌ಗಳು ಪಂಚಭಾಷಾ ಹೆಗ್ಗಳಿಕೆಗೆ ಪಾತ್ರವಾಗಿದ್ದು ಕರ್ನಾಟಕದ ಹೆಮ್ಮೆ . 

ವ್ಯಂಗ್ಯಚಿತ್ರಕಾರನ ಉದ್ದೇಶ ನಗಿಸುವುದು ಮಾತ್ರವಲ್ಲ, ನಗುವಿನ ಆಚೆ ಇರುವ ವಿಡಂಬನೆಯನ್ನು ಕೂಡ ಮುಂದೊತ್ತುವುದು. ಶಿಂಗಣ್ಣಾ ಜನಸಾಮಾನ್ಯರ ಮಧ್ಯೆ ರಾಜಕೀಯ ಮತ್ತು ಖಾಸಗಿ ಬದುಕಿನ ಮೇಲೆ ಕ್ಷಕಿರಣ ಬೀರುವ ಶ್ರೀಸಾಮಾನ್ಯ ಪ್ರತಿನಿಧಿ. ಸುಮಾರು 60 ವ್ಯಂಗ್ಯಚಿತ್ರಗಳು ಪ್ರದರ್ಶನದಲ್ಲಿದ್ದುವು. ಅವನು ಅಂದು ಎದುರಿಸುತ್ತಿದ್ದ ಸಮಸ್ಯೆಗಳು ಇಂದೂ ಜ್ವಲಂತವಾಗಿ ಉಳಿದಿರೋದು ಕೆಲವು ಕಾಟೂìನ್‌ಗಳಲ್ಲಿ ಕಾಣಿಸುತ್ತಿತ್ತು. ಏಣಿಧಾರಿ ಶಿಂಗಣ್ಣಾ ” ನಮ್ಮ ರಸ್ತೆ ಹೊಂಡಗಳಲ್ಲಿ ಬಿದ್ದರೆ ಹತ್ತಿಕೊಳ್ಳಲಿಕ್ಕೆ ಬೇಕಲ್ಲ..!’ ಎನ್ನುವ ಕಾಟೂìನ್‌, ತಿಂಗಳು ಪೂರ್ತಿ ಯಾವ್ಯಾವ ಪಾರ್ಟಿಯಲ್ಲಿ ಇದ್ದೆ ಎಂದು ರಾಜಕಾರಣಿಗಳಿಗೆ ಟಾಂಗ್‌ ಕೊಡುವ ಇನ್ನೊಂದು ಕಾಟೂìನ್‌ ಉದಾಹರಣೆಗಳು. ಮಾತಿಲ್ಲದ ಜುಟ್ಟು ತೆರಿಗೆ, ಚಪ್ಪಲ್‌ ತೆರಿಗೆ, ಸಂತತಿ ತೆರಿಗೆ ಮುಂತಾದ ವಿವಿಧ ತೆರಿಗೆಗಳಂಥ ದೊಡ್ಡ ಅಸಂಗತ ವ್ಯಂಗ್ಯಚಿತ್ರಗಳಲ್ಲೂ ಸೈ ಅನ್ನಿಸಿ ಕೊಂಡಿದ್ದರು.  

ಪ್ರದರ್ಶನದಲ್ಲಿದ್ದ  ಚಿತ್ರಗಳಿಂದಲೇ ಪ್ರೇರಿತರಾಗಿ ನಟ ಅರವಿಂದ ಬೋಳಾರ ತನ್ನನ್ನು ಶಿಂಗಣ್ಣಾನಂತೆ ಬಿಂಬಿಸಿದ ಲಘು ದಾಟಿ ನಗೆ ಎಬ್ಬಿಸಿತು.  ನಾ. ದಾಮೋದರ ಶೆಟ್ಟಿಯವರು ನವಭಾರತದ ಕುಡ್ವ ಕುಟುಂಬದವರಲ್ಲಿದ್ದ ಶಿಂಗಣ್ಣಾ ಮೂಲ ಚಿತ್ರಗಳನ್ನು ಸಂಗ್ರಹಿಸಿದ್ದರು. ಕರಾವಳಿ ಚಿತ್ರಕಲಾ ಚಾವಡಿ ಸಹಯೋಗದಲ್ಲಿ ವ್ಯಂಗ್ಯಚಿತ್ರಕಾರ ಜಾನ್‌ಚಂದ್ರನ್‌ ಪ್ರದರ್ಶನಕ್ಕೆ ಅಣಿಗೊಳಿಸಿದ್ದರು.

ಜೀವನ್‌ ಶೆಟ್ಟಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next