Advertisement

ಭೂತಾನ್‌ನಲ್ಲಿ  ಸ್ಮರಣೀಯ ಗೌರವ

04:30 PM May 27, 2018 | Team Udayavani |

ಬೆಳ್ತಂಗಡಿ : ನೆರೆಯ ರಾಷ್ಟ್ರ ಭೂತಾನ್‌ನಲ್ಲಿ ಮೇ 2 ರಂದು ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಮೂಲದ ಶಿಕ್ಷಕ ಎಂ.ಎಸ್‌. ರಮೇಶ್‌ ರಾವ್‌ ಸಹಿತ ದೇಶದ 43 ಮಂದಿ ಶಿಕ್ಷಕರನ್ನು ಗೌರವಿಸಲಾಗಿದೆ. ಇದರಲ್ಲಿ ಕೇರಳದ 28 ಮಂದಿ ಶಿಕ್ಷಕರೂ ಸೇರಿದ್ದಾರೆ. ಉಳಿದವರೆಲ್ಲರೂ ಉತ್ತರ ಭಾರತೀಯರು. ರಾಜ್ಯದಿಂದ ಭಾಗವಹಿಸಿದ ಏಕೈಕ ಪ್ರತಿನಿಧಿ ಎಂ.ಎಸ್‌. ರಮೇಶ್‌ ರಾವ್‌ ಎಂಬುದು ವಿಶೇಷ. ಅವರು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

Advertisement

ಭಾರತ-ಭೂತಾನ್‌ ದೇಶಗಳ ಮಧುರ ಬಾಂಧವ್ಯದ 50ನೇ ವರ್ಷಾಚರಣೆ ಹಿನ್ನೆಲೆ 5ನೇ ರಾಜ ಜಿಗ್ಮಿ ಗೇಸರ್‌ ನಾಮ್‌ಗೆಲ್‌
ವಾಂಗ್‌ಚುಕ್‌ ಆದೇಶದಂತೆ, ಭಾರತದಿಂದ 1980ರಿಂದ 90ರ ವರೆಗೆ ಭೂತಾನ್‌ಗೆ ತೆರಳಿ 20ರಿಂದ 30 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಅಲ್ಲಿನ ಪ್ರಧಾನಿ ಷೆಲಿಂಗ್‌ ತೊಟ್ಗಿ  ಮೇ 2ರಂದು ಚಾಮ್‌ಲಿಮಿತಾಂಗೆ ಗ್ರೌಂಡ್‌ನ‌ಲ್ಲಿ ಗುರುತಿಸಿ, ಪ್ರಮಾಣ ಪತ್ರ, ಸ್ಮರಣಿಕೆ ನೀಡಿ ವಿಶೇಷವಾಗಿ ಗೌರವಿಸಿದ್ದಾರೆ.

20 ವರ್ಷಗಳ ಸೇವೆ
1983ರಲ್ಲಿ ಮಂಗಳೂರಿನಲ್ಲಿ ಬಿ.ಎಡ್‌. ಶಿಕ್ಷಣ ಮುಗಿಸಿದ ಬಳಿಕ ರಮೇಶ್‌ ಅವರು ವಿವಿಧೆಡೆ ಕೆಲಸಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಚೆನ್ನೈನಲ್ಲಿ ಸಂದರ್ಶನ ಪ್ರಕ್ರಿಯೆ ನಡೆದು ಭೂತಾನ್‌ನಲ್ಲಿ ಕೆಲಸ ಲಭಿಸಿತು. ಆ ವೇಳೆಗೆ 20ರ ಹರೆಯದವರಾದ್ದರಿಂದ ಭೂತಾನ್‌ಗೆ ತೆರಳಿದರು. ಆ ವೇಳೆಗೆ 3 ರೈಲುಗಳನ್ನು ಬಳಸಿಕೊಂಡು ತೆರಳಬೇಕಿತ್ತು. ಆರಂಭದಲ್ಲಿ ಸಂಪರ್ಕ ಎನ್ನುವುದೇ ಅಪರೂಪವಾಗಿತ್ತು. ಸಂದೇಶಗಳನ್ನು ಟೆಲಿಗ್ರಾಂ ಮೂಲಕ ಕಳುಹಿಸಬೇಕಾಗಿದ್ದು, ಅದೂ ಸಮರ್ಪಕವಾಗಿರಲಿಲ್ಲ. ಆರಂಭದಲ್ಲಿ ಪ್ರಾಥಮಿಕ ಶಾಲೆಯಲ್ಲಿ
ಶಿಕ್ಷಕನಾಗಿ ಉದ್ಯೋಗ ಪ್ರಾರಂಭಿಸಿದ್ದು, ಬಳಿಕ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸಿದೆ. 2003ರ ವರೆಗೆ 3 ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದು, ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ಹಿಂದಿರುಗಿದೆ ಎನ್ನುತ್ತಾರೆ ರಮೇಶ್‌ ರಾವ್‌.

ಕಾಡುಪ್ರಾಣಿಗಳ ಭೀತಿ
ಭೂತಾನ್‌ನಲ್ಲಿ ಶಾಲೆಗೆ ಮಕ್ಕಳನ್ನು ಹೆತ್ತವರು ಗುಡ್ಡಗಾಡು ಹತ್ತಿಕೊಂಡು, ನದಿ-ತೊರೆಗಳನ್ನು ದಾಟಿಕೊಂಡು ಬರಬೇಕಾಗಿತ್ತು. ಈ ವೇಳೆಗೆ ಕಾಡು ಪ್ರಾಣಿಗಳೂ ಹೆಚ್ಚಾಗಿರುವುದರಿಂದ ಜಾಗ್ರತೆ ವಹಿಸಬೇಕಾಗಿತ್ತು. ಹಿಮಾಲಯ ಸಮೀಪವಿರುವು ದರಿಂದ ಚಳಿಯ ಪ್ರಮಾಣವೂ ಹೆಚ್ಚಾಗಿದ್ದು, ಮೈನಸ್‌ ಡಿಗ್ರಿಯಲ್ಲಿ ವಾತಾವರಣ ಇರುತ್ತಿದ್ದುದರಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿತ್ತು. ಆಹಾರವೂ ಹೆಚ್ಚಾಗಿ ಮಾಂಸಾಹಾರ. ನಾನು ಸಸ್ಯಾಹಾರಿಯಾಗಿದ್ದು, ಮನೆಯಲ್ಲಿಯೇ ತಯಾರಿಸಿ ತಿನ್ನಬೇಕಾಗಿತ್ತು.

ಭೂತಾನ್‌ಗೂ ತರಿಸುತ್ತಿದ್ದರು ತರಂಗ, ಉದಯವಾಣಿ
ಉದಯವಾಣಿ ಹಾಗೂ ತರಂಗವನ್ನು ಅಲ್ಲೂ ಓದುತ್ತಿದ್ದೆ. ಆದರೆ ಅಲ್ಲಿಗೆ ತರಿಸುವ ವೇಳೆಗೆ 20 ದಿನಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಗಿತ್ತು. ಆದರೂ ಊರಿನ ಸುದ್ದಿಗಳನ್ನು ಅರಿಯುವ ದೃಷ್ಟಿಯಿಂದ ಓದುತ್ತಿದ್ದೆ.

Advertisement

ಸಂತೋಷದ ಕ್ಷಣ
ತಮ್ಮ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾದುದನ್ನು ಸ್ಮರಿಸಿ ಭಾರತೀಯ ಶಿಕ್ಷಕರನ್ನು ಭೂತಾನ್‌ನಲ್ಲಿ ಗುರುತಿಸಿದ್ದು ಸಂತೋಷದ ಕ್ಷಣ. ಅನಿವಾರ್ಯವಾಗಿ ಉದ್ಯೋಗದ ದೃಷ್ಟಿಯಿಂದ ತೆರಳಿದ್ದೆ. ಪ್ರಥಮ ಬಾರಿಗೆ ತೆರಳುವ ವೇಳೆಗೆ ಭೂತಾನ್‌ ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದಿದ್ದು, ಇದೀಗ ಸ್ವಾವಲಂಬಿಯಾಗುವತ್ತ ಮುಂದುವರಿಯುತ್ತಿದೆ. ಅಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಶಿಕ್ಷಕರ ಸಂಖ್ಯೆ ನಾನು ಇರುವ ವೇಳೆಗೆ ಸುಮಾರು 3 ಸಾವಿರದಷ್ಟಿದ್ದು, ಇದೀಗ 143 ಮಂದಿ ಇರುವ ಮಟ್ಟಿಗೆ ಬಂದಿದೆ. ಅಷ್ಟರ ಮಟ್ಟಿಗೆ
ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆ. 
– ಎಂ.ಎಸ್‌. ರಮೇಶ್‌ ರಾವ್‌
ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next