ಕಲಬುರಗಿ: ವಿಧಾನಪರಿಷತ್ ಚುನಾವಣೆ ನೆಪವಾಗಿಸಿಕೊಂಡು ಮುಂದೂಡಲಾಗಿದ್ದ ಕಳೆದ ನ. 20ರಂದು ನಿಗದಿಯಾಗಿದ್ದ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಇನ್ನೂ ಮುಹೂರ್ತ ಕೂಡಿಬರುತ್ತಿಲ್ಲ.
ಕಳೆದ ಡಿ.10ರಂದು ವಿಧಾನ ಪರಿಷತ್ ಚುನಾವಣೆ, ಡಿ. 14ರಂದು ಫಲಿತಾಂಶ ಬಂದು ತಿಂಗಳುಗಳೇ ಗತಿಸಿವೆ. ಚುನಾವಣೆ ಮುಗಿದು ಒಂದು ತಿಂಗಳಾದರೂ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿ ಆಗದೇ ಇರುವುದು ನಿರ್ಲಕ್ಷ್ಯತನಕ್ಕೆ ಹಿಡಿದ ಕನ್ನಡಿಯಾಗಿದೆ. ಕಲಬುರಗಿ ಜತೆಗೆ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯೂ ಮುಂದೂಡಿಕೆಯಾಗಿದ್ದು, ಇದಕ್ಕೂ ಮುಹೂರ್ತ ಕೂಡಿಬರುತ್ತಿಲ್ಲ.
ರಾಜ್ಯದ ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಮೀಸಲಾತಿ ಏಕಕಾಲಕ್ಕೆ ಮೀಸಲಾತಿ ಪ್ರಕಟವಾಗಿವೆ. ಹೊಸ ಮೀಸಲಾತಿ ಅನ್ವಯ ದಾವಣಗೆರೆ, ಮಂಗಳೂರು ಪಾಲಿಕೆಯ ಮೇಯರ್ -ಉಪಮೇಯರ್ ಚುನಾವಣೆ ನಡೆದಿವೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಪಾಲಿಕೆಗೆ ಚುನಾವಣೆ ನಡೆದಿದೆ. ಫಲಿತಾಂಶ ಪ್ರಕಟವಾಗಿ ಎರಡೂ¾ರು ವಾರದೊಳಗೆ ಮೇಯರ್-ಉಪ ಮೇಯರ್‌ಗೆ ಚುನಾವಣೆ ನಡೆಯಬೇಕಿತ್ತು. ಆದರೆ ಪಾಲಿಕೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದರಿಂದ ಚುನಾವಣೆ ನಡೆಯಲು ವಿಳಂಬವಾಗಿದೆ.
ಪಾಲಿಕೆಯ ಒಟ್ಟಾರೆ 55 ವಾರ್ಡ್ ಸ್ಥಾನಗಳಲ್ಲಿ ಅಂತಿಮವಾಗಿ ಕಾಂಗ್ರೆಸ್ 27 ಹಾಗೂ ಬಿಜೆಪಿ 23 ಹಾಗೂ ಜೆಡಿಎಸ್ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿದೆ. ಒಂದು ಸ್ಥಾನದಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಗೆಲುವು ಸಾ ಧಿಸಿದ್ದಾರೆ. ಪಾಲಿಕೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ ವಾಗಿದ್ದರಿಂದ ಫಲಿತಾಂಶ ಪ್ರಕಟವಾದ ಹತ್ತು ದಿನಗಳ ಕಾಲ ಗದ್ದುಗೆ ಗುದ್ದಾಟಕ್ಕಾಗಿ ಕಸರತ್ತು ನಡೆದು ರಾಜ್ಯದಾದ್ಯಂತ ಭಾರಿ ಸದ್ದು ಆಗಿತ್ತು. ಮುಖ್ಯಮಂತ್ರಿಯಿಂದ ಹಿಡಿದು ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಹಾಗೂ ಅನೇಕ ಘಟಾನುಘಟಿ ನಾಯಕರು ಪಾಲಿಕೆಯಲ್ಲಿ ತಮ್ಮ ಆಡಳಿತದ ಪ್ರಭುತ್ವ ಸಾಧಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆನಂತರ ಪ್ರಾದೇಶಿಕ ಆಯುಕ್ತರು ಕಳೆದ ನವೆಂಬರ್ 20ರಂದು ಮುಹೂರ್ತ ನಿಗದಿ ಮಾಡಿದ್ದರು.
ತದನಂತರ ರಾಜಕೀಯ ಬೆಳವಣಿಗೆ ನಡೆದ ಪರಿಣಾಮ ಚುನಾವಣೆ ಮುಂದೂಡಿಕೆಯಾಯಿತು. ಮತದಾರರ ಪಟ್ಟಿಯಲ್ಲಿ ಪಾಲಿಕೆ ಸದಸ್ಯರು, ಶಾಸಕರು ಹಾಗೂ ಸಂಸದರ ಹೆಸರಿನ ಜತೆಗೆ ಬಿಜೆಪಿ ಏಳು ವಿಧಾನ ಪರಿಷತ್ ಸದಸ್ಯರ ಹೆಸರನ್ನು ಸೇರಿಸಿರುವುದು ಹಾಗೂ ಇದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ನ್ಯಾಯಾಲಯದ ಮೆಟ್ಟಿಲೇರಿರುವುದು ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು. ಇದೇ ಕಾರಣದಿಂದ ಚುನಾವಣೆ ದಿನಾಂಕ ನಿಗದಿಯಾಗುತ್ತಿಲ್ಲ ಎನ್ನಲಾಗುತ್ತಿದೆ.
ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದೇ ಹಿಡಿಯುತ್ತೇವೆ ಎಂದು ಬಿಜೆಪಿ ಮುಖಂಡರು ಶಪಥ ಮಾಡಿರುವುದು ಹಾಗೂ ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನ ಪಡೆದಿದ್ದು, ಜೆಡಿಎಸ್ ಪಕ್ಷದ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುತ್ತೇವೆ. ವಾಮಮಾರ್ಗದಿಂದ ಅಧಿಕಾರ ಹಿಡಿಯೋದಿಲ್ಲ ಎಂದು ಹೇಳಿದ್ದರಿಂದ ಪಾಲಿಕೆ ಮೇಯರ್ ಚುನಾವಣೆ ಕುತೂಹಲ ಮೂಡಿಸಿದೆ. ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದ ದಿನಾಂಕದಂದು ಚುನಾವಣೆ ನಡೆಯುವ ಸ್ಥಳದಲ್ಲಿ 144 ಕಲಂ ಜಾರಿ ಕೂಡಾ ಮಾಡಲಾಗಿತ್ತು. ಈ ಕುರಿತು ಚುನಾವಣಾಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಿದ್ದರು.