ಮಣಿಪಾಲ: ಕೆಎಂಸಿ ಮತ್ತು ಆಸ್ಪತ್ರೆಯ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ (ಎಂಸಿಸಿಸಿಸಿ) ಯೂನಿಯನ್ ಫಾರ್ ಇಂಟರ್‌ನ್ಯಾಶನಲ್ ಕ್ಯಾನ್ಸರ್ ಕಂಟ್ರೋಲ್ ಒಕ್ಕೂಟ (ಯುಐಸಿಸಿ)ದಲ್ಲಿ ಸದಸ್ಯತ್ವ ದೊರೆತಿದೆ.
ಈ ಮನ್ನಣೆಯಿಂದ ಕ್ಯಾನ್ಸರ್ ಆರೈಕೆ, ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಎಂಸಿಸಿಸಿಸಿಯ ಖ್ಯಾತಿಯು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಹೆಚ್ಚಲಿದೆ.
ಯುಐಸಿಸಿ ಸದಸ್ಯತ್ವವನ್ನು ಸುಲಭವಾಗಿ ಪಡೆಯಲಾಗುವುದಿಲ್ಲ. ಇದು ನಿಖರವಾದ ಮೌಲ್ಯಮಾಪನ ಪ್ರಕ್ರಿಯೆ ಮತ್ತು ಜಾಗತಿಕ ಮಾನದಂಡಗಳಿಗೆ ಕಟ್ಟುನಿಟ್ಟಾದ ಅನುಸರಣೆಯನ್ನು ಒಳಗೊಂಡಿರುತ್ತದೆ. ಕ್ಯಾನ್ಸರ್ ಚಿಕಿತ್ಸೆ ಮತ್ತು ಉನ್ನತ ಸಂಶೋಧನೆಯನ್ನು ಮುನ್ನಡೆಸಲು ಕೇಂದ್ರದ ಬದ್ಧತೆಯನ್ನು ಇದು ಸಾರುತ್ತದೆ. ಸದಸ್ಯತ್ವ ಸಿಕ್ಕಿದ ಕಾರಣ ಎಂಸಿಸಿಸಿಸಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ತರಬೇತಿ ಅವಕಾಶಗಳಿಗೆ ನೇರ ಪ್ರವೇಶವನ್ನು ಪಡೆಯಲಿದ್ದಾರೆ. ಇದು ಕೇಂದ್ರದಲ್ಲಿ ಲಭ್ಯವಿರುವ ಶಿಕ್ಷಣ ಮತ್ತು ತರಬೇತಿಯ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ರಾಷ್ಟ್ರೀಯ ಮತ್ತು ಜಾಗತಿಕವಾಗಿ ಕ್ಯಾನ್ಸರ್ ಆರೈಕೆಯಲ್ಲಿ ನಮ್ಮ ಕೇಂದ್ರವು ಮುಂಚೂಣಿಯಲ್ಲಿದೆ ಎಂಬುದನ್ನು ಖಚಿತಪಡಿಸಲಿದೆ.
ಎಂಸಿಸಿಸಿಸಿ ಉಪ ಸಂಯೋಜಕರಾದ ಡಾ| ವಾಸುದೇವ ಭಟ್ ಕೆ., ಡಾ| ಶೆರ್ಲಿ ಸಾಲಿನ್ಸ್ ಅವರು ಯುಐಸಿಸಿ ಸದಸ್ಯತ್ವದ ಮಾನ್ಯತೆಗೆ ಹರ್ಷ ವ್ಯಕ್ಯಪಡಿಸಿದರು.
ಯುಐಸಿಸಿ ಅಧ್ಯಕ್ಷ ಪ್ರೊ| ಜೆಫ್ ಡನ್ ಎಒ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಕ್ಯಾರಿ ಆಡಮ್ಸ್ ಅವರು ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.