Advertisement

ತಮಗರಿವಿಲ್ಲದೆ ಪಕ್ಷಗಳ ಸದಸ್ಯತ್ವ; ಕಿರಿಕಿರಿ

12:16 AM Apr 03, 2019 | Lakshmi GovindaRaju |

ಬೆಂಗಳೂರು: ಕೆಲದಿನಗಳ ಹಿಂದೆ ಹಲಸೂರಿನ 89ನೇ ವಾರ್ಡ್‌ನಲ್ಲಿ ಆರೋಗ್ಯ ಕಾರ್ಡ್‌ಗೆ ಹೆಸರು ನೋಂದಣಿ ಅಭಿಯಾನ ನಡೆಯಿತು. ಅಭಿಯಾನದಲ್ಲಿ ಅದೇ ವಾರ್ಡ್‌ನ ನಿವಾಸಿ ಮಹೇಶ್‌ ಕೂಡ ಹೆಸರು ಬರೆಸಿದ್ದರು. ಇದಕ್ಕೆ ಪ್ರತಿಯಾಗಿ ಆ ಅಭಿಯಾನದ ತಂಡವು ಒಂದು ಮೊಬೈಲ್‌ ಸಂಖ್ಯೆಯನ್ನು ನೀಡಿ, “ಆ ನಂಬರ್‌ಗೆ ಕರೆ ಮಾಡಿದ ತಕ್ಷಣ ಮೆಸೇಜ್‌ ಬರುತ್ತದೆ’ ಎಂದು ಹೇಳಿದ್ದರು.

Advertisement

ನಂತರದಲ್ಲಿ ಮಹೇಶ್‌ ಮೊಬೈಲ್‌ಗೆ ಮೆಸೇಜೂ ಬಂತು. ಆದರೆ, ಅದು ಆರೋಗ್ಯ ಕಾರ್ಡ್‌ಗೆ ಸಂಬಂಧಿಸಿದ್ದಾಗಿರಲಿಲ್ಲ. ರಾಷ್ಟ್ರೀಯ ಪಕ್ಷವೊಂದರ ಸದಸ್ಯತ್ವ ನೋಂದಣಿ ಖಾತ್ರಿಗೆ ಸಂಬಂಧಿಸಿದ್ದಾಗಿತ್ತು! ಈಗ ಚುನಾವಣೆ ಹಿನ್ನೆಲೆಯಲ್ಲಿ ಒಂದಿಲ್ಲೊಂದು ಪ್ರಚಾರ ಕಾರ್ಯಕ್ರಮಗಳು ನಡೆಯುತ್ತವೆ. ಮಹೇಶ್‌ಗೂ ತಪ್ಪದೆ ಆ ಪಕ್ಷದಿಂದ ಆಮಂತ್ರಣ ಬರುತ್ತದೆ. ಈ ಮೂಲಕ ತಮಗೆ ಅರಿವಿಲ್ಲದೆ, ಅವರು ರಾಜಕೀಯ ಪಕ್ಷವೊಂದರ ಶಾಶ್ವತ ಸದಸ್ಯ ಹಾಗೂ ಕಾರ್ಯಕರ್ತರೂ ಆಗಿಬಿಟ್ಟಿದ್ದಾರೆ.

ಯಶವಂತಪುರ ವಾರ್ಡ್‌ವೊಂದರಲ್ಲಿ ಪಾಲಿಕೆ ಸದಸ್ಯರ ಬೆಂಬಲಿಗರು ಉಚಿತ ವೈ-ಫೈ ನೀಡಲಾಗುವುದು ಎಂದು ಹೇಳಿ, ಮಂಜುನಾಥ್‌ ಎಂಬುವವರ ಮತದಾರರ ಗುರುತಿನಚೀಟಿ ಸಂಖ್ಯೆಯನ್ನು ಅವರದ್ದೇ ಮೊಬೈಲ್‌ನಲ್ಲಿ ಟೈಪ್‌ ಮಾಡಿ, ಸಂದೇಶ ಕಳುಹಿಸಿದರು. ಕೆಲವೇ ಹೊತ್ತಿನಲ್ಲಿ ಮಂಜುನಾಥ್‌ ಪಕ್ಷವೊಂದರ ಸದಸ್ಯತ್ವ ನೋಂದಣಿ ಆಗಿರುವ ಬಗ್ಗೆ ಸಂದೇಶ ಬಂತು.

ಅದೇ ರೀತಿ, ಬೊಮ್ಮನಹಳ್ಳಿಯಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಗ್ರೂಪ್‌ ಮಾಡುವ ನೆಪದಲ್ಲಿ ಆ ಏರಿಯಾದ ಮತದಾರರ ಗುರುತಿನ ಚೀಟಿ ಮತ್ತು ಮೊಬೈಲ್‌ ಸಂಖ್ಯೆ ಪಡೆಯಲಾಯಿತು. ನಂತರದಲ್ಲಿ ಅವರೆಲ್ಲರೂ ಮತ್ತೂಂದು ರಾಷ್ಟ್ರೀಯ ಪಕ್ಷದ ಸದಸ್ಯತ್ವ ಪಡೆದಿದ್ದರು. ಈಗ ನಿತ್ಯ ಆ ಪ್ರದೇಶದ ನಿವಾಸಿಗಳಿಗೆ ಕಾರ್ಯಕ್ರಮಗಳ ಆಮಂತ್ರಣ ಬರುತ್ತಿದೆ.

ಇವು ಕೆಲವು ಸ್ಯಾಂಪಲ್‌ಗ‌ಳಷ್ಟೇ. ನಗರದಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಸಾವಿರಾರು ಕಾರ್ಯಕರ್ತರು ಹೀಗೆ ತಮಗೆ ಅರಿವಿಲ್ಲದೆ ಸದಸ್ಯತ್ವ ಪಡೆದಿದ್ದಾರೆ. ಎಲ್ಲ ಕಾರ್ಯಕರ್ತರಂತೆ ಈ “ಅತಿಥಿ’ಗಳಿಗೂ ಆಮಂತ್ರಣ ಬರುತ್ತಿವೆ. ಕಡಿಮೆ ಶ್ರಮದಲ್ಲಿ ಹೆಚ್ಚು ಜನರನ್ನು ತಲುಪಲು ಹಾಗೂ ಅಧಿಕ ಸದಸ್ಯತ್ವವನ್ನು ತೋರಿಸಲು ರಾಜಕೀಯ ಪಕ್ಷಗಳು ಕಂಡುಕೊಂಡ ಮಾರ್ಗ ಇದು.

Advertisement

ಚುನಾವಣೆ ಹಿನ್ನೆಲೆಯಲ್ಲಿ ಆಯಾ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವಿ ಮಾಡುವುದು ಸಾಮಾನ್ಯ. ಆದರೆ, ವಿವಿಧ ಮೊಬೈಲ್‌ ಕಂಪೆನಿಗಳ ಜತೆ ರಾಜಕೀಯ ಪಕ್ಷಗಳ ಕರೆಗಳೂ ಬರುತ್ತಿವೆ. ಇದೊಂದು ರೀತಿಯ ಕಿರಿಕಿರಿ ಆಗುತ್ತದೆ. ಕಳೆದ ಎರಡು ತಿಂಗಳಿಂದಲೂ ಪಕ್ಷಗಳಿಗೆ ಸಂಬಂಧಿಸಿದ ಮೆಸೇಜ್‌ಗಳು ಬರುತ್ತಲೇ ಇವೆ ಎನ್ನುತ್ತಾರೆ ಹಲಸೂರಿನ ನಿವಾಸಿ ಗಿರೀಶ್‌.

ಪರೋಕ್ಷ ವಂಚನೆ: ಸುಳ್ಳು ಹೇಳಿ ಹೀಗೆ ವೈಯಕ್ತಿಕ ಮಾಹಿತಿಯನ್ನು ಪಡೆಯುವುದು ತಪ್ಪು. ಪಡೆದ ಮಾಹಿತಿಯನ್ನು ಬೇರೊಂದು ಉದ್ದೇಶಕ್ಕೆ ಬಳಸಿಕೊಳ್ಳುವುದು ಇನ್ನೂ ದೊಡ್ಡ ತಪ್ಪು. ಇದು ಪರೋಕ್ಷವಾಗಿ ವಂಚನೆ ಮಾಡಿದಂತಾಗುತ್ತದೆ. ಈ ಬಗ್ಗೆ ತಕ್ಷಣ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಮತದಾರರೂ ಈ ಬಗ್ಗೆ ಜಾಗೃತಿ ವಹಿಸಬೇಕು ಎಂದು ವಿವಿಧ ಸಿವಿಕ್‌ ಸಂಘಟನೆಗಳ ಪದಾಧಿಕಾರಿಗಳು ತಿಳಿಸುತ್ತಾರೆ.

ಈ ರೀತಿ ಮಾಡುವುದು ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆ. ಇಂತಹ ಘಟನೆಗಳು ಗಮನಕ್ಕೆ ಬಂದರೆ, ಸಾರ್ವಜನಿಕರು ಮಾಹಿತಿ ನೀಡಬೇಕು. ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ಜಿಲ್ಲಾ ಚುನಾವಣಾ ವಿಚಕ್ಷಣ ಘಟಕಕ್ಕೆ ದೂರು ಸಲ್ಲಿಸಬಹುದು.
-ಎನ್‌.ಮಂಜುನಾಥ ಪ್ರಸಾದ್‌, ನಗರ ಜಿಲ್ಲಾ ಚುನಾವಣಾಧಿಕಾರಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next